ಹಾನಗಲ್ಲ: ಭಾರೀ ಬರಗಾಲದ ವೇದನೆಯಲ್ಲಿರುವ ಜನತೆ ಈಗಲಾದರೂ ಎಚ್ಚೆತ್ತು ನೀರಿನ ಮಹತ್ವ ಅರಿತು ಜಲರಕ್ಷಣೆ, ಜಲ ಮರುಪೂರಣಕ್ಕೆ ಆದ್ಯತೆ ನೀಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾವೇರಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ತಿಳಿಸಿದರು.
ಹಾನಗಲ್ಲ ತಾಲೂಕಿನ ಮಾರನಬೀಡ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆ ರಾಜ್ಯದ 731 ನೇ ಕೆರೆಯೊಂದನ್ನು ಹೂಳೆತ್ತುವ ಕಾರ್ಯಕ್ರಮಕ್ಕೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನೀರು ಉತ್ಪಾದಿಸುವಂತಹದ್ದಲ್ಲ. ಅದು ಪ್ರಕೃತಿಯಿಂದ ಪಡೆಯುವಂತಹದ್ದು. ಪ್ರಕೃತಿ ಮುನಿಸಿಗೆ ಪ್ರಕೃತಿಯ ನಾಶವೇ ಕಾರಣವಾಗಿದೆ. ಮನುಷ್ಯ ತನ್ನ ಅತಿಯಾಸೆ ಈಡೇರಿಸಿಕೊಳ್ಳಲು ಎಲ್ಲವನ್ನು ಯಥೇಚ್ಚವಾಗಿ ಬಳಸಿ, ದುರುಪಯೋಗಕ್ಕೂ ಕಾರಣವಾಗುತ್ತಿದ್ದಾನೆ.
ನೀರು ಉಳಿಸುವ ಸಂಸ್ಕೃತಿ ನಮ್ಮದಾಗುತ್ತಿಲ್ಲ. ಗಿಡ ಮರಗಳನ್ನು ಕಡಿದು ಕಾಡನ್ನು ಬೆಂಗಾಡು ಮಾಡಲಾಗುತ್ತಿದೆ. ನಮಗಾಗಿಯೇ ಇರುವ ಪ್ರಕೃತಿಯನ್ನು ನಮಗಾಗಿ ಉಳಿಸುವ ಸಂಕಲ್ಪ ಎಲ್ಲದಾಗಬೇಕು. ಹಿತ ಮಿತ ಬಳಕೆ ನಾಳೆಗಾಗಿ ಉಳಿಕೆ ಎಂಬ ಸತ್ಯ ಸಂಗತಿಯ ಅರಿವಾಗಿ ಅದರಂತೆ ನಡೆದರೆ ನೀರು ಉಳೀದೀತು. ಇಲ್ಲವಾದರೆ ಯಾವುದೇ ಶ್ರೀಮಂತಿಕೆ ಇದ್ದರೂ ನೀರಿಲ್ಲದೆ ಬದುಕು ಕಳೆದುಕೊಳ್ಳುವ ಸ್ಥಿತಿ ಬಂದೀತು ಎಂದು ಎಚ್ಚರಿಸಿ, ಈ ಕೆರೆ ಹೂಳೆತ್ತುವ ಕಾರ್ಯ ಗ್ರಾಮಸ್ಥರ ಸಹಕಾರದೊಂದಿಗೆ ನಮಗಾಗಿ ನಮ್ಮ ಕೆರೆ ಎಂಬ ಸದಭಿಪ್ರಾಯದಲ್ಲಿ ಮುನ್ನಡೆಯಲಿ. ಇದು ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದರು.
ಕೆರೆ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ನಿಂಗಪ್ಪ ಚಂಗಮ್ಮನವರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮಗಳ ಕೆರೆಗಳನ್ನು ಹೂಳೆತ್ತುವ, ಅಭಿವೃದ್ಧಿಪಡಿಸುವ ಕಾರ್ಯ ನಿಜಕ್ಕೂ ಸ್ಫೂರ್ತಿದಾಯಕವಾದುದು. ಗ್ರಾಮಸ್ಥರ ಸಹಭಾಗಿತ್ವವನ್ನು ಒಳಗೊಂಡು ಈ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸುತ್ತೇವೆ. ಬರದಿಂದಾಗಿ ಈಗ ನಮ್ಮ ಕೆರೆಗಳು, ನೀರಿನ ಎಲ್ಲ ಜಲಮೂಲಗಳ ಮಹತ್ವ ಅರ್ಥವಾಗಿದೆ. ನಾಳೆಗಾಗಿ ನಮ್ಮ ಕೃಷಿ ಕೆರೆಗಳನ್ನು ಉಳಿಸಿಕೊಳ್ಳಲು ಸಂಕಲ್ಪ ಮಾಡುತ್ತೇವೆ ಎಂದರು.ಕಾರ್ಯಕ್ರಮದಲ್ಲಿ ಕೆರೆ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಈರಪ್ಪ ಜಾಡರ, ಅಧ್ಯಕ್ಷ ಮಲ್ಲೆಶಪ್ಪ ನೆರ್ಕಿಮನಿ, ಅಶೋಕ ಸಂಸಿ, ದೇವಸ್ಥಾನದ ಅರ್ಚಕರಾದ ಸಿದ್ದಪ್ಪ ಪೂಜಾರ, ಶ್ರೀಕಾಂತಗೌಡ ಪಾಟೀಲ, ಒಕ್ಕೂಟದ ಅಧ್ಯಕ್ಷರಾದ ಸರೋಜಾ ಚೆಂಗಮ್ಮನವರ, ಕೃಷಿ ಅಧಿಕಾರಿ ಮಹಾಂತೇಶ ಹರಕುಣಿ, ಸೇವಾ ಪ್ರತಿನಿಧಿ ಪ್ರೇಮಾ ಪಾಲ್ಗೊಂಡಿದ್ದರು.