ಚಳ್ಳಕೆರೆ: ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸದೃಢ ಆರೋಗ್ಯವನ್ನು ಹೊಂದಿದಲ್ಲಿ ಮಾತ್ರ ಯಾವುದೇ ರೋಗಗಳು ಅವನನ್ನು ಬಾಧಿ ಸುವುದಿಲ್ಲ. ರೋಗಮುಕ್ತನಾದ ವ್ಯಕ್ತಿಯಿಂದ ಮಾತ್ರ ನಾವು ಯಾವುದೇ ಉತ್ತಮ ಕಾರ್ಯವನ್ನು ನಿರೀಕ್ಷಿಸಬಹುದು. ಮಾನಸಿಕ ರೋಗಕ್ಕೆ ಒಳಗಾದವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ. ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ನಾವೆಲ್ಲರೂ ಕೈಜೋಡಿಬೇಕು ಎಂದು ಸಿವಿಲ್ ನ್ಯಾಯಾಲಯ ಹಿರಿಯ ನ್ಯಾಯಾಧೀಶರಾದ ಶಮೀರ್ ಪಿ.ನಂದ್ಯಾಲ್ ಹೇಳಿದರು.
ಮಂಗಳವಾರ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ ಮತ್ತು ತಾಲೂಕು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದ ಪ್ರತಿಯೊಬ್ಬ ವ್ಯಕ್ತಿ ತನ್ನ ಆರೋಗ್ಯದ ಬಗ್ಗೆ ತಾನೇ ಗಮಹರಿಸಬೇಕಿದೆ. ವಿಶೇಷವಾಗಿ ಅನಾರೋಗ್ಯ ಪೀಡಿತನಾಗಿ ಮಾನಸಿಕ ರೋಗಿಯಾದರೆ, ಅಂತಹವರ ಬದುಕು ಡೋಲಾಯಮಾನವಾಗುತ್ತದೆ. ಆದ್ದರಿಂದ ಆರೋಗ್ಯ ಇಲಾಖೆ ಇಂತಹ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ.ಆರ್.ಮಂಜುನಾಥ ಮಾತನಾಡಿ, ಕೆಲವೊಂದು ಸಂದರ್ಭಗಳಲ್ಲಿ ಒತ್ತಡದ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸುವಾಗ ನಮಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ನಮ್ಮ ಮೆದುಳಿಗೆ ಹೆಚ್ಚು ಒತ್ತಡ ಉಂಟಾದ ಸಂದರ್ಭದಲ್ಲಿ ನಮಗೆ ಅನಾರೋಗ್ಯ ಕಾಡಲು ಪ್ರಾರಂಭಿಸುತ್ತದೆ. ನಿಶಕ್ತಿ ಮತ್ತು ದಣಿವು ಆದಾಗ ನಾವು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಮುಂಜಾಗ್ರತಾ ಕ್ರಮದಿಂದ ಮಾನಸಿಕ ರೋಗಕ್ಕೆ ತುತ್ತಾಗುವವರಿಗೆ ಪ್ರಾರಂಭದ ಹಂತದಲ್ಲೇ ಸೂಕ್ತ ಮಾರ್ಗದರ್ಶನ, ಚಿಕಿತ್ಸೆ ನೀಡಿ ಅವರನ್ನು ಮಾನಸಿಕ ಒತ್ತಡದಿಂದ ಪಾರುಮಾಡಲಾಗುತ್ತಿದೆ. ಆದರೆ, ಇದು ನಿರಂತರ ಪ್ರಕ್ರಿಯೆ, ಆರೋಗ್ಯ ಇಲಾಖೆಯ ಯಾವುದೇ ಜಾಗೃತಿ ಕಾರ್ಯಕ್ರಮಗಳು ಯಶಸ್ವಿಯಾಗಲು ಎಲ್ಲರ ಸಹಕಾರ ಅತಿಮುಖ್ಯ. ಯಾರಾದರೂ ಮಾನಸಿಕ ಒತ್ತಡದಿಂದ ಬಳಲುವವರನ್ನು ಕಂಡರೆ ಸಾರ್ವಜನಿಕರು ಕೂಡಲೇ ಹತ್ತಿರ ಆಸ್ಪತ್ರೆಗೆ ದಾಖಲಿಸಿ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ಸಾಮಾನ್ಯವಾಗಿ ಮಾನಸಿಕತೆಯಿಂದ ನರಳುವ ವ್ಯಕ್ತಿಯಿಂದ ನಾವು ಏನನ್ನು ನಿರೀಕ್ಷಣೆ ಮಾಡಲು ಸಾಧ್ಯವಿಲ್ಲ. ಅತಿಹೆಚ್ಚು ಚಿಂತನೆಯಿಂದ ಮಾನಸಿಕತೆ ಉಂಟಾಗುತ್ತದೆ. ಬದುಕಿನ ಪ್ರತಿಯೊಂದು ಸಂದರ್ಭದಲ್ಲೂ ಧೈರ್ಯದಿಂದ ಎಲ್ಲವನ್ನು ನಿವಾರಣೆ ಮಾಡಿದಲ್ಲಿ ಮಾತ್ರ ಮಾನಸಿಕತೆಯಿಂದ ಮುಕ್ತರಾಗಬಹುದು. ಆರೋಗ್ಯ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಂಡು ಜನರನ್ನು ಮಾನಸಿಕ ಕಾಯಿಲೆಯಿಂದ ಮುಕ್ತರಾಗಿಮಾಡಬೇಕು ಎಂದರು.ಜೆಎಂಎಫ್‌ಸಿ ನ್ಯಾಯಾಧೀಶರಾದ ಎಚ್.ಆರ್.ಹೇಮಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಎನ್.ಕಾಶಿ, ವಕೀಲರ ಸಂಘ ಉಪಾಧ್ಯಕ್ಷ ಬಿ.ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಟಿ.ರುದ್ರಯ್ಯ ಮತ್ತಿತರರಿದ್ದರು.