ಶರಣು ಸೊಲಗಿ ಮುಂಡರಗಿ
ಮುಂಡರಗಿ ಎಪಿಎಂಸಿ ಮಾರುಕಟ್ಟೆಗೆ ಕಾಲಿಟ್ಟರೆ ಸಾಕು ಎಲ್ಲಿ ನೋಡಿದರಲ್ಲಿ ಗೋವಿನ ಜೋಳದ ರಾಶಿಗಳು ಕಂಡು ಬರುತ್ತಿವೆ. ಕಳೆದ ಒಂದೂವರೆ ತಿಂಗಳಿಂದ ಮಾರುಕಟ್ಟೆಗೆ ದಾಖಲೆ ಪ್ರಮಾಣದಲ್ಲಿ ಗೋವಿನ ಜೋಳ ಆವಕವಾಗುತ್ತಿದೆ.ಪ್ರಾರಂಭದಲ್ಲಿ ಮುಂಡರಗಿ ಎಪಿಎಂಸಿ ಮಾರುಕಟ್ಟೆಗೆ ನಿತ್ಯ 15 ರಿಂದ 20 ಸಾವಿರ ಚೀಲದವರೆಗೆ ರೈತರಿಂದ ಗೋವಿನ ಜೋಳ ಆವಕವಾಗುತ್ತಿದ್ದವು. ನಿತ್ಯವೂ ಸುಮಾರು ₹2 ಕೋಟಿ ವ್ಯವಹಾರವಾಗುತ್ತಿದ್ದು, ಎಲ್ಲ ರೈತರಿಗೂ ಅಂದೇ ಹಣ ನೀಡುವ ಮೂಲಕ ಉತ್ತಮ ವ್ಯವಹಾರ ನಡೆದಿದೆ. ಇದೀಗ ನಿತ್ಯ 5 ರಿಂದ 8 ಸಾವಿರ ಚೀಲದವರೆಗೂ ಬರುತ್ತಿವೆ.
ಈ ಮೊದಲು ಮುಂಡರಗಿ ಮಾರುಕಟ್ಟೆಗೆ ಕೇವಲ ನಮ್ಮ ತಾಲೂಕಿನ ರೈತರು ಬೆಳೆದ ಉತ್ಪನ್ನಗಳು ಮಾತ್ರ ಬರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಕ್ಕದ ಹೂವಿನ ಹಡಗಲಿ ತಾಲೂಕು, ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮ, ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮಗಳಿಂದ ಗೋವಿನ ಜೋಳ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಕಳೆದ 10 ವರ್ಷಗಳಿಂದ ಮುಂಡರಗಿ ಎಪಿಎಂಸಿ ಮಾರುಕಟ್ಟೆ ರೈತರೊಂದಿಗೆ ಉತ್ತಮವಾಗಿ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುವ ಮೂಲಕ ಜಿಲ್ಲೆಯಲ್ಲಿ ತನ್ನದೆಯಾದ ಛಾಪು ಮೂಡಿಸಿದೆ.ಅನೇಕ ವರ್ಷಗಳಿಂದ ಇಲ್ಲಿನ ಮಾರುಕಟ್ಟೆಗೆ ಗೋವಿನ ಜೋಳ ಆವಕವಾಗುತ್ತಿತ್ತಾದರೂ ಪ್ರಸ್ತುತ ವರ್ಷ ಉತ್ತಮವಾಗಿ ಮಳೆಯಾದ ಕಾರಣ ಮುಂಡರಗಿ ತಾಲೂಕಿನಲ್ಲಿ ಖುಷ್ಕಿ ಜಮೀನಿನಲ್ಲಿಯೂ ಸಹ ರೈತರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಫಸಲನ್ನು ತೆಗೆದಿದ್ದಾರೆ. ಹೀಗಾಗಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಗೋವಿನ ಜೋಳ ಆವಕವಾಗಿದೆ.
ಇಲ್ಲಿನ ವ್ಯಾಪಾರಸ್ಥರು ಹಾಗೂ ದಲಾಲರು ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದರ ಜತೆಗೆ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ಒದಗಿಸಿ ಯೋಗ್ಯ ದರ ನೀಡಿ ಖರೀದಿಸುವ ಮೂಲಕ ವಹಿವಾಟು ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರಾರಂಭದಲ್ಲಿ ಒಂದು ಕ್ವಿಂಟಲ್ ಗೋವಿನ ಜೋಳಕ್ಕೆ ₹2500 ಇದ್ದ ಬೆಲೆ ಇದೀಗ ₹2250, 2100 ಗಳಿಗೆ ಬಂದು ನಿಂತಿದೆ.ಎಲೆಕ್ಟ್ರಿಕಲ್ ಯಂತ್ರಗಳ ಮೂಲಕ ರೈತರ ಉತ್ಪನ್ನ ತೂಕ ಮಾಡಿ ಖರೀದಿಸಲಾಗುತ್ತಿದೆ. ಅಲ್ಲದೇ ಅಂದು ಖರೀದಿಸಿದ ರೈತರ ಉತ್ಪನ್ನಗಳ ಹಣ ಅಂದೇ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಹೀಗಾಗಿ ಈ ಬಾರಿ ಹಿಂದೆಂದೂ ಬರದಷ್ಟು ದಾಖಲೆ ಪ್ರಮಾಣದಲ್ಲಿ ನಮ್ಮ ಮಾರುಕಟ್ಟೆಗೆ ಗೋವಿನ ಜೋಳ ಆವಕವಾಗಿದೆ ಎಂದು ಗಣ್ಯ ವರ್ತಕ ಕೊಟ್ರೇಶ ಅಂಗಡಿ ತಿಳಿಸಿದ್ದಾರೆ.