ಬಳ್ಳಾರಿ: ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಜನಾರ್ದನ ರೆಡ್ಡಿ ನಡುವಿನ ಸಂಘರ್ಷ ಬೆನ್ನಲ್ಲೇ ಈ ಇಬ್ಬರು ನಾಯಕರ ಪರವಾದ ವಾಲ್ಮೀಕಿ ಸಮುದಾಯದ ಮುಖಂಡರು ಬೆಂಬಲಕ್ಕೆ ನಿಂತಿದ್ದಾರೆ. ಇಲ್ಲಿನ ಖಾಸಗಿ ಹೋಟೆಲ್‌ವೊಂದರಲ್ಲಿ ಶನಿವಾರ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ ರೆಡ್ಡಿ-ರಾಮುಲು ಬೆಂಬಲಿತ ವಾಲ್ಮೀಕಿ ಸಮಾಜದ ಗಣ್ಯರು ತಮ್ಮ ನಾಯಕನನ್ನು ಸಮರ್ಥಿಸಿಕೊಂಡಿದ್ದಾರೆ.
ಶ್ರೀರಾಮುಲು ಬೆಂಬಲಿಸಿ ಮಾಧ್ಯಮಗೋಷ್ಠಿ ನಡೆಸಿದ ಸುಮಾರು 50ಕ್ಕೂ ಹೆಚ್ಚು ಮುಖಂಡರು, ರಾಜಕೀಯವಾಗಿ ಶ್ರೀರಾಮುಲು ಅವರನ್ನು ತುಳಿಯಲು ಜನಾರ್ದನ ರೆಡ್ಡಿ ಸಂಚು ಮಾಡಿದ್ದಾರೆ ಎಂದು ದೂರಿದರು.
ಶ್ರೀರಾಮುಲು ಅವರನ್ನು ನಾನೇ ಬೆಳೆಸಿದ್ದೇನೆ ಎಂಬಂತೆ ಜನಾರ್ದನ ರೆಡ್ಡಿ ಮಾತನಾಡುತ್ತಿದ್ದಾರೆ. ಶ್ರೀರಾಮುಲು ಸ್ವಂತ ಶಕ್ತಿಯಿಂದ ಬೆಳೆದಿದ್ದಾರೆ. ರೆಡ್ಡಿಯ ಹಂಗಿನಲ್ಲಿ ಬೆಳೆದಿಲ್ಲ. ಶ್ರೀರಾಮುಲುಗೆ ವಾಲ್ಮೀಕಿ ಸಮುದಾಯದ ಬೆಂಬಲವಿದೆ. ರೆಡ್ಡಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.ಶ್ರೀರಾಮುಲು ಕೊಲೆಗಡುