ಕುಂಬಳೂರಲ್ಲಿ ನಿಲ್ಲದ ಕೆಂಪು ಬಸ್ಸುಗಳಿಗೆ ಬ್ರೇಕ್‌ ಹಾಕೋರ್ಯಾರು?!

KannadaprabhaNewsNetwork | Published : Sep 7, 2024 1:31 AM

ಸಾರಾಂಶ

ನೂತನ ಸಂಸದರು, ಶಾಸಕರು ಯಾರೇ ಆರಿಸಿಬಂದರೂ, ಜಿಲ್ಲೆಯ ಬಹುತೇಕ ಕಡೆ ಇಂದಿಗೂ ಸರಿಯಾಗಿ ಸರ್ಕಾರಿ ಬಸ್‌ ಸೇವೆಗಳಿಲ್ಲ. ಇದ್ದರೂ, ಸರ್ಕಾರಿ ಆದೇಶ ಜನರ ಸಮಸ್ಯೆಗಳಿಗೆ ಅನುಗುಣವಾಗಿ ಪಾಲನೆಯೂ ಆಗುತ್ತಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನ ಮಲೇಬೆನ್ನೂರು ಜನತೆ ಹಾಗೂ ಗ್ರಾಮೀಣ ಪ್ರದೇಶಗಳಿಂದ ಮಲೇಬೆನ್ನೂರಿಗೆ ಬಂದುಹೋಗುವವರು ಅನುಭವಿಸುತ್ತಿರುವ ಬವಣೆ.

- ಮಲೇಬೆನ್ನೂರಿಂದ ಹಳ್ಳಿಗಳಿಗೆ ಹೋಗುವವರಿಗೆ ನಿತ್ಯ ತಪ್ಪದ ಗೋಳು । ಸಾರಿಗೆ ವ್ಯವಸ್ಥಾಪಕರ ಆದೇಶ ಪಾಲಿಸದ ಡ್ರೈವರ್‌-ಸಿಬ್ಬಂದಿ- - - ಎಚ್.ಎಂ. ಸದಾನಂದ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ನೂತನ ಸಂಸದರು, ಶಾಸಕರು ಯಾರೇ ಆರಿಸಿಬಂದರೂ, ಜಿಲ್ಲೆಯ ಬಹುತೇಕ ಕಡೆ ಇಂದಿಗೂ ಸರಿಯಾಗಿ ಸರ್ಕಾರಿ ಬಸ್‌ ಸೇವೆಗಳಿಲ್ಲ. ಇದ್ದರೂ, ಸರ್ಕಾರಿ ಆದೇಶ ಜನರ ಸಮಸ್ಯೆಗಳಿಗೆ ಅನುಗುಣವಾಗಿ ಪಾಲನೆಯೂ ಆಗುತ್ತಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನ ಮಲೇಬೆನ್ನೂರು ಜನತೆ ಹಾಗೂ ಗ್ರಾಮೀಣ ಪ್ರದೇಶಗಳಿಂದ ಮಲೇಬೆನ್ನೂರಿಗೆ ಬಂದುಹೋಗುವವರು ಅನುಭವಿಸುತ್ತಿರುವ ಬವಣೆ.

ಮಲೇಬೆನ್ನೂರಿಗೆ ಕೆಲವೇ ಕಿಲೋ ಮೀಟರ್‌ ದೂರದ ಅಂತರದಲ್ಲಿರುವ ಗ್ರಾಮಗಳ ಜನರು ಈ ಮಾರ್ಗವಾಗಿ ಸಾಗುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಹಗಲು ಹಾಗೂ ಇರುಳಲ್ಲೂ ಅನೇಕ ಸಮಸ್ಯೆ, ಸವಲತ್ತುಗಳಿಗೆ ಸಂಚರಿಸುವ ಜನರಿದ್ದಾರೆ. ಆದರೆ, ಇವರಿಗೆ ಸರ್ಕಾರಿ ಬಸ್‌ಗಳ ಚಾಲಕರು, ಕಂಡಕ್ಟರ್‌ಗಳ ಕಿರಿಕಿರಿ ನಿತ್ಯಸತ್ಯ.

