ಸರ್ಕಾರ ಮೀಸಲಾತಿ ಪಟ್ಟಿ ನೀಡಿದರೆ ಸ್ಥಳೀಯ ಚುನಾವಣೆ ನಡೆಸಲು ಸಿದ್ಧ: ಚುನಾವಣಾ ಆಯುಕ್ತ ಜಿ.ಎನ್.ಸಂಗ್ರೇಶಿ

KannadaprabhaNewsNetwork |  
Published : Sep 08, 2025, 01:00 AM IST
7ಕೆಜಿಎಫ್‌1 | Kannada Prabha

ಸಾರಾಂಶ

ಕ್ಷೇತ್ರ ಪುನರ್ ವಿಂಗಡಣಾ ಕಾರ್ಯ ಇನ್ನೂ ಬಾಕಿಯಿದೆ, ಮೀಸಲಾತಿ ಪಟ್ಟಿಯನ್ನು ತಯಾರಿಸಬೇಕಾಗಿರುವುದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ವ್ಯವಹಾರವನ್ನೂ ಸಹ ಚುನಾವಣಾ ಆಯೋಗದಿಂದ ನಡೆಸಲಾಗಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಸ್ಥಳೀಯ ಚುನಾವಣೆಗಳ ಮೀಸಲಾತಿ ಪಟ್ಟಿ, ಕ್ಷೇತ್ರ ವಿಂಗಡಣೆ ಎಲ್ಲವನ್ನೂ ಸರ್ಕಾರ ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳ ಒಳಗೆ ನೀಡಿದರೆ ಸ್ಥಳೀಯ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ನಗರಸಭೆ ಚುನಾವಣೆಗಳನ್ನು ನಡೆಸಲು ಚುನಾವಣೆ ಆಯೋಗ ಸಿದ್ಧವಿರುವುದಾಗಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎನ್.ಸಂಗ್ರೇಶಿ ಹೇಳಿದರು.

ಪ್ರಸಿದ್ಧ ಕೋಟಿ ಲಿಂಗೇಶ್ವರ ದೇವಾಲಯ ಹಾಗೂ ಕೆಜಿಎಫ್ ಚಿನ್ನದ ಗಣಿಗಳ ಪ್ರದೇಶದ ವೀಕ್ಷಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವಿಎಂ ಯಂತ್ರ ಮತ್ತು ಬ್ಯಾಲೆಟ್ ಪೇಪರ್‌ಗಳನ್ನು ಬಳಸಿಕೊಂಡು ಚುನಾವಣೆ ನಡೆಸಲು ಅವಕಾಶವಿದ್ದು, ಇವೆರಡರಲ್ಲಿ ಯಾವುದರ ಮೂಲಕ ಚುನಾವಣೆ ನಡೆಸಬೇಕೆಂಬುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ಹೇಳಿದರು.

ಒಂದು ವೇಳೆ ಬ್ಯಾಲೆಟ್ ಪೇಪರ್ ಬಳಸಿಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿದಲ್ಲಿ ಮುಂದಿನ ದಿನಗಳಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಿಗೂ ಬ್ಯಾಲೆಟ್ ಪೇಪರ್ ಮೂಲಕವೇ ನಡೆಸಲಾಗುತ್ತದೆಯೇ ಎಂಬ ಪ್ರಶ್ನೆಗೆ, ಅದು ಕೇಂದ್ರ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದಾಗಿದ್ದು, ತಮ್ಮ ವ್ಯಾಪ್ತಿಗೆ ಕೇವಲ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮಾತ್ರ ಬರುತ್ತವೆ ಎಂದರು.

