ಫೋಟೋ- 27ಎಂವೈಎಸ್ 4- ಮೈಸೂರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮಾಜಿ ಮೇಯರ್ ಬಿ.ಎಲ್. ಬೈರಪ್ಪ ಮತ್ತು ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಅವರಿಗೆ ಕಾಂಗ್ರೆಸ್ ಬಾವುಟ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರದ ಅನುದಾನ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಬುಧವಾರ ನಡೆದ ಬಿಜೆಪಿ, ಜೆಡಿಎಸ್ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ಮೇಲೆ ನಂಬಿಕೆ ಇದ್ದರೆ ಪ್ರಮಾಣ ಮಾಡಲಿ ನೋಡೋಣ. ನನಗೆ ಆಣೆಯ ಮೇಲೆ ನಂಬಿಕೆ ಇಲ್ಲದಿದ್ದರೂ ಸತ್ಯ ಹೇಳುತ್ತಿದ್ದೇನೆ. ಗ್ಯಾರಂಟಿ ಯೋಜನೆಗೆ ಕೇಂದ್ರದಿಂದ ಒಂದು ಪೈಸೆ ಕೇಳಿಲ್ಲ. ನಮ್ಮ ಯೋಜನೆಗಳಿಗೆ 52,9000 ಕೋಟಿ ರೂ. ತೆಗೆದಿಡಲಾಗಿದೆ. ನಾವು ಗ್ಯಾರಂಟಿಗೆ ಹಣ ಮೀಸಲಿಟ್ಟು ಜಾರಿಗೊಳಿಸಿರುವ ಕಾರಣ ಅವರನ್ನು ಕೇಳಿಲ್ಲ ಎಂದು ಅವರು ಹೇಳಿದರು.
ಕರ್ನಾಟಕವನ್ನು ಮಲತಾಯಿ ಧೋರಣೆಯಿಂದ ನೋಡಲಾಗುತ್ತಿದೆ. ರಾಜ್ಯದ ಬಿಜೆಪಿ ನಾಯಕರು ಮೋದಿ ತಾಳಕ್ಕೆ ಕುಣಿದು ರಾಜ್ಯಕ್ಕೆ ಮಹಾ ದ್ರೋಹ ಬಗೆದಿದ್ದಾರೆ. ಒಂದು ತಿಂಗಳಲ್ಲಿ ಪರಿಹಾರ ಕೊಡಬೇಕಾದರೂ ಅನ್ಯಾಯ ಮಾಡಿರುವ ಕಾರಣ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ ಎಂದರು.
ಮೋದಿ ಹೇಳಿದ ಅಚ್ಚೇ ದಿನಾ ಆಯೇಂಗಾ ಎಲ್ಲಿಗೆ ಬಂದಿತು? ಪೆಟ್ರೋಲ್ ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಐದು ಟ್ರಿಲಿಯನ್ ಅರ್ಥಿಕತೆ ಮಾಡುವುದಾಗಿ ಹೇಳಿ, ಮಾಡಲಿಲ್ಲ. ನುಡಿದಂತೆ ನಡೆಯದ ಮೋದಿ ಸರ್ಕಾರವನ್ನು ಸೋಲಿಸಬೇಕು. ಆದ್ದರಿಂದ ನಾವು ಬಿಜೆಪಿಯವರಂತೆ ಸುಳ್ಳು ಹೇಳದೆ ಮಾಡಿರುವ ಕೆಲಸಗಳ ಸತ್ಯವನ್ನು ಮನೆ ಮನೆಗೆ ತಿಳಿಸಬೇಕು ಎಂದು ಅವರು ಹೇಳಿದರು.
ಜೆಡಿಎಸ್ಈಗ ಜಾತ್ಯಾತೀತವಾಗಿಲ್ಲ. ಮೋದಿ ಪ್ರಧಾನಿಯಾದರೆ ದೇಶ ಬಿಡುವುದಾಗಿ ಹೇಳಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಗ ಮೋದಿ ಜೊತೆ ಕೈ ಜೋಡಿಸಿದ್ದಾರೆ. ಇದೊಂದು ಅನುಕೂಲಸಿಂಧು ರಾಜಕಾರಣವಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು- ಬೆಂಗಳೂರು ಹೆದ್ದಾರಿ ಮಾಡಿದ್ದು ನಾವು, ಜಿಲ್ಲಾಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದು ನಾವು, ಆದರೆ ಪ್ರತಾಪ ಸಿಂಹ ನಾನು ಮಾಡಿದೆ ಅಂತ ಹೇಳುತ್ತಿದ್ದಾರೆ. ಇದು ಬರೀ ಪ್ರಲಾಪ. ನಮ್ಮ ಅವಧಿಯಲ್ಲಿ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡವನ್ನು ಪುನರ್ ನಿರ್ಮಾಣಕ್ಕೆ ತೀರ್ಮಾನಿಸಿದ್ದೇವೆ ಎಂದರು.