ಒಂದುವರೆ ಗಂಟೆಯಲ್ಲಿ 637 ಮಿಮೀ ದಾಖಲೆ ಮಳೆ

KannadaprabhaNewsNetwork | Published : Aug 21, 2024 12:42 AM

ಸಾರಾಂಶ

ಕೊರಟಗೆರೆ: ಒಂದುವರೆ ಗಂಟೆಯಲ್ಲಿ 637 ಮಿಮೀ ದಾಖಲೆ ಮಳೆ

ಕನ್ನಡಪ್ರಭ ವಾರ್ತೆ ಕೊರಟಗೆರೆ

ಸತತ ಒಂದುವರೆ ಗಂಟೆ ಸುರಿದ ರಭಸದ ಮಳೆಗೆ ಕೊರಟಗೆರೆ ಪಟ್ಟಣ ಮತ್ತು ಗ್ರಾಮೀಣ ಭಾಗದ ರಸ್ತೆಗಳೆಲ್ಲ ಜಲಾವೃತವಾಗಿ ಸುಮಾರು ೬೦ ಮನೆ ಮತ್ತು ೪೦ಕ್ಕೂ ಅಧಿಕ ಅಂಗಡಿಗಳಿಗೆ ನೀರುನುಗ್ಗಿದೆ. ರಾತ್ರಿ ಸುರಿದ ಮಳೆಯಿಂದ ಬಿತ್ತನೆ ಮಾಡಿದ್ದ ಕೃಷಿ ಬೆಳೆಗಳೆಲ್ಲ ಮಳೆಯ ನೀರಿನಲ್ಲಿ ಮುಳುಗಿ ರೈತರಿಗೆ ಮತ್ತೆ ಸಂಕಷ್ಟ ತಂದೊಡ್ಡಿದೆ.

ಜೋರಾಗಿ ಸುರಿದ ಮಳೆಯಿಂದ ರಸ್ತೆಗಳೆಲ್ಲ ಜಲಾವೃತವಾಗಿ ವಾಹನಗಳೆಲ್ಲ ಈಗ ಕೆಟ್ಟುನಿಂತಿವೆ. ಪಟ್ಟಣದ ಮುಖ್ಯರಸ್ತೆಯ ಸಂಚಾರ ಕಡಿತವಾಗಿ, ವಿವಿಧ ಬಡಾವಣೆಗಳಲ್ಲಿ ಮನೆ, ವಸತಿ ನಿಲಯಕ್ಕೆ ನೀರು ನುಗ್ಗಿ ಧವಸ, ಧಾನ್ಯ ಎಲ್ಲವೂ ನೀರು ಪಾಲಾಗಿದೆ. ಬುಡಮಾರನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕೊಚ್ಚಿಹೋಗಿ ಸಂಪರ್ಕವೇ ಕಡಿತಗೊಂಡಿದೆ. ರಾಜಕಾಲುವೆ ಮತ್ತು ಮುಖ್ಯ ಚರಂಡಿ ಒತ್ತುವರಿ ಆಗಿರುವ ಪರಿಣಾಮ ಕೊರಟಗೆರೆ ಪಟ್ಟಣದ ಕನಕದಾಸ ವೃತ್ತ ಹಾಗೂ ಶಿವಗಂಗಾ ಚಿತ್ರಮಂದಿರ ಸಮೀಪದ ಮುಖ್ಯರಸ್ತೆಯ ೪೦ಕ್ಕೂ ಅಧಿಕ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಮಳೆಯ ನೀರಿನಲ್ಲಿ ಹಣ್ಣಿನ ಅಂಗಡಿಯೇ ಕೊಚ್ಚಿಹೋಗಿದೆ. ಸಿಮೆಂಟ್ ಮತ್ತು ಬಟ್ಟೆ ಅಂಗಡಿಗಳಿಗೆ ನೀರು ಹರಿದು ಅವಾಂತರ ಸೃಷ್ಟಿಸಿ ಲಕ್ಷಾಂತರ ರು. ನಷ್ಟವಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ತಹಸೀಲ್ದಾರ್ ಮಂಜುನಾಥ.ಕೆ., ಅಗ್ನಿಶಾಮಕ, ಪಪಂ ಮತ್ತು ಬೆಸ್ಕಾಂ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ತಡರಾತ್ರಿ ೩ಗಂಟೆವರೆಗೆ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಕೊರಟಗೆರೆಯ ೨೫ಕೆರೆಗಳು ಭರ್ತಿ:

ಸಣ್ಣ ನೀರಾವರಿ ಮತ್ತು ಗ್ರಾಪಂಯ ತಿಮ್ಮನಹಳ್ಳಿ, ಬೈರೇನಹಳ್ಳಿ, ಎತ್ತಿಗಾನಹಳ್ಳಿ, ಚನ್ನಪಟ್ಟಣ, ನವಿಲುಕುರಿಕೆ, ಬೆಂಡೋಣಿ, ಮಲ್ಲೆಕಾವು, ನೇಗಲಾಲ,ಬುಕ್ಕಾಪಟ್ಟಣ, ಜೆಟ್ಟಿ ಅಗ್ರಹಾರ, ಜಂಪೇನಹಳ್ಳಿ, ಗೋಕುಲದ ಕೆರೆ, ಗಂಗಾಧರೇಶ್ವರ, ಗೌಡನಕೆರೆ, ಗೋಬಲಗುಟ್ಟೆ, ಹೊಸಕೋಟೆ, ತುಂಬಾಡಿ ಕೆರೆಗಳು ತುಂಬಿ ಸುವರ್ಣಮುಖಿ ಮತ್ತು ಜಯಮಂಗಲಿ ನದಿಗಳು ಹರಿಯುತ್ತಿವೆ. ಮಾವತ್ತೂರು ಮತ್ತು ತೀತಾ ಜಲಾಶಯ ತುಂಬುವ ಹಂತದಲ್ಲಿವೆ.

ಚನ್ನಸಾಗರ ಪರಿಶೀಲನೆ ನಡೆಸಿದ ಡೀಸಿ:

ಜಯಮಂಗಲಿ ನದಿಪಾತ್ರದ ಚನ್ನಸಾಗರ ಮತ್ತು ನಂಜಾಪುರಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ತುಮಕೂರು ಎಸ್ಪಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರಟಗೆರೆ ಭಾಗದಲ್ಲಿ ಮತ್ತೆ ಮಳೆಯಾದರೆ ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಗಳು ಅಪಾಯದ ಮಟ್ಟಮೀರಿ ಹರಿಯಲಿವೆ. ನದಿಪಾತ್ರ ಮತ್ತು ಜಮೀನಿನಲ್ಲಿ ವಾಸಿಸುತ್ತಿರುವ ರೈತಾಪಿ ವರ್ಗ ತಕ್ಷಣವೇ ಭದ್ರತೆ ಇರುವ ಸ್ಥಳಗಳಿಗೆ ತೆರಳಬೇಕಿದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.ಅಧಿಕಾರಿ ವರ್ಗ ಕೇಂದ್ರಸ್ಥಾನ ಬಿಟ್ಟು ಎಲ್ಲಿಗೂ ಹೋಗಬಾರದು, ನದಿಪಾತ್ರದ ರೈತರಿಗೆ ಗ್ರಾಪಂ ಮತ್ತು ಕಂದಾಯ ಅಧಿಕಾರಿವರ್ಗ ಅಪಾಯದ ಎಚ್ಚರಿಕೆಯ ಬಗ್ಗೆ ಅರಿವು ಮೂಡಿಸಬೇಕು. ಮಳೆ ಪ್ರಾರಂಭ ಆದರೆ ತಕ್ಷಣವೇ ಎಚ್ಚೆತ್ತುಕೊಂಡು ನದಿಪಾತ್ರಕ್ಕೆ ಧಾವಿಸಿ ಸಮಸ್ಯೆ ಅರಿಯಬೇಕಿದೆ. ಅಗತ್ಯವಿದ್ದರೆ ಕಾಳಜಿ ತೆರೆಯಲು ತುರ್ತು ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ.

-ಶುಭಕಲ್ಯಾಣ್. ಜಿಲ್ಲಾಧಿಕಾರಿ. ತುಮಕೂರುಒಂದುವರೆ ಗಂಟೆಯಲ್ಲಿ 637 ಮಿಮೀ ಮಳೆ!

ಕೊರಟಗೆರೆಯ ಮುಂಗಾರಿನ ವರ್ಷದ ವಾಡಿಕೆ ಮಳೆಯ ಪ್ರಮಾಣ 624ಮೀ.ಮೀ ಮಾತ್ರ. ಆದರೇ ಸೋಮವಾರ ರಾತ್ರಿ 8.15ರಿಂದ 9.45 ರವರೆಗೆ ಒಂದುವರೆ ಗಂಟೆ ಅವಧಿಯಲ್ಲಿ ಸುರಿದ ಮಳೆಯು 637 ಮಿಮೀ ಗೂ ಅಧಿಕ. ಹೊಳವನಹಳ್ಳಿ - ೧೫೪.೨ ಮಿಮೀ, ಕೋಳಾಲ-೧೫೫.೮ ಮಿಮೀ, ಸಿ.ಎನ್.ದುರ್ಗ- ೫೪.೨ಮಿಮೀ ಮಳೆಯ ಪ್ರಮಾಣ ದಾಖಲಾಗಿದೆ.

Share this article