ಮಲೇಬೆನ್ನೂರಿನಿಂದ ಕುಂಬಳೂರಿಗೆ ಬಂದಿಳಿಯುವವರು ಸರ್ಕಾರಿ ಬಸ್‌ಗಳ ಕಂಡಕ್ಟರ್‌- ಚಾಲಕರಿಗೆ ಸಮಯ ಹಾಳು ಮಾಡುವವರ ರೀತಿ ಕಾಣುತ್ತಿದ್ದಾರೇನೋ? ಇದೇ ಕಾರಣಕ್ಕೆ ಬಸ್ ಸಿಬ್ಬಂದಿ ಸಂಸ್ಥೆ ನೀಡಿದ ಸೂಚನೆಗಳನ್ನು ಉಲ್ಲಂಘಿಸುತ್ತಿದ್ದಾರೆ.

ಸೂಚನೆ ಪಾಲನೆ ಆಗುತ್ತಿಲ್ಲ:

ಹತ್ತು ವರ್ಷಗಳ ಹಿಂದೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮಸ್ಥರು 2 ಕಿಲೋ ಮೀಟರ್‌ ಅಂತರದ ಮಲೇಬೆನ್ನೂರಿಗೆ ತೆರಳಿಯೇ ಬಸ್ ಹತ್ತಬೇಕಿತ್ತು. ಕುಂಬಳೂರಿನಲ್ಲಿ ಸರ್ಕಾರಿ ಬಸ್‌ಗಳು ಸ್ಟಾಪ್‌ ಕೊಡುತ್ತಿರಲಿಲ್ಲ. ಇದರಿಂದ ತಾಲೂಕು ಕಚೇರಿಗಳಿಗೆ ತೆರಳುವ ಗ್ರಾಮಸ್ಥರು, ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ತೆರಳುವ ರೋಗಿಗಳು, ಇನ್ನಿತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈ ಅವ್ಯವಸ್ಥೆ ವಿರುದ್ಧ ಸಿಡಿದ ಗ್ರಾಮದ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿ, ಇಲಾಖೆ ಅಧಿಕಾರಿಗಳನ್ನು ಎಚ್ಚರಿಸಿ, ಕುಂಬಳೂರಲ್ಲಿ ಸರ್ಕಾರಿ ಬಸ್‌ಗಳ ನಿಲುಗಡೆ ಸೌಲಭ್ಯ ನೀಡುವಂತೆ ಎಚ್ಚರಿಸಿದ್ದವು. ಅಲ್ಲದೇ, ಗ್ರಾಮ ಪಂಚಾಯಿತಿ ವತಿಯಿಂದ ಮನವಿಯನ್ನೂ ಸಲ್ಲಿಸಲಾಗಿತ್ತು. ಇದರ ಪರಿಣಾಮ ಸಂಸ್ಥೆ ನಿಲುಗಡೆಗೆ ಸೂಚನೆ ನೀಡಿತ್ತು. ಆದರೆ, ಪಾಲನೆಯಾಗುತ್ತಿಲ್ಲ.

ಕುಂಬಳೂರಲ್ಲಿ ಬಸ್‌ ನಿಲುಗಡೆ ಸೌಲಭ್ಯದ ಜನರ ಒತ್ತಾಯಕ್ಕೆ ಮಣಿದ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಸೌಲಭ್ಯ ಕಲ್ಪಿಸಿ ಆದೇಶ ಹೊರಡಿಸಿದ್ದರು. ಆದೇಶ ಸಂಖ್ಯೆ ೩೯೦೪/ ೨೦೧೩ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಹಾಗೂ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳ ವೇಗಧೂತ ಸಾರಿಗೆಗಳ ಬಸ್‌ಗಳು (ಅಂತರ ರಾಜ್ಯ ಸಾರಿಗೆ ಬಸ್‌ಗಳನ್ನು ಹೊರತುಪಡಿಸಿ) ಕುಂಬಳೂರಲ್ಲಿ ಕೋರಿಕೆ ನಿಲುಗಡೆ ಮಾಡಿದ್ದು, ಸೆಪ್ಟಂಬರ್ -೨೦೧೩ರಿಂದ ಜಾರಿಗೆ ಬರುವಂತೆ ಆದೇಶ ನೀಡಿದ್ದಾರೆ. ಆದರೆ, ಕೆಲ ಬಸ್‌ಗಳ ಡ್ರೈವರ್‌-ಕಂಡಕ್ಟರ್‌ಗಳಿಗೆ ಈ ಆದೇಶ ಪಾಲಿಸುವ ಮನಸ್ಸಿಲ್ಲವಾಗಿದೆ. ಪರಿಣಾಮ ಕುಂಬಳೂರಿಗೆ ತೆರಳುವವರು ಅಥವಾ ಕುಂಬಳೂರಿನಿಂದ ಮಲೇಬೆನ್ನೂರಿಗೆ ಬಂದುಹೋಗುವವರು "ದಮ್ಮಯ್ಯಾ... ದತ್ತಯ್ಯಾ... " ಎಂದು ಬೇಡಿ ಬಸ್‌ ಸೌಕರ್ಯ ಗಟ್ಟಿಸಿಕೊಳ್ಳುವ ದುಸ್ಥಿತಿ ನಿರ್ಮಾಣವಾಗಿದೆ. ಬಸ್‌ಗಳವರು ನಿವಾಕರಿಸಿದರೆ ಕುಂಬಳೂರು ಪ್ರಯಾಣಿಕರಿಗೆ ಆಟೋಗಳೋ, ಲಾರಿಗಳ ನೆರವು ಪಡೆದು ಊರು ಸೇರಿಕೊಳ್ಳಬೇಕಾಗಿದೆ.

ದುಬಾರಿ ದರದ ಬೇಸರ:

ಕುಂಬಳೂರಿಂದ ಮಲೇಬೆನ್ನೂರಿಗೆ ಪ್ರಯಾಣ ದರ ಆಟೋಗೆ ₹೧೦ ದರವಿದೆ. ಹರಿಹರದಿಂದ ಮಲೇಬೆನ್ನೂರಿಗೆ ₹೧೯ ಕಿಮೀ ಪ್ರಯಾಣ ದರ ಬಸ್‌ಗೆ ₹೨೮ ಇದೆ. ಅದೇ ಆಟೋದವರು ಒಬ್ಬರಿಗೆ ₹೩೦ ದರ ಪಡೆಯುತ್ತಾರೆ. ರಾತ್ರಿವೇಳೆ, ಮಳೆಗಾಲದಲ್ಲಿ ಕುಂಬಳೂರು ಪ್ರಯಾಣ ಇನ್ನಿಲ್ಲದ ಸಮಸ್ಯೆ, ಸಂಕಟಗಳ ಸೃಷ್ಟಿಸುವಂತಿರುತ್ತದೆ. ದುಬಾರಿ ದರ ತೆರಬೇಕಾಗುತ್ತದೆ. ಇನ್ನು ನಿರ್ವಾಹಕರೊಬ್ಬರು ನೀಡಿದ ರೂಟ್‌ ಕಾರ್ಡ್‌ನಲ್ಲಿ ಕುಂಬಳೂರು ಹೆಸರೇ ಇಲ್ಲದಿರುವುದು ಸಾರಿಗೆ ಇಲಾಖೆ, ಸಾರಿಗೆ ಸಂಸ್ಥೆ ಕಾರ್ಯವೈಖರಿ ಪ್ರಶ್ನಿಸುವಂತಿದೆ.

ದೂರದ ಜಿಲ್ಲೆಗಳಿಂದ ಪ್ರಯಾಣಿಕರು ಬಂದರೆ ಮಾತ್ರ ಕೆಲ ಶಿವಮೊಗ್ಗ, ಧರ್ಮಸ್ಥಳ, ಚಿಕ್ಕಮಗಳೂರು, ಹೊಸಪೇಟೆ, ಕೊಟ್ಟೂರು ಮತ್ತು ಮಂಗಳೂರು ಮಾರ್ಗಗಳ ಬಸ್‌ಗಳು ನಿಲುಗಡೆ ಮಾಡುತ್ತವೆ. ಇನ್ನು ಕೆಲ ಬಸ್‌ಗಳ ಸಿಬ್ಬಂದಿ ಕುಂಬಳೂರು ಪ್ರಯಾಣಿಕರು ಹತ್ತುವಾಗಲೇ "ಬಸ್‌ ಅಲ್ಲಿ ನಿಲ್ಲಸಲ್ಲ " ಎಂದು ಹೇಳಿ, ಎರಡು ಬಾರಿ ಸೀಟಿ ಊದಿ ಬಸ್‌ ಓಡಿಕೊಂಡು ಹೋಗುತ್ತಾರೆ. ಇದರಿಂದ ಕುಂಬಳೂರು ಜನರು ಹಲವಾರು ಬಾರಿ ಸಮಸ್ಯೆಗೆ ಸಿಲುಕಿದ್ದಾರೆ. ಗ್ರಾಮೀಣ ಪ್ರಯಾಣಿಕರ ಹಿತದೃಷ್ಟಿಯಿಂದ ಇಲಾಖೆ, ಸಂಸ್ಥೆ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

