ನಾಳೆ ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಪರೀಕ್ಷೆ

KannadaprabhaNewsNetwork |  
Published : Sep 28, 2024, 01:18 AM IST
 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಯ ಸ್ಪರ್ಧಾತ್ಮಕ ಸಾಮಾನ್ಯ ಪ್ರವೇಶ ಪರೀಕ್ಷಾ  ಸಿದ್ಧತೆಯ ಕುರಿತು ಅಪರ ಜಿಲ್ಲಾಧಿಕಾರಿ ಬಿಟಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ   ಪೂರ್ವಭಾವಿ ಸಭೆ ನಡೆಯಿತು.  | Kannada Prabha

ಸಾರಾಂಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಸೆ.29ರಂದು ನಡೆಯುವ ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ, ನಿಷ್ಪಕ್ಷಪಾತ, ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಸೆ.29ರಂದು ನಡೆಯುವ ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ, ನಿಷ್ಪಕ್ಷಪಾತ, ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಯ ಸ್ಪರ್ಧಾತ್ಮಕ ಸಾಮಾನ್ಯ ಪ್ರವೇಶ ಪರೀಕ್ಷಾ (ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ) ಸಿದ್ಧತೆಯ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ 46 ಪರೀಕ್ಷಾ ಕೇಂದ್ರಗಳಿಂದ ಒಟ್ಟು 17798 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಪೀಠೋಪಕರಣ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಕೊರತೆ ಆಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಅಗತ್ಯ ಕ್ರಮವಹಿಸಬೇಕು. ಪರೀಕ್ಷಾ ಕಾರ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವ ಮೂಲಕ ಯಾವುದೇ ಲೋಪದೋಷಗಳು ಆಗದಂತೆ ನಿಗಾವಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಹೇಳಿದರು.ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷೆಗಳನ್ನು ಶಾಂತ ವಾತವರಣದಲ್ಲಿ ನಡೆಸಲು ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ನಿಷೇಧಿತ ಪ್ರದೇಶವೆಂದು ಘೋಷಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿನ ಜೆರಾಕ್ಸ್ ಅಂಗಡಿ ಹಾಗೂ ಕಂಪ್ಯೂಟರ್ ಇಂಟರ್‌ನೆಟ್ ಕೇಂದ್ರಗಳನ್ನು ಪರೀಕ್ಷಾ ನಡೆಯುವ ದಿನದಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮುಚ್ಚುವಂತೆ ಆದೇಶಿಸಿಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಮೊಬೈಲ್ ಫೋನ್‌ಗಳನ್ನು ಹಾಗೂ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ತರದಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಉಪನ್ಯಾಸಕರು, ಕಚೇರಿ ಸಿಬ್ಬಂದಿಯೂ ಕೂಡ ಪರೀಕ್ಷೆ ನಡೆಯುವ ಅವಧಿಯಲ್ಲಿ ಮೊಬೈಲ್ ಫೋನುಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಹೇಳಿದರು.ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಪನಿರ್ದೇಶಕ ಪುಟ್ಟಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ. ಕುಮಾರಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ. ರೇಣುಪ್ರಸಾದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ವೀಕ್ಷಕರು ಇದ್ದರು.

46 ಪರೀಕ್ಷಾ ಕೇಂದ್ರಗಳು, 17798 ಅಭ್ಯರ್ಥಿಗಳು

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಹೊರತುಪಡಿಸಿ, ಚಳ್ಳಕೆರೆಯಲ್ಲಿ 6 ಪರೀಕ್ಷಾ ಕೇಂದ್ರಗಳಿಂದ 2352 ಅಭ್ಯರ್ಥಿಗಳು, ಚಿತ್ರದುರ್ಗ ನಗರದಲ್ಲಿ 26 ಪರೀಕ್ಷಾ ಕೇಂದ್ರಗಳಿಂದ 10082 ಅಭ್ಯರ್ಥಿಗಳು, ಹಿರಿಯೂರು 5 ಕೇಂದ್ರಗಳಿಂದ 2016 ಅಭ್ಯರ್ಥಿಗಳು, ಹೊಳಲ್ಕೆರೆ 4 ಪರೀಕ್ಷಾ ಕೇಂದ್ರಗಳಿಂದ 1272 ಅಭ್ಯರ್ಥಿಗಳು ಹಾಗೂ ಹೊಸದುರ್ಗದಲ್ಲಿ 5 ಪರೀಕ್ಷಾ ಕೇಂದ್ರಗಳಿಂದ 2076 ಅಭ್ಯರ್ಥಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 46 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, 17798 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