ಮೀಸಲಾತಿ ವರ್ಗೀಕರಣದ ಶಿಫಾರಸ್ಸು ಹಿಂಪಡೆಯಿರಿ: ಸೇವಾಲಾಲ್ ಸ್ವಾಮೀಜಿ

KannadaprabhaNewsNetwork | Published : Mar 2, 2024 1:50 AM

ಸಾರಾಂಶ

ಬಂಜಾರ ಸಮಾಜ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಸಂತ ಸದ್ಗುರು ಸೇವಾಲಾಲ್ ಮಹಾರಾಜರ 285ನೇ ಜಯಂತ್ಯುತ್ಸವ ಅದ್ದೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮೀಸಲಾತಿ ವರ್ಗೀಕರಣದ ವಿಚಾರವಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಡಿಸುವ ಶಿಪಾರಸನ್ನು ಹಿಂಪಡೆಯಬೇಕೆಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಆಗ್ರಹಿಸಿದರು.

ಬಂಜಾರ ಸಮಾಜ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಸಂಯುಕ್ತಾಶ್ರಯದಲ್ಲಿ ಬಂಜಾರ ಭವನದಲ್ಲಿ ಶುಕ್ರವಾರ ನಡೆದ ಸಂತ ಸದ್ಗುರು ಸೇವಾಲಾಲ್ ಮಹಾ ರಾಜರ 285ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಶಿಷ್ಟರ ಮೀಸಲಾತಿ ವರ್ಗಿಕರಣದಿಂದ ಕೊರಚ, ಕೊರಮ, ಲಂಬಾಣಿ, ಭೋವಿ ಜನಾಂಗಕ್ಕೆ ಅನ್ಯಾಯವಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ವರದಿಯನ್ನು ಹಿಂದಕ್ಕೆ ತರಿಸಿಕೊಳ್ಳಬೇಕು. 3600 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಸರ್ಕಾರ ಘೋಷಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಲಂಬಾಣಿ ಸಮಾಜದಲ್ಲಿ ಸಣ್ಣಪುಟ್ಟ ಮನಸ್ತಾಪ, ದ್ವೇಷ, ಅಸೂಯೆಗಳಿವೆ. ನಮ್ಮ ಸಮಾಜ ಪವಿತ್ರವಾದುದು. ಯಾರ ಮೇಲೂ ದೌರ್ಜನ್ಯ, ದಬ್ಬಾಳಿಕೆ ನಡೆಸಲಿಲ್ಲ. ಮೋಸ, ವಂಚನೆ ಮಾಡಿಲ್ಲ. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಿಂದಾಗಿ ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಸರ್ದಾರ್ ಸೇವಾಲಾಲ್ ಮಹಾರಾಜರು ಶಾಂತಿಪ್ರಿಯರು. ಸಂದರ್ಭ ಬಂದಾಗ ಕ್ರಾಂತಿಕಾರರಾಗುತ್ತಿದ್ದರು ಎಂದರು.

ಸರ್ದಾರ್ ಸೇವಾಲಾಲ್ ಮಹಾರಾಜರು ಅವತಾರ ಪುರುಷರಾಗಿದ್ದು, ಸಮಾಜಕ್ಕೆ ಆದರ್ಶ ಮೌಲ್ಯಗಳನ್ನು ಕೊಟ್ಟಿದ್ದಾರೆ. ಲಂಬಾಣಿ ಜನಾಂಗದಲ್ಲಿರುವ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಅನ್ಯ ಧರ್ಮಿಯರು ಪ್ರೀತಿಸುವ ನೆಪದಲ್ಲಿ ಮತಾಂತರ ಮಾಡುತ್ತಿದ್ದಾರೆ. ಅದನ್ನು ಎಂದಿಗೂ ನಾವು ಸಹಿಸುವುದಿಲ್ಲ. ಪ್ರತಿ ತಾಂಡಾಗಳಿಗೆ ಹೋಗಿ ಜಾಗೃತಿ ಅಭಿಯಾನ ಕೈಗೊಳ್ಳುತ್ತೇವೆ. ಸಮಾಜದಲ್ಲಿ ನಮ್ಮ ಬಗ್ಗೆ ಏನಾದರೂ ವೈಮನಸ್ಸಿದ್ದರೆ ಬಂದು ಮಾತನಾಡಲಿ. ಅದನ್ನು ಬಿಟ್ಟು ಒಳಗಿಂದೊಳಗೆ ಬೇರೆಯವರನ್ನು ಎತ್ತಿಕಟ್ಟಿ ಸಮಾಜ ಹೊಡೆಯುವ ಕೆಲಸ ಮಾಡಬಾರದು. ನಮಗೆ ಸಮಾಜ, ಧರ್ಮ ಮುಖ್ಯ ಎಂದು ಹೇಳಿದರು.ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸದಸ್ಯ, ಲೋಕೇಶ್ವರ್ ನಾಯ್ಕ ಮಾತನಾಡಿ, ಲಂಬಾಣಿ ಸಮಾಜದವರಿಗೆ ಆಸೆ ಆಮಿಷಗಳನ್ನು ತೋರಿಸಿ ಮತಾಂತರ ಮಾಡು ವವರ ವಿರುದ್ಧ ಹೋರಾಡಬೇಕಿದೆ. ಕ್ರಿಶ್ಚಿಯನ್ನರು ಮತಾಂತರ ಮಾಡುತ್ತಿದ್ದಾರೆ. ಲಂಬಾಣಿ ಸಮಾಜದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅಂತಹವರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸವಾಗಬೇಕೆಂದು ಸಲಹೆ ನೀಡಿದರು.