- - - ಬಾಕ್ಸ್‌-1 * ಅಂಗವಿಕಲನನ್ನು ಅರ್ಧ ದಾರಿಯಲ್ಲೇ ಇಳಿಸಿದ್ರು

ಕೆಲವು ಸರ್ಕಾರಿ ಬಸ್‌ಗಳ ನಿರ್ವಾಹಕರು, ಚಾಲಕರು ಹಳ್ಳಿಗಳಲ್ಲಿ ಬಸ್‌ಗಳನ್ನು ನಿಲುಗಡೆ ಮಾಡುತ್ತಿಲ್ಲ. ಅಷ್ಟೇ ಅಲ್ಲ, ನಾನಾ ಕಾರಣಗಳನ್ನೊಡ್ಡಿ ಮಹಿಳೆಯರನ್ನು ಮಾರ್ಗ ಮಧ್ಯೆಯೇ ಇಳಿಸಿ ತೆರಳಿದ್ದಾರೆ. ಶಿವಮೊಗ್ಗದಿಂದ ಹುಬ್ಬಳ್ಳಿಗೆ ತೆರಳುವ ಕೆಲವು ಬಸ್‌ಗಳ ಆಟಾಟೋಪವೇನೂ ಕಡಿಮೆಯಿಲ್ಲ. ಇತ್ತೀಚೆಗೆ ಅಂಗವಿಕಲ ವ್ಯಕ್ತಿ ಕೆ.ಮಲ್ಲಿಕಾರ್ಜುನ ಎಂಬಾತ ಮಲೇಬೆನ್ನೂರಿನಿಂದ ಕುಂಬಳೂರು ಕಡೆಗೆ ಹೋಗಲೆಂದು ಬಸ್‌ಗೆ ಹತ್ತಿದ್ದಾನೆ. ಆದರೆ, ಬಸ್‌ ಸಿಬ್ಬಂದಿ ಕೆಲವೇ ದೂರದವರೆಗೆ ತೆರಳಿದ ಬಳಿಕ ಆತನನ್ನು ಅವಾಚ್ಯವಾಗಿ ನಿಂದಿಸಿ, ಬಸ್‌ನಿಂದ ಕೆಳಗಿಳಿಸಿದ್ದಾರೆ. ಈ ವಿಚಾರಕ್ಕಾಗಿ ಬಸ್‌ಗಳ ಚಾಲಕರು ಕುಂಬಳೂರು ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ದುರ್ವರ್ತನೆ ಮುಂದುವರಿದರೆ ಪ್ರತಿಭಟನೆ ಎಚ್ಚರಿಕೆಯನ್ನು ಗ್ರಾಮಸ್ಥರು ರವಾನಿಸಿದ್ದಾರೆ.