ಕ್ಷೇತ್ರ ಪುನರ್ ವಿಂಗಡಣಾ ಕಾರ್ಯ ಇನ್ನೂ ಬಾಕಿಯಿದೆ, ಮೀಸಲಾತಿ ಪಟ್ಟಿಯನ್ನು ತಯಾರಿಸಬೇಕಾಗಿರುವುದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ವ್ಯವಹಾರವನ್ನೂ ಸಹ ಚುನಾವಣಾ ಆಯೋಗದಿಂದ ನಡೆಸಲಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸರ್ಕಾರ ಮೂರು ತಿಂಗಳ ಕಾಲಾವಧಿಯನ್ನು ತೆಗೆದುಕೊಂಡಿದೆ. ಕೆಲವು ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿವೆ. ನಗರಸಭೆ, ಪುರಸಭೆಗಳ ವ್ಯಾಪ್ತಿಗೆ ಒಂದಷ್ಟು ಹಳ್ಳಿಗಳು ಕೂಡಿಕೊಂಡಿದ್ದರಿಂದ ಮತ್ತೆ ಕ್ಷೇತ್ರ ಪುನರ್ ವಿಂಗಡಣಾ ಕಾರ್ಯ ಮಾಡಬೇಕಾಗಿದೆ. ರಾಜ್ಯದ ಸುಮಾರು ೧೧- ೧೨ ಜಿಲ್ಲೆಗಳಲ್ಲಿ ಈ ಪ್ರಯೋಗವಾಗಬೇಕಾಗಿದೆ ಎಂದು ತಿಳಿಸಿದರು.

ಜಿಪಂ ಕ್ಷೇತ್ರಗಳು ಮತ್ತು ತಾಪಂ ಕ್ಷೇತ್ರಗಳು ಹೆಚ್ಚಾಗಿರುವುದರಿಂದ ಈಗಾಗಲೇ ೨೦೨೩ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿರುವುದರಿಂದ ಈ ಎಲ್ಲ ಕ್ಷೇತ್ರಗಳಿಗೆ ಮೀಸಲಾತಿ ಪಟ್ಟಿಯನ್ನು ಸರ್ಕಾರದ ವತಿಯಿಂದ ನೀಡಬೇಕಾಗಿದೆ. ಹೊಸದಾಗಿ ಸೃಷ್ಟಿಯಾಗಿರುವ ಜಿಪಂ ಮತ್ತು ತಾಪಂ ಕ್ಷೇತ್ರಗಳಲ್ಲಿ ಹಳೆಯ ಮೀಸಲಾತಿಯನ್ನಿಟ್ಟುಕೊಂಡು ಚುನಾವಣೆ ನಡೆಸಲಾಗುವುದಿಲ್ಲ. ಉಳಿದಂತೆ ೧೯೨ ನಗರಸಭೆ ಮತ್ತು ಪುರಸಭೆಗಳಿಗೆ ಹೊಸ ಮೀಸಲಾತಿ ಪಟ್ಟಿಯನ್ನು ನೀಡದೇ ಇದ್ದಲ್ಲಿ ಹಳೆಯ ಮೀಸಲಾತಿಯಂತೆಯೇ ಚುನಾವಣೆ ನಡೆಸಲಾಗುತ್ತದೆ ಎಂದರು.

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸುವಂತೆ ಚುನಾವಣಾ ಆಯೋಗದ ವತಿಯಿಂದಲೂ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ನವೆಂಬರ್ ಒಂದನೇ ತಾರೀಖಿಗೆ ಅವರು ಕ್ಷೇತ್ರ ಪುನರ್ ವಿಂಗಡಣೆ ವರದಿಯನ್ನು ಸಲ್ಲಿಸಬೇಕು. ನವೆಂಬರ್ ೩೦ಕ್ಕೆ ಮೀಸಲಾತಿ ಪಟ್ಟಿಯನ್ನು ನೀಡಬೇಕು. ಆ ಬಳಿಕ ನಮಗೆ ಮೂರ‍್ನಾಲ್ಕು ತಿಂಗಳ ಕಾಲಾವಧಿ ಬೇಕೆಂದು ತಿಳಿಸಿದ್ದೇವೆ. ಸುಪ್ರೀಂ ಕೋರ್ಟ್ ಸಹ ಇದಕ್ಕೆ ಅನುಮತಿ ನೀಡಿದೆ. ಮುಂದಿನ ವರ್ಷದ ಜನವರಿ ಮತ್ತು ಫೆಬ್ರವರಿ ಒಳಗೆ ಇದೆಲ್ಲ ಕಾರ್ಯ ಮುಗಿಸಬೇಕಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರ್ದು ಮುಸ್ಲಿಂರಿಗಷ್ಟೇ ಸೀಮಿತವಲ್ಲ ಜನಸಾಮಾನ್ಯರ ಭಾಷೆ
2 ಕೋಟಿ ವಂಚನೆ ಪ್ರಕರಣ: ಶರವಣ ಅಂದರ್