ಗ್ರಾಮಾಭಿವೃದ್ಧಿ ಕನಸನ್ನು ನನಸಿಗೆ ಯುವಕರಲ್ಲಿ ಜಾಗೃತಿ ಅಗತ್ಯ

KannadaprabhaNewsNetwork | Published : Aug 8, 2024 1:32 AM

ಸಾರಾಂಶ

ಕಡೂರು.ಗ್ರಾಮಾಭಿವೃದ್ಧಿ ಕನಸನ್ನು ನನಸು ಮಾಡುವಲ್ಲಿ ಯುವಕರು ಜಾಗೃತರಾಗಬೇಕು ಎಂದು ಚಿಕ್ಕಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶನಾಯ್ಕ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು.

ಗ್ರಾಮಾಭಿವೃದ್ಧಿ ಕನಸನ್ನು ನನಸು ಮಾಡುವಲ್ಲಿ ಯುವಕರು ಜಾಗೃತರಾಗಬೇಕು ಎಂದು ಚಿಕ್ಕಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶನಾಯ್ಕ ಹೇಳಿದರು.

ಚಿಕ್ಕಂಗಳ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿ ಗ್ರಾಮಗಳ ಅಭಿವೃದ್ಧಿಯಾಗುವುದು ಗ್ರಾಮಸ್ಥರ ಒಗ್ಗಟ್ಟಿನಿಂದ ಮಾತ್ರ. ಪರಸ್ಪರ ಸೌಹಾರ್ಧತೆಯಿಂದ ವೈಯುಕ್ತಿಕ ಹಿತಾಸಕ್ತಿ ಬದಿಗಿಟ್ಟು ಒಟ್ಟಾಗಿ ಚಿಂತನೆ ನಡೆಸಿದರೆ ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳುತ್ತವೆ. ಅದಕ್ಕೆ ನಮ್ಮ ಗ್ರಾಮವೇ ಸಾಕ್ಷಿ. ನರೇಗಾ ಯೋಜನೆಯಡಿ 20 ಲಕ್ಷ ರು. ಮತ್ತು 15 ನೇ ಹಣಕಾಸು ಯೋಜನೆಯಲ್ಲಿ 15 ಲಕ್ಷರೂ ಹಣ ಗ್ರಾಮಪಂಚಾಯಿತಿ ಕಟ್ಟಡಕ್ಕಾಗಿ ಮೀಸಲಿಟ್ಟಿದ್ದು ಒಟ್ಟು 35 ಲಕ್ಷ ವೆಚ್ಚ ರು.ನಲ್ಲಿ ಗ್ರಾಮಪಂಚಾಯಿತಿ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದರು.

ಗ್ರಾಮಕ್ಕೆ ಕಿರು ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ 65 ಲಕ್ಷ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಶೀಘ್ರವೇ ಆ ಕೆಲಸವೂ ಆರಂಭಗೊಳ್ಳುತ್ತದೆ. ಗ್ರಾಮದ ಕೆರೆ ತುಂಬಿರುವುದು ಕೃಷಿಕರಿಗೆ ಧೈರ್ಯ ಹೆಚ್ಚಿದ್ದು ಅಂತರ್ಜಲ ಕೂಡ ವೃದ್ದಿಯಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ನನ್ನ ಗುರಿ. ಅದನ್ನು ಸಾಕಾರಗೊಳಿಸುವಲ್ಲಿ ನನ್ನ ಶ್ರಮ ನಿರಂತರ ಎಂದರು.

ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿನ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಚರ್ಚೆ ನಡೆಯಿತು. ಕೆಲ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಮಳೆ ಹೆಚ್ಚಾಗಿ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆಯಲ್ಲಿರುವುದರಿಂದ ಆಕ್ಷೇಪಣೆ ಮಾಡಬಾರದು ಎಂದು ಪ್ರಕಾಶ್ ನಾಯ್ಕ ಸಮಾಧಾನ ಪಡಿಸಿದರು.

ಈ ಸಂದರ್ಭದಲ್ಲಿ ಪಂಚಾಯಿತಿ ಪಿಡಿಒ ಚಂದ್ರಪ್ಪ, ಸದಸ್ಯರಾದ ಲತಾ ಹರೀಶ್, ಜಯಾಬಾಯಿ, ಷಡಾಕ್ಷರಿ, ಪ್ರಕಾಶ್, ಸುನಿತಾ, ಮುಖಂಡರಾರ ಸಗುನಪ್ಪ, ನಿಂಗಾನಾಯ್ಕ, ಲಕ್ಷ್ಮಿನಾರಾಯಣ, ರವಿಕುಮಾರ್, ಗಂಗಣ್ಣ, ಆನಂದ್ ನಾಯ್ಕ ಇದ್ದರು.7ಕೆೆಕೆಡಿಯು1 ಚಿಕ್ಕಂಗಳ ಗ್ರಾಮದಲ್ಲಿ ಪಂಚಾಯಿತಿ ಅಧ್ಯಕ್ಷ ಪ್ರಕಾಶನಾಯ್ಕ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು..

Share this article