ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ : ಪಾಕಿಸ್ತಾನ ತಕ್ಕ ಪಾಠ ಕಲಿಯುವವರೆಗೂ ಅಲ್ಲಿ ಉಗ್ರರು ಇದ್ದೇ ಇರುತ್ತಾರೆ. ಅವರನ್ನು ಮಟ್ಟ ಹಾಕಲು ಈಗ ಉತ್ತಮ ಸಮಯ ಬಂದಿದೆ. ನನಗೆ ಯಾವುದೇ ಸಂಬಳ ಬೇಡ. ನಾವು ಈಗಲೂ ಗಡಿಗೆ ತೆರಳಿ ಕೆಲಸ ಮಾಡಲು ಸಿದ್ಧರಿದ್ದೇವೆ.
- ಇದು ಭಾರತೀಯ ಸೇನೆಯಲ್ಲಿ ಸುಮಾರು 24 ವರ್ಷ ಕೆಲಸ ಮಾಡಿದ್ದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕೆ.ಜಿ. ಉತ್ತಯ್ಯ ಅವರ ಅಭಿಪ್ರಾಯ.
ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಲ್ಲಿ ಹೆಚ್ಚು ಸೇನೆಯನ್ನು ನಿಯೋಜಿಸಿರಲಿಲ್ಲ. ಇದರಿಂದ ಪಹಲ್ಗಾಮ್ ನಲ್ಲಿ ಉಗ್ರರು ಸಮಯ ಬಳಸಿಕೊಂಡು ಧರ್ಮ ಕೇಳಿಕೊಂಡು ಸುಮಾರು 26 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಇದನ್ನು ನೆನಪಿಸಿಕೊಂಡರೆ ನಾನು ಗಡಿಯಲ್ಲಿಯೇ ಇರಬೇಕೆಂದು ನನ್ನ ಮನಸ್ಸು ಈಗಲೂ ಹೇಳುತ್ತಿದೆ.
ಪಾಕಿಸ್ತಾನ ನಮ್ಮ ಕಾಶ್ಮೀರವನ್ನು ಎರಡು ಭಾಗ ಮಾಡಲು ಹೊರಟಿದೆ. ಇದು ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇದರಿಂದಲೇ ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡಿಕೊಂಡು ಬಂದಿದೆ. ಇದಕ್ಕೆ ಮಟ್ಟ ಹಾಕುವ ಕಾಲ ಬಂದಿದ್ದು, ಆದಷ್ಟು ಬೇಗ ಉಗ್ರರನ್ನು ಸಂಪೂರ್ಣ ನಿರ್ಣಾಮ ಮಾಡಬೇಕು. ಇಲ್ಲದಿದ್ದರೆ ಪಹಲ್ಗಾಮ್ ನಲ್ಲಿ ನಡೆದ ಪರಿಸ್ಥಿತಿ ಮತ್ತೆ ಮತ್ತೆ ಮರುಕಳಿಸುವ ಸಾಧ್ಯತೆಯಿದೆ ಎನ್ನುತ್ತಾರೆ ಉತ್ತಯ್ಯ.
ಪಾಕಿಸ್ತಾನಕ್ಕೆ ಕಾಶ್ಮೀರ ನಮ್ಮದು ಎಂದು ಹೇಳಲು ಯಾವುದೇ ದಾಖಲೆ ಇಲ್ಲ. ಆದರೂ ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ವಿಫಲ ಯತ್ನದಲ್ಲಿ ತೊಡಗಿದ್ದಾರೆ. ಇಂತಹ ಕೃತ್ಯಗಳನ್ನು ಭಾರತೀಯ ಸೇನೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇದಕ್ಕೆ ಈಗಾಗಲೇ ನಮ್ಮ ಸೇನೆ ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಉತ್ತಯ್ಯ ಹೆಮ್ಮೆಯಿಂದ ಹೇಳಿದರು.
