ಮಂಗಳೂರು : ಕರಾವಳಿಯಲ್ಲಿ ಶನಿವಾರವೂ ಸಂಜೆ ವೇಳೆ ಮಳೆ ಬಿರುಸು ಪಡೆದಿದೆ. ದ.ಕ.ಜಿಲ್ಲೆಯಲ್ಲಿ ಸಂಜೆಯಿಂದ ಧಾರಾಕಾರ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಶನಿವಾರ ಮಳೆ ಬಿಸಿಲಿನ ಕಣ್ಣುಮುಚ್ಚಾಲೆ ನಡೆಯಿತುಭಾರತೀಯ ಹವಾಮಾನ ಇಲಾಖೆ ಜು.14 ರಂದು ‘ರೆಡ್ ಅಲರ್ಟ್’ ಘೊಷಿಸಿದ್ದು, ಭಾರೀ ಮಳೆಯಾಗುವ ನಿರೀಕ್ಷೆ ಇದೆ. \
ಮಂಗಳೂರು ನಗರದಲ್ಲಿ ಬೆಳಗ್ಗೆ ಬಿರುಸಿನಿಂದ ಕೂಡಿದ ಮಳೆಯಾಗಿದೆ. ಉಳಿದಂತೆ ಮೋಡ ಮತ್ತು ಆಗಾಗ್ಗೆ ಬಿಟ್ಟು ಬಿಟ್ಟು ಮಳೆಯಾಗಿದೆ.ದ.ಕ. ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನ ವರೆಗೆ ಮೂಡುಬಿದಿರೆಯಲ್ಲಿ ಗರಿಷ್ಠ 100.3 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 87 ಮಿ.ಮೀ. ಆಗಿದೆ. ಉಡುಪಿ ಜಿಲ್ಲೆಯಲ್ಲಿ ಶನಿವಾರ ಮುಂಜಾನೆವರೆಗೆ 24 ಗಂಟೆಗಳಲಿ ಜಿಲ್ಲೆಯಲ್ಲಿ ಸರಾಸರಿ 96.20 ಮಿ.ಮೀ. ಉತ್ತಮ ಮಳೆಯಾಗಿದೆ.
ನೇತ್ರಾವತಿ ನದಿ ನೀರಿನಲ್ಲಿ ಭಾರೀ ಏರಿಳಿತ
ಬಂಟ್ವಾಳ: ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದ್ದು, ಶನಿವಾರ ನೇತ್ರಾವತಿ ನದಿನೀರಿನಲ್ಲಿ ಭಾರೀ ಏರಿಳಿತ ಕಂಡು ಬಂದಿದೆ. ವಾರದ ಹಿಂದೆ ಭಾರೀ ಮಳೆ ಸುರಿದಿದ್ದರೂ ನೇತ್ರಾವತಿ ನದಿ ನೀರಿನ ಮಟ್ಟ 4 ಮೀಟರ್‌ನಲ್ಲೇ ಇತ್ತು. ಆದರೆ ಶುಕ್ರವಾರ ರಾತ್ರಿ ಏಕಾಏಕಿ ಏರಿಕೆಯಾಗಿ 6.1 ಮೀಟರ್ ಶನಿವಾರ ಬೆಳಗ್ಗೆ ದಾಖಲಾಗಿತ್ತು. 8.5 ಮೀಟರ್ ಅಪಾಯದ ಮಟ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ನದಿಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೆ ಶನಿವಾರ ಸಂಜೆಯ ವೇಳೆಗೆ ನೇತ್ರಾವತಿ ನದಿನೀರಿನ ಮಟ್ಟ 4.9 ಮೀಟರ್ ಗೆ ಇಳಿದಿದ್ದು ತಾಲೂಕು ಆಡಳಿತಕ್ಕೆ ಕೊಂಚ ನೆಮ್ಮದಿ ತಂದಿದೆ. ಹೀಗಿದ್ದರೂ ಬಂಟ್ವಾಳ ತಾಲೂಕು ಆಡಳಿತ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡಿದೆ
ಉಪ್ಪಿನಂಗಡಿ: ನದಿಗಳ ನೀರಿನ ಹರಿವಿನಲ್ಲಿ ಏರಿಳಿಕೆ
ಉಪ್ಪಿನಂಗಡಿ: ಶುಕ್ರವಾರ ರಾತ್ರಿ ನಿರಂತರ ಮಳೆ ಸುರಿದಿದ್ದು, ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಹರಿವಿನಲ್ಲಿ ಶನಿವಾರದಂದು ಮುಂಜಾನೆ ಹೆಚ್ಚಳ ಕಂಡು ಬಂದಿದ್ದು, ಸಾಯಂಕಾಲದ ವೇಳೆ ಅರ್ಧ ಮೀಟರ್ ನಷ್ಟು ಇಳಿಕೆಯನ್ನು ದಾಖಲಿಸಿದೆ.
ಪರಿಸರದಲ್ಲಿ ಸತತ ಮಳೆ ಸುರಿದರೂ ಪಶ್ಚಿಮಘಟ್ಟದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ನದಿ ನೀರಿನ ಹರಿವಿನಲ್ಲಿ ಶನಿವಾರದಂದು ಇಳಿಕೆ ಕಂಡು ಬಂದಿದೆ. ಮುಂಜಾನೆ ೨೬.೨ ಮೀಟರ್ ನೀರಿನ ಮಟ್ಟ ದಾಖಲಾಗಿದ್ದು, ಸಾಯಂಕಾಲದ ವೇಳೆ ೨೫.೭ ಮೀಟರ್ ದಾಖಲಾಗಿತ್ತು. ನಿವಾರ ದಿನದಾದ್ಯಂತ ಪದೇ ಪದೇ ಬಿರುಸಿನ ಮಳೆ ಸುರಿದಿದ್ದು, ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ.