ಕನ್ನಡಪ್ರಭ ವಾರ್ತೆ ಮಹಾಲಿಂಗಪುರಗರ್ಭಪಾತದಿಂದ ಮಹಿಳೆ ಸಾವು ಮತ್ತು ಭ್ರೂಣ ಹತ್ಯೆ ನಡೆದ ಪಟ್ಟಣದ ಜಯಲಕ್ಷ್ಮಿ ನಗರ ಪ್ರದೇಶದಲ್ಲಿರುವ ಮನೆಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ನ್ಯಾ.ಎಸ್.ಕೆ. ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೋಮವಾರ ಬೆಳಗ್ಗೆ ಆರೋಪಿ, ನಕಲಿ ವೈದ್ಯೆ ಕವಿತಾ ಬಾಡನವರ ಅನಧಿಕೃತ ಗರ್ಭಪಾತ ನಡೆದ ಮನೆಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿಯೇ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಆರೋಪಿಯ ಮನೆ ಮೇಲೆ ದಾಳಿ ಮಾಡಿದ್ದರು. ಈ ದಾಳಿ ಆಧರಿಸಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂದೇ ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಕೈಗೊಳ್ಳದೆ ಇರುವುದರಿಂದ ಮೇ 27ರಂದು ಮಹಾರಾಷ್ಟ್ರ ಮೂಲದ ಅಮಾಯಕ ಹೆಣ್ಣು ಮಗಳ ಸಾವು ಸಂಭವಿಸಿ ದುರ್ಘಟನೆ ನಡೆದು ಹೋಗಿದೆ. ಇದೊಂದು ಸಮಾಜ ತಲೆ ತಗ್ಗಿಸುವಂತಹ ಅನಾಗರಿಕ ಕೃತ್ಯವಾಗಿದೆ ಎಂದು ಖಾರವಾಗಿ ನುಡಿದರು.ಕ್ರಮಕ್ಕೆ ಶಿಫಾರಸು:
ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಶೀಘ್ರದಲ್ಲೇ ಬೆರಳಚ್ಚು ಮತ್ತು ನುರಿತ ತಜ್ಞರು ಬರಲಿದ್ದಾರೆ. ಇದಾದ ಬಳಿಕ ಪೊಲೀಸ್ ಇಲಾಖೆಗೆ ದೋಷಾರೋಪಣ ಪಟ್ಟಿ ತಯಾರಿಸಲು ತಿಳಿಸಿ ಪಾರದರ್ಶಕ ತನಿಖೆಯಾಗಿ ಆರೋಪಿತರ ವಿರುದ್ಧ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ ಎಂದು ತಿಳಿಸಿದರು.ಕೃತ್ಯ ನಡೆದ ಮನೆಯ ಒಳಗಿನ ಇನ್ನೆರಡು ಬಾಗಿಲುಗಳು ಸೀಜ್ ಮಾಡದೆ ಇರುವುದು ಮತ್ತು ಗರ್ಭಪಾತಕ್ಕೆ ಬಳಸಿದ ಕೈಗವಚಗಳು, ಹೊದ್ದುಕೊಳ್ಳುವ ರಗ್ ಮತ್ತು ಇನ್ನಿತರೆ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುವುದನ್ನು ಕಂಡು ಆಯೋಗದ ಸದಸ್ಯ ನ್ಯಾ.ಒಂಟಗೋಡಿ ಅವರು ತಾಲೂಕು ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅವು ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂಬುವುದನ್ನು ಮನವರಿಕೆ ಮಾಡಿ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನ ಹೊರಹಾಕಿದರು.
ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಗೋಡಿ ಆಪ್ತ ಕಾರ್ಯದರ್ಶಿ ಅರುಣ ಪೂಜಾರ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ , ಡಿಎಚ್‌ಒ ರಾಜಕುಮಾರ ಯರಗಲ್, ತಹಶೀಲ್ದಾರ್ ಗಿರೀಶ ಸ್ವಾದಿ, ಡಿವೈಎಸ್ಪಿ ಈ ಶಾಂತವೀರ, ಸಿಪಿಐ ಸಂಜಯಕುಮಾರ ಬಳಿಗಾರ, ಕುಟುಂಬ ಕಲ್ಯಾಣ ಅಧಿಕಾರಿ ಡಿ.ಬಿ. ಪಟ್ಟಣಶೆಟ್ಟಿ ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ ಮಲಘಾಣ,ಪಿಎಸ್ ಐ ಪ್ರವೀಣ್ ಬೀಳಗಿ, ವೈದ್ಯಾಧಿಕಾರಿ ಸಿ.ಎಂ. ವಜ್ಜರಮಟ್ಟಿ ಮತ್ತು ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.