ಕನ್ನಡಪ್ರಭ ವಾರ್ತೆ ಬಳ್ಳಾರಿ
ಜಿಲ್ಲೆಯಲ್ಲಿ ಅಂಧ ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ಇಲ್ಲ. ಸರ್ಕಾರ ಭೂಮಿ ನೀಡಿದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ಸ್ವಂತದ ಹಣದಲ್ಲಿ ಕಟ್ಟಿಸಿ ಸರ್ಕಾರಕ್ಕೆ ನೀಡುವೆ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಮನವಿ ಮಾಡಿದ್ದಾರೆ.ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಮೇಲ್ಮನೆಯ ಪ್ರಶ್ನೋತ್ತರ ಕಲಾಪದಲ್ಲಿ, ಅಂಗವಿಕಲರ ಮಾಸಾಶನ ಹೆಚ್ಚಳದ ವಿಷಯ ಪ್ರಸ್ತಾಪಿಸಿ, ಬಳ್ಳಾರಿಯಲ್ಲಿ ಅಂಧ ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ಇಲ್ಲ. ಸರ್ಕಾರ ನಿವೇಶನವನ್ನು ನೀಡಿದಲ್ಲಿ ಸ್ವಂತದ ಹಣದಲ್ಲಿ ಆಧುನಿಕವಾದ - ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಸರ್ಕಾರಕ್ಕೆ ನೀಡುವೆ ಎಂದು ಕಲಾಪಕ್ಕೆ ತಿಳಿಸಿದರು.
ಸರ್ಕಾರ ಪರಿಣಿತ, ತಜ್ಞ ಮತ್ತು ಅರ್ಹ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಅಗತ್ಯವಿದ್ದಲ್ಲಿ ಸಿಬ್ಬಂದಿಯ ನೇಮಕಾತಿಯಲ್ಲೂ ಸರ್ಕಾರಕ್ಕೆ ನೆರವಾಗುವೆ ಎಂದಾಗ, ಸದನದಲ್ಲಿದ್ದ ಎಲ್ಲ ಸದಸ್ಯರು ಶಾಸಕರ ಸೇವಾ ಮನೋಭಾವನ್ನು ಮುಕ್ತಕಂಠದಿಂದ ಪ್ರಶಂಸಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.ಅಂಗವಿಕಲರ ದೈಹಿಕ ನ್ಯೂನತೆಯ ಪ್ರಮಾಣ ಆಧರಿಸಿ ಸರ್ಕಾರ ಅವರಿಗೆ ಮಾಸಿಕ ₹600, ₹800 ಮತ್ತು ₹1000 ಗೌರವ ಮಾಸಾಶನವನ್ನು ಪಾವತಿಸುತ್ತಿದೆ. ಈ ಮೊತ್ತದಿಂದ ಅಂಗವಿಕಲರು ಇಂದಿನ ದಿನಮಾನಗಳಲ್ಲಿ ಗೌರವಯುತವಾಗಿ ಜೀವನ ನಡೆಸಲು ಸಾಧ್ಯವಿಲ್ಲ. ಅಂಗವಿಕಲ ಮಗನ ಪೋಷಕನಾಗಿ ಅಂತಹ ಮಗುವಿನ ಆರೈಕೆಯಲ್ಲಿರುವ ಸವಾಲುಗಳು ನನಗೆ ಚೆನ್ನಾಗಿ ಅನುಭವಕ್ಕೆ ಬಂದಿವೆ. ನನ್ನ ಮಗನು ನನಗೇನು ಸಮಸ್ಯೆ ಆಗಿಲ್ಲ. ಆದರೆ, ಆರ್ಥಿಕ ಸಂಕಷ್ಟದಲ್ಲಿರುವ ಅಂಗವಿಕಲರ ಪೋಷಕರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಈ ವಿಚಾರವನ್ನು ಪ್ರಸ್ತಾಪ ಮಾಡಿರುವೆ ಎಂದರು.ಕರ್ನಾಟಕದಲ್ಲಿ ಅಂಗವಿಕಲರ ಸಂಖ್ಯೆ ಕಡಿಮೆ ಇದ್ದು, ಸರ್ಕಾರ ಮಾಸಾಶನದ ಮೊತ್ತವನ್ನು ಹತ್ತುಪಟ್ಟು ಹೆಚ್ಚಿಸಿದಲ್ಲಿ ಸರ್ಕಾರಕ್ಕೆ ಅಷ್ಟೇನು ಆರ್ಥಿಕ ಹೊರೆಯಾಗುವುದಿಲ್ಲ. ಹೆಚ್ಚಿನ ಮಾಸಾಶನ ಪಾವತಿಸಿ ರಾಜ್ಯದಲ್ಲಿರುವ ಅಂಗವಿಕಲರು ಗೌರವಯುತವಾಗಿ, ಅಭಿಮಾನದಿಂದ ಜೀವನ ನಡೆಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಬಳ್ಳಾರಿಯಲ್ಲಿರುವ ಮೂಗ ಮತ್ತು ಕಿವುಡ ವಿದ್ಯಾರ್ಥಿಗಳ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ. ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಈ ಕುರಿತು ತುರ್ತಾಗಿ ಕ್ರಮ ಕೈಗೊಳ್ಳಬೇಕು. ಈ ಶಾಲೆಯ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರ ತುರ್ತಾಗಿ ಕ್ರಮ ಕೈಗೊಂಡು ಶಿಕ್ಷಕರ ನೇಮಕಾತಿ, ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.