- ತಾಲೂಕಿನಾದ್ಯಂತ ಶಾಂತಿಯುತ ಚುನಾವಣೆ: ತಹಸೀಲ್ದಾರ್ ಕೆ.ಗುರುಬಸವರಾಜ್ ಮಾಹಿತಿ
ಕನ್ನಡಪ್ರಭ ವಾರ್ತೆ ಜಗಳೂರು
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ತಾಲೂಕಿನಾದ್ಯಂತ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆ ಸಂಪೂರ್ಣ ಶಾಂತಿವಾಗಿ ನಡೆಯಿತು. ತಾಲೂಕಿನ ಒಟ್ಟು 4 ಮತಗಟ್ಟೆಗಳಿಂದ ಪ್ರಬುದ್ಧ ಮತದಾರರು ಹಕ್ಕು ಚಲಾಯಿಸಿದ್ದು, ಶೇ.77.90ರಷ್ಟು ಮತದಾನ ದಾಖಲಾಗಿದೆ.ತಹಸೀಲ್ದಾರ್ ಕೆ.ಗುರುಬಸವರಾಜ್ ಈ ಕುರಿತು ಮಾಹಿತಿ ನೀಡಿದ್ದು, ತಾಲೂಕಿನಲ್ಲಿ ಒಟ್ಟು 3,454 ನೋಂದಾಯಿತ ಪದವೀಧರ ಮತದಾರರಿದ್ದಾರೆ. ಅವರಲ್ಲಿ 2,691 ಮತದಾರರು ಉತ್ಸಾಹದಿಂದ ಬಂದು ಮತದಾನ ಮಾಡಿದ್ದಾರೆ ಎಂದಿದ್ದಾರೆ.
ಸರ್ಕಾರಿ ಪದವಿಪೂರ್ವ ಕಾಲೇಜು (ಮತಕೇಂದ್ರ ಸಂ.27): ಜಗಳೂರು ಪಟ್ಟಣದ ಈ ಕೇಂದ್ರದಲ್ಲಿದ್ದ ಒಟ್ಟು 1,000 ಮತದಾರರಲ್ಲಿ 510 ಪುರುಷರು ಹಾಗೂ 271 ಮಹಿಳೆಯರು ಸೇರಿ ಒಟ್ಟು 781 ಮತದಾರರು (ಶೇ.78.10) ಮತದಾನ ಮಾಡಿದರು. ಸರ್ಕಾರಿ ಪದವಿಪೂರ್ವ ಕಾಲೇಜು (ಮತ ಕೇಂದ್ರ ಸಂ. 27-ಎ): ಇಲ್ಲಿನ 967 ಮತದಾರರ ಪೈಕಿ 397 ಪುರುಷರು ಮತ್ತು 285 ಮಹಿಳೆಯರು ಸೇರಿ ಒಟ್ಟು 682 ಜನರು (ಶೇ.70.52) ತಮ್ಮ ಹಕ್ಕು ಚಲಾಯಿಸಿದರು. ಹೊಸಕೆರೆ (ಮತ ಕೇಂದ್ರ ಸಂ.28): ತಾಲೂಕಿನಲ್ಲೇ ಅತ್ಯಂತ ಹೆಚ್ಚಿನ ಮತದಾನ ದಾಖಲಿಸಿದ ಕೇಂದ್ರ ಇದಾಗಿದ್ದು, 691 ಮತದಾರರಲ್ಲಿ 424 ಪುರುಷರು ಹಾಗೂ 162 ಮಹಿಳೆಯರು ಸೇರಿ 586 ಜನರು (ಶೇ.84.80) ಸಕ್ರಿಯವಾಗಿ ಪಾಲ್ಗೊಂಡರು. ಬಿಳಿಚೋಡು ಕೆಪಿಎಸ್ ಪ್ರೌಢಶಾಲೆ (ಮತಕೇಂದ್ರ ಸಂ.29): ಇಲ್ಲಿನ 796 ನೋಂದಾಯಿತ ಮತದಾರರಲ್ಲಿ 437 ಪುರುಷರು ಹಾಗೂ 205 ಮಹಿಳೆಯರು ಸೇರಿ 642 ಮತದಾರರು (ಶೇ.80.65) ಮತ ಚಲಾಯಿಸಿದ್ದಾರೆ. ಒಟ್ಟಾರೆಯಾಗಿ 4 ಮತಗಟ್ಟೆಗಳಿಂದ ಶೇ.77.90ರಷ್ಟು ಮತದಾನ ದಾಖಲಾಗಿದೆ.
ಜಗಳೂರು ತಾಲೂಕಿನಲ್ಲಿಯೇ ಹೊಸಕೆರೆ ಮತಗಟ್ಟೆಯು ಶೇ.84.80 ಮತದಾನದೊಂದಿಗೆ ಮೊದಲ ಸ್ಥಾನದಲ್ಲಿದೆ. ಪಟ್ಟಣ ವ್ಯಾಪ್ತಿಗಿಂತಲೂ ಗ್ರಾಮೀಣ ಪ್ರದೇಶಗಳ ಮತಗಟ್ಟೆಗಳಲ್ಲಿ ಪದವೀಧರ ಮತದಾರರ ಜಾಗೃತಿ ಹಾಗೂ ಉತ್ಸಾಹ ಎದ್ದುಕಾಣುತ್ತಿತ್ತು.
ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಮತದಾನ ಪ್ರಕ್ರಿಯೆಯು ಅತ್ಯಂತ ಸುಸೂತ್ರವಾಗಿ ನೆರವೇರಲು ಸಹಕರಿಸಿದ ಎಲ್ಲಾ ಮತದಾರರಿಗೆ, ಚುನಾವಣಾ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ತಾಲೂಕು ಆಡಳಿತ ಧನ್ಯವಾದ ಅರ್ಪಿಸಿದೆ.
- - -