)
ಕನ್ನಡಪ್ರಭ ವಾರ್ತೆ ಕಲಬುರಗಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ದಲಿತ, ಬಲಿತ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಾನು ಕೋಟ್ ಹಾಕಿಕೊಂಡು ಕುಳಿತರೂ ಇವರಿಗಿಷ್ಟು ಕಣ್ಣು ಕುಕ್ಕುತ್ತೆ ಎನ್ನುವುದಾದರೆ ಇನ್ನೆರಡು ಕೋಟು ಹೊಲಿಸುತ್ತೇನೆ. ನಾನು ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದೇನೆ ಅಂದರೆ ಕುಮಾರಸ್ವಾಮಿ ರಕ್ತ ಕುದಿಯುತ್ತಿದ್ದು, ಮತ್ತೂ ಮಾತಾಡುತ್ತೇನೆ ಎಂದು ತಿವಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ದಲಿತರು ಐಟಿ ಮಿನಿಸ್ಟರ್, ದಲಿತರು ಹೋಂ ಮಿನಿಸ್ಟರ್ ಆದರೆ ಅವರಿಗೆ ರಕ್ತ ಕುದಿಯುತ್ತೆ ಅಂದರೆ 10 ಸೂಟ್ ಹೊಲಿಸಿ ಅವರ ರಕ್ತ ಕುದಿಸುತ್ತೇನೆ. ಏನ್ ಮಾಡ್ತೀರಿ ? ಮಣ್ಣಿನ ಮಕ್ಕಳು ಫಿಲಂ ಪ್ರೊಡ್ಯೂಸರ್ ಆಗಬಹುದು. ಮಣ್ಣಿನ ಮೊಮ್ಮಕ್ಕಳು ಜಾಗ್ವಾರ್ ಆಗಬಹುದು. ಮಣ್ಣಿನ ಮಕ್ಕಳು ಪ್ಯಾಂಟ್ ಶರ್ಟ್ ಹಾಕಬಹುದು. ದಲಿತರ ಮಕ್ಕಳು ಬಲಿತರು ಆಗಬಾರದಾ ? ಎಂದು ಪ್ರಶ್ನಿಸಿದರು.ಇಡೀ ರಾಜ್ಯದಲ್ಲಿ ಒಂದೇ ಒಂದು ಬುದ್ಧ ಮಂದಿರ ಇದ್ದು, ಅದೂ ಸಹ ನಮ್ಮ ಕುಟುಂಬದವರೇ ಕಷ್ಟಪಟ್ಟು ನಿರ್ಮಿಸಿದ್ದಾರೆ. ಅದನ್ನು ನೋಡಲು ಅವರಿಂದ ಆಗುತ್ತಿಲ್ಲ, ಅದೇನೋ ಅಕ್ರಮ ಅಂತ ಟೀಕಿಸುತ್ತಿದ್ದಾರೆ. ಹಾಗಾದರೆ ಇಡಿ, ಐಟಿ ಅವರ ಬಳಿಯೇ ಇದೆ. ನಮ್ಮ ಕುಟುಂಬದ ವಿರುದ್ಧ ಬಳಸಲಿ, ನೋಡೋಣ. ಒಂದೊಂದೂ ಪೈಸೆ ಕೂಡಾ ಲೆಕ್ಕವಿಟ್ಟು ಬುದ್ಧ ವಿಹಾರ ಮಾಡಿದ್ದೇವೆ ಎಂದರು.ದಲಿತರು ಉದ್ಧಾರ ಆಗಬಾರದಾ ? ಮಣ್ಣಿನ ಮಕ್ಕಳ ಹೆಸರು ಹೇಳಿಕೊಂಡು ಫಿಲಂ ಪ್ರೊಡ್ಯೂಸರ್ ಆದಿರಿ, ರಿಯಲ್ ಎಸ್ಟೇಟ್ ಮಾಲೀಕರಾದರಿ, ಏನೇನು ವಂಚನೆ ಮಾಡಬೇಕಾಗಿತ್ತು ಎಲ್ಲವೂ ಮಾಡಿದಿರಿ. ವೆಸ್ಟ್ ಎಂಡ್ನಿಂದ ಏನೇನು ಮಾಡಬೇಕಿತ್ತೋ ಮಾಡಿದ್ದೀರಿ. ಪ್ರಿಯಾಂಕ ಖರ್ಗೆ ಐಟಿ ಮಿನಿಸ್ಟರ್, ಹೋಂ ಮಿನಿಸ್ಟರ್, ಆದ್ರೆ ತ್ರಾಸಾ ? ಸೂಟ್ ಹಾಕಿಕೊಂಡು ಓಡಾಡುತ್ತಾನೆ ಅಂದ್ರೆ ದಲಿತ ಬಲಿತ ಅಂತಿರಾ ? ಎಂದು ಎಚ್ಡಿಕೆ ವಿರುದ್ಧ ಮಾತಿನ ಚಾಟಿ ಬೀಸಿದಿರು.*ಜನರಲ್ ಕಂಟೆಸ್ಟ್ಗೆ ಸಿದ್ಧ: ಜನರಲ್ನಲ್ಲಿ ಕಂಟೆಸ್ಟ್ ಮಾಡಲಿ ಅಂತ ಸವಾಲು ಹಾಕ್ತಿರಾ ? ಸ್ಪರ್ಧೆ ಮಾಡಲು ನಾನು ರೆಡಿ ಇದ್ದೇನೆ. ಆದರೆ ಜನರ ಮನಸ್ಥಿತಿ ಹಾಗಿದೆಯಾ? ಒಬ್ಬ ದಲಿತನ ಗೆಲ್ಲಿಸುವ ಮನಸ್ಥಿತಿ ನಮ್ಮ ಸಮಾಜದಲ್ಲಿ ಇದೆಯಾ? ಈಗಲೂ ಕೂಡ ರಾಷ್ಟ್ರಪತಿ ಮುರ್ಮುರನ್ನು ದೇವಸ್ಥಾನದೊಳಗೆ ಬಿಡುವುದಿಲ್ಲ. ಖರ್ಗೆ ಸಾಹೇಬರು ಉತ್ತರಖಂಡದಲ್ಲಿ ಭಾಷಣ ಮಾಡಿದಾಗ ಗೋಮೂತ್ರದಿಂದ ಶುಚಿ ಮಾಡುತ್ತಾರೆ ಎಂದು ವಿವರಿಸಿದರು.