ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸ್ವರ್ಣಸಂದ್ರ ಬಳಿ ಇರುವ ಬಿ.ಜಿ.ಎಸ್.ಭವನದಲ್ಲಿ ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
೨೦೧೩-೧೪ರಲ್ಲಿ ನಡೆದ ಜಾತಿ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಶೇ.೩೦ ರಿಂದ ಶೇ.೪೦ರಷ್ಟು ಸಮೀಕ್ಷೆ ನಡೆದಿಲ್ಲ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರುಸಮೀಕ್ಷೆಗೆ ಆದೇಶ ಮಾಡಿದೆ. ಹೀಗಾಗಿ ಇಂದು ಪ್ರತಿಯೊಂದು ಸಮುದಾಯಕ್ಕೂ ಮಠಗಳಿವೆ, ಮಠಾಧೀಶರಿದ್ದಾರೆ, ನಾಯಕರಿದ್ದಾರೆ, ಸಂಘಗಳಿವೆ. ಅವರೆಲ್ಲರೂ ತಮ್ಮ ತಮ್ಮ ಸಮುದಾಯದ ಜನರಲ್ಲಿ ಅರಿವು, ಜಾಗೃತಿ ಮೂಡಿಸಿ ಪ್ರತಿಯೊಬ್ಬರನ್ನೂ ಈ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಮಾಡಿ ಸಂವಿಧಾನ ಉಳಿಸುವ ಕಾರ್ಯ ಮಾಡುವುದು ಅವಶ್ಯಕವಾಗಿದೆ ಎಂದರು.೧೯೩೧ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಆಯೋಗವನ್ನು ರಚಿಸಿ ಜಾತಿ ಸಮೀಕ್ಷೆಯನ್ನು ನಡೆಸಿದ್ದರು. ಅದಾದ ೮೦ ವರ್ಷಗಳ ಬಳಿಕ ರಾಜ್ಯಸರ್ಕಾರ ಜಾತಿ ಸಮೀಕ್ಷೆ ಕೈಗೊಂಡಿದ್ದರೂ ಅದು ಯಾರಿಗೂ ಸರ್ವಸಮ್ಮತವಾಗಿ ಕಂಡುಬರದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜಾತಿ ಗಣತಿ ಮಾಡಲಾಗುತ್ತಿದೆ. ಈಗಲಾದರೂ ಪ್ರತಿ ಸಮುದಾಯದವರು ಸರಿಯಾದ ವಿವರಗಳನ್ನು ಕೊಟ್ಟರೆ ಮೀಸಲಾತಿ ಪ್ರಮಾಣ, ಜಾತಿವಾರು ಪ್ರಾಧಾನ್ಯತೆ ದೊರಕಲಿದೆ ಎಂದರು.
ಜಾತಿ ಸಂಖ್ಯೆ ಕಡಿಮೆಯಾದರೆ ನಮ್ಮನ್ನು ಕೊನೆಗೆ ದೂಡುವರು, ಸೌಲಭ್ಯಗಳ ಪ್ರಮಾಣ ಕಡಿಮೆಯಾಗಲಿದೆ. ಆ ನಿಟ್ಟಿನಲ್ಲಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಸೆ.೨೨ ರಿಂದ ಅ.೭ರವರೆಗೆ ನಡೆಯುವ ಸಮುದಾಯದ ನಾಯಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಮೀಕ್ಷೆಯ ವೇಳೆ ಪ್ರತಿಯೊಂದು ಗ್ರಾಮ, ಮನೆ ಮನೆಗೆ ತೆರಳಿ ಸಮುದಾಯದ ಜನರು ಭಾಗವಹಿಸುವಂತೆ ಮಾಡಬೇಕು ಎಂದು ಸೂಚಿಸಿದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ರಾಜ್ಯಸರ್ಕಾರ ಮೊದಲ ಬಾರಿ ನಡೆದ ಜಾತಿ ಸಮೀಕ್ಷೆಯಲ್ಲಿ ಕೆಲವು ಗೊಂದಲವಿತ್ತು. ಕೆಲವರು ಸ್ವಾಗತಿಸಿದರು, ಮತ್ತೆ ಕೆಲವರು ವಿರೋಧ ಮಾಡಿದರು. ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಯಾಗಿ ವಿವಾದಕ್ಕೊಳಗಾದ ಹಿನ್ನೆಲೆಯಲ್ಲಿ ಅದಕ್ಕೆ ತಿಲಾಂಜಲಿ ಹಾಡುವುದಕ್ಕೆ ಇದೀಗ ಎರಡನೇ ಬಾರಿಗೆ ಸಮೀಕ್ಷೆ ಕೈಗೊಂಡಿದೆ. ಸಮೀಕ್ಷೆ ವೇಳೆ ಸಮುದಾಯದ ಜನರ ಜವಾಬ್ದಾರಿ ಹೆಚ್ಚಿದೆ. ಕೇವಲ ಚೀಟಿ ಅಂಟಿಸಿ ಹೋಗದೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.