ಕನ್ನಡಪ್ರಭ ವಾರ್ತೆ ವಿಜಯಪುರಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹಾಗೂ ಆಶಾ ಪಾಟೀಲರ ಪುತ್ರ ಬಸವನಗೌಡ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳು ಅಖಿಲಾ ಅವರ ಆರತಕ್ಷತೆ ಶುಕ್ರವಾರ ವಿಜಯಪುರದಲ್ಲಿ ಬಸವ ತತ್ವದಂತೆ ವಚನಗಳ ಪಠಣದೊಂದಿಗೆ ನಡೆಯಿತು.
ನಾಡಿನ ಇನ್ನೂರಕ್ಕೂ ಹೆಚ್ಚು ಸ್ವಾಮೀಜಿಗಳು ಇದಕ್ಕೆ ಸಾಕ್ಷಿಯಾದರು. ನಗರದ ಜ್ಞಾನಯೋಗಾಶ್ರಮದ ಬಸವಲಿಂಗ ಶ್ರೀಗಳು ಹಾಗೂ ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ "ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯಾ.. " ಎನ್ನುವ ವಚನ ಸೇರಿದಂತೆ ಹಲವು ವಚನಗಳನ್ನು ಹೇಳುತ್ತಿದ್ದಂತೆ ವಧು-ವರರು ಹಾರ ಬದಲಿಸಿಕೊಂಡರು. ಗದುಗಿನ ಜಗದ್ಗುರು ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ತರಳಬಾಳು ಜಗದ್ಗುರುಗಳು, ಭಾಲ್ಕಿಯ ಪಟ್ಟದ್ದೇವರು, ಇಲಕಲ್ ಶ್ರೀಗಳು, ಸಿರೆಗೆರೆ ಶ್ರೀಗಳು, ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ, ಮುರುಘಾ ಮಠದ ಮಲ್ಲಿಕಾರ್ಜುನ ಶ್ರೀ, ಕನ್ಹೇರಿಯ ಕಾಡಸಿದ್ದೇಶ್ವರ ಶ್ರೀ, ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀ, ದಿಂಗಾಲೇಶ್ವರ ಶ್ರೀ, ಶಣ್ಮುಖಾರೂಢ ಶ್ರೀ, ಪ್ರಸನ್ನಾನನಂದಪುರಿ ಶ್ರೀ, ಭೋವಿ, ಉಪ್ಪಾರ, ಮಡಿವಾಳ ಗುರು ಪೀಠದ ಶ್ರೀಗಳು ಸೇರಿದಂತೆ ಅನೇಕರು ಇದ್ದರು.
ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕರಾದ ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಆಗಮಿಸಿದ ಸಾವಿರಾರು ಜನರನ್ನು ಕೂಡಿಸಿ ಅಚ್ಚುಕಟ್ಟಾಗಿ ಬಾಳೆ ಎಲೆಯಲ್ಲಿ ಹೋಳಿಗೆ ಊಟ ಹಾಕಿಸಿದ್ದು ವಿಶೇಷವಾಗಿತ್ತು. ಸರಳವಾಗಿ ಆರತಕ್ಷತೆ ನಡೆಯಿತು. ಎಂ.ಬಿ.ಪಾಟೀಲರ ಬಬಲೇಶ್ವರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲ ಕಡೆಗಳಿಂದ ಜನರು ಆಗಮಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.