ಕುರುಗೋಡು: ಭೌತಿಕ ಸಂಪತ್ತು ಮನುಷ್ಯರ ಮಧ್ಯೆ ಮೇಲು, ಕೀಳು ಮನೋಭಾವ ಸೃಷ್ಟಿಸುತ್ತದೆ. ಮನುಷ್ಯ ಜೀವನದ ಸತ್ಯ ಅರಿತುಕೊಳ್ಳುವುದು ನಿಜವಾದ ಸಂಪತ್ತು ಎಂದು ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಗುರುಪರಂಪರೆಯ ವಿರಕ್ತಮಠದ ಬಸವಲಿಂಗ ಶ್ರೀಗಳು ಅಭಿಪ್ರಾಯಪಟ್ಟರು.
ಶಕ್ತಿ, ಜ್ಞಾನ ಮತ್ತು ಸಂಪತ್ತು ಸದುಪಯೋಗಪಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದು ಕಲಿಸಲು ದೇವಿಪುರಾಣ ಶ್ರವಣ ಸಹಕಾರಿಯಾಗಲಿದೆ ಎಂದರು.
ಕೊಟ್ಟೂರು ಸ್ವಾಮಿ ಸಂಸ್ಥಾನ ಶಾಖಾ ವಿರಕ್ತಮಠದ ನಿರಂಜನ ಪ್ರಭು ಶ್ರಿಗಳು ಮಾತನಾಡಿ, ಪುರಾಣದಲ್ಲಿ ದೇವಿಯ ಶಕ್ತಿ ವಿಮರ್ಶೆ ಮಾಡದೇ ನಿರ್ಲಿಪ್ತಭಾವ ತಾಳಿ ನಮ್ಮ ದೇಹದ ವಿಮರ್ಶೆ ಮಾಡಿಕೊಂಡರೆ ಮಾತ್ರ ಮನುಷ್ಯರು ಖುಷಿಯಿಂದಿರಲು ಸಾಧ್ಯ. ಅವಿಭಕ್ತ ಕುಟುಂಬಗಳಿದ್ದ ದಿನಮಾನಗಳಲ್ಲಿ ಜನರಲ್ಲಿ ಜ್ಞಾನದ ದಾಹವಿತ್ತು. ಇಂದು ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಒಬ್ಬಂಟಿ ಜೀವನ ಸಾಜಿಸುತ್ತಿರುವವರಲ್ಲಿ ಹಣ ಗಳಿಕೆಯ ದಾಹ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು.ಒಂದು ಗ್ರಾಮದ ಸುಂದರ ಕಟ್ಟಡಗಳಿಂದ ಶ್ರೀಮಂತವಾಗಿದೆ ಎಂದು ಹೇಳುವುದಕ್ಕಿಂತ ಸಂಸ್ಕತಿ ಮತ್ತು ಸಂಸ್ಕಾರದಿಂದ ಶ್ರೀಮಂತವಾಗಿದೆ ಎಂದು ಹೇಳುವುದು ಹರ್ಷದಾಯಕ ಎಂದರು.