ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗದ ಬದಲು ದಾಖಲೆಯ ನಿರುದ್ಯೋಗ ಸೃಷ್ಟಿಸಿ ಯುವಜನರ ಭವಿಷ್ಯ ಹಾಳು ಮಾಡುತ್ತಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ದೇಶದಲ್ಲಿ ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಸುಳ್ಳು ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗದ ಬದಲು ದಾಖಲೆಯ ನಿರುದ್ಯೋಗ ಸೃಷ್ಟಿಸಿ ಯುವಜನರ ಭವಿಷ್ಯ ಹಾಳು ಮಾಡುತ್ತಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಆರೋಪಿಸಿದ್ದಾರೆ.
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಟ್ಟ ಭರವಸೆಯಂತೆ ನಡೆದುಕೊಂಡಿದ್ದರೆ ಕಳೆದ 11 ವರ್ಷದಲ್ಲಿ 22 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ, ಅಷ್ಟು ಉದ್ಯೋಗ ಸೃಷ್ಟಿಸುವ ಬದಲು ದೇಶದಲ್ಲಿ ಐದು ದಶಕಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸೃಷ್ಟಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರದ 40 ಲಕ್ಷ ಮಂಜೂರಾದ ಹುದ್ದೆಗಳಲ್ಲಿ ಶೇ.25ರಷ್ಟು ಅಂದರೆ 10 ಲಕ್ಷ ಹುದ್ದೆಗಳು ಖಾಲಿಯಿವೆ. ರೈಲ್ವೆಯಲ್ಲಿ ಶೇ.40ರಷ್ಟು, ಗೃಹ ಇಲಾಖೆಯಲ್ಲಿ ಶೇ.33, ರಕ್ಷಣಾ ಇಲಾಖೆಯಲ್ಲಿ ಶೇ.12 ಹುದ್ದೆಗಳು ಖಾಲಿಯಿವೆ. ವೇಜ್ ಬಿಲ್ ಮಂಡಿಸುವಾಗ 2023ರ ಮಾ.1ರಂದು ಕೇಂದ್ರ ಸರ್ಕಾರವೇ ಅಧಿಕೃತವಾಗಿ 9.67 ಲಕ್ಷ ಹುದ್ದೆ ಖಾಲಿಯಿವೆ ಎಂದು ಹೇಳಿತ್ತು. ಈಗ ಈ ಸಂಖ್ಯೆ 10 ಲಕ್ಷ ದಾಟಿದೆ. ಈ ಪೈಕಿ ‘ಬಿ’ ಗ್ರೂಪ್ ನಲ್ಲಿ ಶೇ.33, ‘ಸಿ’ ಗ್ರೂಪ್ ನಲ್ಲಿ ಶೇ. 24, ‘ಎ’ ಗ್ರೂಪ್ ನಲ್ಲಿ ಶೇ.23 ಖಾಲಿ ಇವೆ. ಇದು ವರ್ಷದಲ್ಲಿ 2 ಕೋಟಿ ಸೃಷ್ಟಿಸುವುದಾಗಿ ಹೇಳಿದ್ದ ಫಕೀರ ಮಾಡಿರುವ ದ್ರೋಹ ಎಂದು ಕಿಡಿಕಾರಿದರು.
ನಿರುದ್ಯೋಗದ ಪ್ರಮಾಣ 7.8:
ಬಿಸಿನೆಸ್ ಸ್ಟಾಂಡರ್ಡ್ ಪತ್ರಿಕೆಯ ವರದಿಯ ಪ್ರಕಾರ 2017-18 ರ ಅವಧಿಯಲ್ಲಿ ದೇಶ ಕಳೆದ 45 ವರ್ಷಗಳಲ್ಲಿ ಎಂದೂ ಎದುರಿಸದಷ್ಟು ನಿರುದ್ಯೋಗದ ಸಮಸ್ಯೆಯನ್ನು ಎದುರಿಸಿತ್ತು. 1972-73 ರಲ್ಲಿ ಭಾರತದ ನಿರುದ್ಯೋಗ ಪ್ರಮಾಣ 6.1 ರಷ್ಟಿತ್ತು. ಆದರೆ 2017-18 ರಲ್ಲಿ ಈ ಪ್ರಮಾಣ ಮತ್ತಷ್ಟು ಕುಸಿದಿದೆ. ನಗರ ಪ್ರದೇಶದಲ್ಲಿ ನಿರುದ್ಯೋಗದ ಪ್ರಮಾಣ 7.8 ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 5.3 ರಷ್ಟಿದೆ ಎಂದು ಈ ವರದಿ ಹೇಳಿದೆ. ಈಗಲೂ ಈ ಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಸಿಎಂಐಇ ವರದಿ ಉಲ್ಲೇಖಿಸಿ, 2025ರ ಅಕ್ಟೋಬರ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ 7.5ರಷ್ಟಕ್ಕೆ ಏರಿದೆ. ಇದು ಕಳೆದ ಆರು ತಿಂಗಳಲ್ಲೇ ಗರಿಷ್ಠ ಮಟ್ಟ. ಒಟ್ಟಾರೆ ನೋಡಿದರೆ ಐದು ದಶಕಗಳ ಹಿಂದೆ ಇದ್ದ ನಿರುದ್ಯೋಗ ದರಕ್ಕಿಂತ ಹೆಚ್ಚು ಎಂದು ತಿಳಿಸಿದರು.56,435 ಭರ್ತಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕ್ರಮ:
ರಾಜ್ಯದಲ್ಲಿ ಒಳ ಮೀಸಲಾತಿ ಗೊಂದಲ ಬಗೆಹರಿಸಿರುವ ನಮ್ಮ ಕಾಂಗ್ರೆಸ್ ಸರ್ಕಾರ ರೋಸ್ಟರ್ ಬಿಂದುಗಳನ್ನು ಒಂದೇ ಬಾರಿಗೆ ಬಿಡುಗಡೆ ಮಾಡಿ ಬರೋಬ್ಬರಿ 56,435 ಸರ್ಕಾರಿ ಹುದ್ದೆ ತುಂಬಲು ಮುಂದಾಗಿದೆ.ಅಲ್ಲದೆ ಪ್ರತಿ ವರ್ಷ ಆದ್ಯತೆಯಾಗಿ ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಇದೇ ವೇಳೆ ಮಂಜುನಾಥ್ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.