ನಮ್ಮ ದೇಶದ ಸೇನೆಯಲ್ಲಿ ಅತ್ಯುಧುನಿಕವಾದ ಶಸ್ತ್ರಾಸ್ತ್ರಗಳಿವೆ. ಇದರಿಂದ ನಮ್ಮ ಸೇನೆ ತುಂಬಾ ಬಲಿಷ್ಠವಾಗಿದೆ. ಈಗಾಗಲೇ ಹಲವು ಡ್ರೋಣ್ ಗಳನ್ನು ಹೊಡೆದುರುಳಿಸಲಾಗಿದ್ದು, ಏರ್ ಡಿಫೆನ್ಸ್ ಸಿಸ್ಟಮ್ ಕೂಡ ಚನ್ನಾಗಿದೆ. ಮತ್ತೆ ಉಗ್ರರ ದಾಳಿಯಾದರೆ ನಮ್ಮ ದೇಶ ತಕ್ಕ ಉತ್ತರ ನೀಡುತ್ತಿದೆ. ಪಾಕಿಸ್ತಾನಕ್ಕೆ ಯುದ್ಧ ಮಾಡಲು ಸಾಕಷ್ಟು ಶಸ್ತ್ರಾಸ್ತ್ರಗಳಿಲ್ಲ. ಎರಡು ದಿನ ಮಾತ್ರ ಆ ದೇಶ ಯುದ್ಧವನ್ನು ಎದುರಿಸಲು ಸಾಧ್ಯ. ಆ ದೇಶ ಈಗಾಗಲೇ ದಿವಾಳಿಯಾಗಿದೆ ಎಂದು ಹೇಳುತ್ತಾರೆ.
ಇದೀಗ ಕದನ ವಿರಾಮ ಹಾಕಿರುವುದು ಒಳ್ಳೆಯ ಬೆಳವಣಿಗೆ. ಇನ್ನು ಮುಂದೆ ಪಾಕಿಸ್ತಾನಕ್ಕೆ ಈ ಕೃತ್ಯಕ್ಕೆ ಕೈ ಹಾಕುವುದು ಬೇಡ. ಈಗಾಗಲೇ ನಾವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ ಎಂದರು.
ಕಾಶ್ಮೀರದಲ್ಲಿ ಭಾರತೀಯ ಸೈನಿಕರನ್ನು ಹೆಚ್ಚು ನಿಯೋಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು. ಯಾವ ಉಗ್ರರನ್ನೂ ಕೂಡ ದೇಶದೊಳಗೆ ನುಸುಳಲು ಬಿಡಬಾರದು. ನಾವು ನಮ್ಮ ಪ್ರಜೆಗಳಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದೆ ಎನ್ನುತ್ತಾರೆ ಉತ್ತಯ್ಯ.
ನಮ್ಮ ಸ್ನೇಹಿತರ ತಂಡ ರೆಡಿ ಇದೆ!
ಪಹಲ್ಗಾಮ್ ನಲ್ಲಿ ನಮ್ಮ ದೇಶದ ನಾಗರೀಕರನ್ನು ಹತ್ಯೆ ಮಾಡಿರುವುದು ನಮಗೆ ತೀವ್ರ ಬೇಸರ ತರಿಸಿದೆ. ಆ ಕ್ಷಣ ನಾವು ಅಲ್ಲಿ ಇರಬೇಕೆಂದು ಅನಿಸುತ್ತಿದೆ. ನಮಗೆ ಯಾವುದೇ ಸಂಬಳ ಬೇಡ. ನಾವು ಕೆಲಸ ಮಾಡಿದ್ದ ಬೆಟಾಲಿಯನ್‌ನಲ್ಲಿದ್ದವರ ಸಂಪರ್ಕದಲ್ಲಿದ್ದೇವೆ. ನನ್ನನ್ನೂ ಸೇರಿದಂತೆ ಉತ್ತರ ಪ್ರದೇಶದ ಹಲವು ಮಾಜಿ ಯೋಧರು ಈಗಲೂ ಗಡಿಯಲ್ಲಿ ಕೆಲಸ ಮಾಡಲು ತಯಾರಿದ್ದೇವೆ. ನಮಗೆ ಅವಕಾಶ ನೀಡಿದರೆ ಎಂದಿಗೂ ನಾವು ಸೇವೆಗೆ ಸಿದ್ಧ ಎಂದು ಉತ್ತಯ್ಯ ಭಾರತೀಯ ಸೇನೆಯಲ್ಲಿ ಮತ್ತೆ ಕೆಲಸ ಮಾಡಲು ಹೆಮ್ಮೆಯಿಂದ ಹೇಳುತ್ತಾರೆ.