ಬಂಜಾರ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್‍ಕುಮಾರ್ ಮಾತನಾಡಿ, ಕೆಲವು ಕಿಡಿಗೇಡಿಗಳು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಛಿದ್ರವಾಗಲು ಬಿಡುವುದಿಲ್ಲ. 55 ಹೆಣ್ಣು ಮಕ್ಕಳ ಮತಾಂತರಗೊಳಿಸಿ ಕೋಟೆ ಸಮೀಪವಿರುವ ಜಿಪ್ಸಿ ಹಾಸ್ಟೆಲ್‍ನಲ್ಲಿಟ್ಟಿದ್ದಾಗ ದಾಳಿ ನಡೆಸಿ ಹೊರ ತಂದಿದ್ದೇವೆ. ರಾಜ್ಯಾದ್ಯಂತ ಸ್ವಾಮೀಜಿಗಳ ಮುಂದಾಳತ್ವ ದಲ್ಲಿ ಸಂಚರಿಸಿ ಮತಾಂತರ ತಡೆಗಟ್ಟುವಿಕೆಗೆ ಹೋರಾಡುತ್ತೇವೆಂದು ಹೇಳಿದರು.

ಅಖಿಲ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ಜಿಲ್ಲಾಧ್ಯಕ್ಷ ಅನಂತಮೂರ್ತಿ ನಾಯ್ಕ, ಮಾತನಾಡಿ ಲಂಬಾಣಿ ಜನಾಂಗ ಶಾಂತಿ ಪ್ರಿಯರು. ಬ್ರಿಟೀಷರ ವಿರುದ್ಧ ಹೋರಾಡಿದ ಜನಾಂಗ ನಮ್ಮದು. ಸಮಾಜದಲ್ಲಿ ಕೆಲವು ವಿಷಜಂತುಗಳಿದ್ದಾರೆ. ಮುಂದಿನ ದಿನಗಳಲ್ಲಿ ಅಂತಹವರಿಗೆ ತಕ್ಕ ಪಾಠ ಕಲಿಸಲಾಗುವುದೆಂದು ಎಚ್ಚರಿಸಿದರು. ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಗಿರೀಶ್ ಚಂದ್ಯಾನಾಯ್ಕ ಮಾತನಾಡಿ, ಸರ್ದಾರ್ ಸೇವಾಲಾಲ್ ಮಹಾರಾಜರು ಲಂಬಾಣಿ ಜನಾಂಗವನ್ನು ಮೇಲಕ್ಕೆತ್ತಲು ಶ್ರಮಿಸಿದ್ದಾರೆ. ಪವಾಡ ಪುರುಷರಾಗಿದ್ದ ಸೇವಾಲಾಲ್ ಮಹಾರಾಜರು ರೋಗ ರುಜಿನಗಳನ್ನು ಗುಣಪಡಿಸುತ್ತಿದ್ದರು. ಸಂಘಟನಾ ಚತುರ, ಸಮಾಜ ಸುಧಾರಕ ರಾಗಿದ್ದರು. ಹಾಗಾಗಿ ಭಿನ್ನಾಭಿಪ್ರಾಯಗಳಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಸಲಹೆ ನೀಡಿದರು.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಸುಬ್ರನಾಯ್ಕ,ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷ ಎ.ಜಾಕೀರ್ ಹುಸೇನ್, ಬಂಜಾರ ಭಾಷಾ ಅಕಾಡೆಮಿ ಸದಸ್ಯೆ ಹಾಗೂ ಕಲಾವಿದೆ ರುದ್ರಾಕ್ಷಿಬಾಯಿ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ರವಿಕುಮಾರ್ ನಾಯ್ಕ, ವೀರಭದ್ರನಾಯ್ಕ, ಬಂಜಾರ ಸಮಾಜದ ಉಪಾಧ್ಯಕ್ಷ ಪ್ರವೀಣ್ ಎಲ್. ಸಿದ್ದೇಶ್‍ನಾಯ್ಕ, ಶಿವಕುಮಾರ್ ನಾಯ್ಕ, ಶಾಂತನಾಯ್ಕ ವೇದಿಕೆಯಲ್ಲಿದ್ದರು.ಲಂಬಾಣಿ ಜನಾಂಗದ ಪ್ರತಿಭಾವಂತ ಕಲಾವಿದರನ್ನು ಸನ್ಮಾನಿಸಲಾಯಿತು.

ಚಿತ್ರದುರ್ಗದ ಬಂಜಾರ ಭವನದಲ್ಲಿ ಶುಕ್ರವಾರ ನಡೆದ ಸಂತ ಸದ್ಗುರು ಸೇವಾಲಾಲ್ ಮಹಾರಾಜರ 285 ನೇ ಜಯಂತಿಯಲ್ಲಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿದರು.

Share this article