ಸಾಮೂಹಿಕ ನಾಯಕತ್ವ ಗುರುತಿಸಿ ಜವಾಬ್ದಾರಿ ಹಂಚಿಕೆ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Aug 31, 2025, 01:07 AM IST
30ಕೆಆರ್ ಎಂಎನ್ 1.ಜೆಪಿಜಿಹಾರೋಹಳ್ಳಿ ಸಮೀಪದ ಚುಳಕನಬೆಟ್ಟದ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಮಾವೇಷ ಹಾಗೂ ಸದಸ್ಯತ್ವ ಅಭಿಯಾನ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಪಕ್ಷ ಸಂಘಟನೆಗೆ ನಾಯಕರನ್ನು ಸಾಮೂಹಿಕವಾಗಿ ನೇಮಕ ಮಾಡಿ ಪ್ರತಿ ಹೋಬಳಿ ಗ್ರಾಮ ಪಂಚಾಯಿತಿಗಳಲ್ಲಿ ತಾವು ಒಪ್ಪುವ ಮುಖಂಡರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಹಿನ್ನಡೆಯಾಗಿದ್ದು, ಮುಂಬರುವ ದಿನಗಳಲ್ಲಿ ಸಾಮೂಹಿಕ ನಾಯಕತ್ವವನ್ನು ಗುರುತಿಸಿ ಅಂತಹ ವ್ಯಕ್ತಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಇನ್ನು ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟಿಸುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಹಾರೋಹಳ್ಳಿ ಸಮೀಪದ ಚುಳಕನಬೆಟ್ಟದ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಮಾವೇಷ ಹಾಗೂ ಸದಸ್ಯತ್ವ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು, ಹಾರೋಹಳ್ಳಿ-ಮರಳವಾಡಿ ಹೋಬಳಿಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಒಡ್ಡಲಾಗುತ್ತದೆ. ರಾಕ್ಷಸ ಬುದ್ದಿಯ ಎದುರಾಳಿಗಳು ಜೆಡಿಎಸ್ ಕಾರ್ಯಕರ್ತ ಮುಖಂಡರನ್ನು ಬೆದರಿಸಿ ತಮ್ಮೆಡೆ ಸೆಳೆದುಕೊಂಡು ಪಕ್ಷದ ಸಂಘಟನೆಗೆ ಹಿನ್ನಡೆಯುಂಟು ಮಾಡುತ್ತಿದ್ದಾರೆ. ಇದೊಂದು ಹೀನ ಕೃತ್ಯ ಎಂದು ಕಿಡಿಕಾರಿದರು.ಪಕ್ಷ ಸಂಘಟನೆಗೆ ನಾಯಕರನ್ನು ಸಾಮೂಹಿಕವಾಗಿ ನೇಮಕ ಮಾಡಿ ಪ್ರತಿ ಹೋಬಳಿ ಗ್ರಾಮ ಪಂಚಾಯಿತಿಗಳಲ್ಲಿ ತಾವು ಒಪ್ಪುವ ಮುಖಂಡರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಈ ಜಿಲ್ಲೆ ನಮ್ಮ ಕುಟುಂಬಕ್ಕೆ ನೀಡಿರುವ ಪ್ರೀತಿ ಅಪಾರವಾಗಿದೆ. ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿಯವರಿಗೆ ಹೆಚ್ಚಿನ ಅಧಿಕಾರ ನೀಡಿ ರಾಜ್ಯದ ಜನರ ಸೇವೆ ಮಾಡಲು ಅವಕಾಶ ನೀಡಿದ್ದೀರಿ, ರಾಮನಗರ ಹಾಗೆಯೇ ನನ್ನ ತಾಯಿಯವರು ಶಾಸಕರಾಗಿ ತಮ್ಮೆಲ್ಲರ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ನನ್ನ ಚುನಾವಣೆಯಲ್ಲಿ ಹಲವಾರು ಗಿಮಿಕ್, ತಂತ್ರ, ಪ್ರತಿತಂತ್ರ ಮಾಡಿ ಮತದಾರರ ಮುಂದೆ ಗ್ಯಾರಂಟಿ ನಾಟಕ ಮಾಡಿದರು. ಕೂಪನ್ ಹಂಚಿ ಒಳೊಳಗೆ ಸಂಚು ರೂಪಿಸಿ ಸೋಲಿಸಲಾಯಿತು. ಇದರಿಂದ ನಾನು ಧೃತಿಗೆಟ್ಟಿಲ್ಲ, ನನಗೆ ಅಧಿಕಾರದ ಆಸೆ ಇಲ್ಲ, ಕಾರ್ಯಕರ್ತ ಮುಖಂಡರ ಹಾಗೂ ಪಕ್ಷದ ವರಿಷ್ಠರ ಒತ್ತಾಸೆ ಮೇರೆಗೆ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಒಂದು ಸಮುದಾಯದ ಒಳಸಂಚಿನಿಂದ ನಾನು ಸೋಲಬೇಕಾಯಿತು. ಇದು ನನ್ನ ಕಾರ್ಯಕರ್ತರ ಪಕ್ಷದ ಅಭಿಮಾನಿಗಳ ತಪ್ಪಲ್ಲ, ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಸೋಲು ಮುಂದೆ ಪಕ್ಷದ ಸಂಘಟನೆಗೆ ಮೆಟ್ಟಿಲಾಗಿ ಗೋಚರಿಸಿದೆ ಎಂದು ಹೇಳಿದರು.

ನಾನು ಪ್ರತಿ ಸ್ಪರ್ಧಿಗೆ ಹೆದರಿ ಹೋಗುವ ಜಾಯಮಾನ ನಮ್ಮದಲ್ಲ. ನಾವು ಮಣ್ಣಿಗೆ ಗರಿಕೆ ಕಡ್ಡಿಯಂತೆ ಚಿಗುರುತ್ತೇವೆ. ಮುಂಬರುವ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ನಮ್ಮ ಮೈತ್ರಿ ಪಕ್ಷ ಸಂಪೂರ್ಣ ಅಧಿಕಾರಕ್ಕೆ ಬರಲಿದೆ. ಯಾವುದಕ್ಕೂ ಕುಂದದೆ ಪಕ್ಷ ಸಂಘಟಿಸುವ ಜಾಯಮಾನ ನಮ್ಮದಾಗಿದೆ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ನಾನು ಮತ್ತು ನಿಖಿಲ್ ಕುಮಾರಸ್ವಾಮಿಯವರನ್ನು ಸೋಲಿಸಿದ್ದು ಮತದಾರರಲ್ಲ, ಕಾಂಗ್ರೆಸ್ ಪಕ್ಷದ ಷಡ್ಯಂತ್ರ, ಪಿತೂರಿ, ಹಾಗೂ ಕೂಪನ್‌ಗಳ ಆಮಿಷದಿಂದ ಜನರನ್ನು ತಮ್ಮಡೆಗೆ ಸೆಳೆದು ಸೋಲಿಸಲಾಯಿತು. ನಮ್ಮ ಪಕ್ಷದ ಕಾರ್ಯಕರ್ತ ಮುಖಂಡರನ್ನು ಸೆಳೆದುಕೊಂಡು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‌ನಿಂದ ಅವರು ಈಗಾಗಲೇ ಬೇಸತ್ತು ಹೋಗಿದ್ದಾರೆ. ನಮ್ಮಲ್ಲಿದ್ದ ಮುಖಂಡರು ರಾಜರಂತೆ ಪಕ್ಷ ಸಂಘಟಿಸುತ್ತಿದ್ದರು, ಇಂದು ಮೂಲಭೂತ ಸೌಲಭ್ಯಕ್ಕೆ ಕಾದು ನಿಲ್ಲುವಂತಹ ವಾತಾವರಣ ಸೃಷ್ಟಿಯಾಗಿದೆ. ಕ್ಷೇತ್ರದಲ್ಲಿ ಕಾರ್ಯಕರ್ತ ಮುಖಂಡರನ್ನು ಎತ್ತಿಕಟ್ಟುವುದಲ್ಲದೇ, ಸುಳ್ಳು ದೂರುಗಳನ್ನು ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ದೇವೇಗೌಡರ ದೂರದೃಷ್ಟಿಯಿಂದ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ, ಕಾವೇರಿ ಕುಡಿಯುವ ನೀರಿನ ಯೋಜನೆ, ಹಾರೋಬೆಲೆ ಜಲಾಶಯ, ಪ್ರಗತಿಗೆ ದೇವೇಗೌಡರ ಕೊಡುಗೆ ಹೆಚ್ಚಿದೆ. ಜಿಲ್ಲೆಯಲ್ಲಿ ರಾಕ್ಷಸ ರಾಜಕಾರಣ ನಡೆಯುತ್ತಿದೆ, ಈ ಎಲ್ಲಾ ಆಟಾಟೋಪಗಳಿಗೆ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಸಕಾರಾತ್ಮಕವಾಗಿ ಅನಾವರಣೆಗೊಳ್ಳಲಿದೆ. ಕಾರ್ಯಕರ್ತ ಮುಖಂಡರು ಇಂದಿನಿಂದಲೇ ಸಂಘಟನೆಯತ್ತ ಸಿದ್ದರಾಗಿ ಎಂದರು. ರಾಮನಗರ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಕನಕಪುರ ಅಧ್ಯಕ್ಷ ಬಿ.ನಾಗರಾಜು, ಮಾಜಿ ಅಧ್ಯಕ್ಷ ಸಿದ್ದಮರಿಗೌಡ, ಚಿನ್ನಸ್ವಾಮಿ, ತಮ್ಮಣ್ಣ, ಪಡುವಣೆಗೆರೆ ಸಿದ್ದರಾಜು, ಶಿವನಂಜಪ್ಪ, ಮಹದೇವ್, ಮುಖಂಡರಾದ ಅತ್ತಿಕುಪ್ಪೆ ಕೆಂಪಣ್ಣ, ಗಬ್ಬಾಡಿ ಮಲ್ಲಯ್ಯ, ಮುದವಾಡಿ ನಾಗರಾಜು, ಬಿ.ಎಂ.ರಾಜು, ಹೊನ್ನಗಲದೊಡ್ಡಿ ಪ್ರದೀಪ್, ರಾಂಸಾಗರ ಕರಿಯಪ್ಪ, ತಾಪಂ ಮಾಜಿ ಸದಸ್ಯ ಕೊಳ್ಳಿಗನಹಳ್ಳಿ ರಾಮು ಮತ್ತಿತರರು ಉಪಸ್ಥಿತರಿದ್ದರು.

--------

30ಕೆಆರ್ ಎಂಎನ್ 1.ಜೆಪಿಜಿ

ಹಾರೋಹಳ್ಳಿ ಸಮೀಪದ ಚುಳಕನಬೆಟ್ಟದ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಮಾವೇಷ ಹಾಗೂ ಸದಸ್ಯತ್ವ ಅಭಿಯಾನ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?