- - -

ಬಾಕ್ಸ್‌-2 * ಶಿಕ್ಷಕಿಗೂ ಕರುಣೆ ತೋರದ ಸಿಬ್ಬಂದಿ

ಪ್ರತಿನಿತ್ಯ ಹಾವೇರಿಯಿಂದ ಕುಂಬಳೂರಿಗೆ ಶಾಲೆಗೆ ಆಗಮಿಸುವ ಶಿಕ್ಷಕಿ ಶೃತಿ ಅವರೂ ಬಸ್‌ಗಳ ಸಿಬ್ಬಂದಿಯಿಂದ ಸಮಸ್ಯೆಗೆ ಸಿಲುಕಿದ್ದಾರೆ. ಬಸ್ ನಿಲ್ಲಿಸಬೇಕೆಂಬ ಆದೇಶ ನಿರ್ವಾಹಕರ ಬಳಿಯೇ ಇದೆ ಎಂದು ಅವರು ವಾದ ಮಾಡಿದರೂ, "ಬಸ್‌ ಅಲ್ಲಿ ನಿಲ್ಲಿಸಲ್ಲ, ಹತ್ತಲೇ ಬೇಡಿ.. " ಎಂದು ಕಡ್ಡಿ ಎರಡು ತುಂಡು ಮಾಡಿದಂತೆ ಉತ್ತರ ನೀಡಿದ್ದರಿಂದ ಶಿಕ್ಷಕಿ ತೊಂದರೆ ಎದುರಿಸುವಂತಾಗಿದೆ. ಗ್ರಾಮಸ್ಥರು ನೀಡಿದ ಮಾಹಿತಿಯಂತೆ, ಹುಬ್ಬಳ್ಳಿಗೆ ತೆರಳುವ ಬಸ್- ಕೆಎ.೬೩.ಎಫ್. ೨೩೮, ಕೆಎ. ೬೩.ಎಫ್- ೨೩೬, ಕೆಎ.೦ ಎಫ್- ೫೩೨೮ ಈ ಕ್ರಮ ಸಂಖ್ಯೆಗಳ ಬಸ್‌ಗಳು ಸೇರಿದಂತೆ ಇನ್ನಿತರ ಸಾರಿಗೆ ಬಸ್‌ಗಳವರು ಕುಂಬಳೂರು ಜನರಿಗೆ ಅಸಹಕಾರ ನೀಡುತ್ತಿವೆ ಎಂದು ದೂರಿದ್ದಾರೆ.

- - -

ಕೋಟ್‌

ಸಾರಿಗೆ ಬಸ್‌ಗಳು ಕುಂಬಳೂರು ಗ್ರಾಮದಲ್ಲಿ ನಿಲ್ಲಿಸಬೇಕು. ಈ ಬಗ್ಗೆ ಸಂಬಂಧಿಸಿದ ಹ್ಯಾಂಡ್‌ಸೆಟ್‌ನಲ್ಲಿ ಫೀಡ್ ಆಗಿರುತ್ತದೆ. ಕಂಡಕ್ಟರ್‌/ ಡ್ರೈವರ್‌ ಸುಳ್ಳು ಹೇಳಲಿಕ್ಕೆ ಅವಕಾಶವಿಲ್ಲ. ಗ್ರಾಮೀಣರು ಆರೋಪಿಸಿದ ಸಾರಿಗೆ ಬಸ್‌ಗಳ ನಂಬರ್‌ ಪ್ಲೇಟ್‌ ಸಂಖ್ಯೆಗಳನ್ನು ಪಡೆದಿದ್ದೇವೆ. ಕುಂಬಳೂರು ಪ್ರಯಾಣಿಕರಿದ್ದಲ್ಲಿ ಸರ್ಕಾರಿ ಬಸ್‌ ಕಡ್ಡಾಯವಾಗಿ ನಿಲುಗಡೆ ಮಾಡಬೇಕೆಂದು ಸೂಚನೆ ನೀಡಲಾಗುವುದು

- ನಾಗರಾಜ್‌, ವ್ಯವಸ್ಥಾಪಕ, ಹುಬ್ಬಳ್ಳಿ ಡಿಪೋ ವಿಭಾಗ

- - -

-ಚಿತ್ರ-೧: ಕುಂಬಳೂರು ಜನರಿಗೆ ನಿಲುಗಡೆ ಮಾಡದೇ ತೆರಳುತ್ತಿರುವ ಸರ್ಕಾರಿ ಬಸ್.

-ಚಿತ್ರ-೨: ಕುಂಬಳೂರಿನಲ್ಲಿ ಬಸ್‌ ನಿಲುಗಡೆ ಮಾಡಬೇಕೆಂಬ ಆದೇಶದ ಪ್ರತಿ.

-ಚಿತ್ರ-೩: ನಿರ್ವಾಹಕನೊಬ್ಬನ ಬಳಿ ಕುಂಬಳೂರು ಹೆಸರೇ ಇಲ್ಲದ ಬಸ್‌ ನಿಲುಗಡೆ ರೂಟ್ ಕಾರ್ಡ್.

- - -

Share this article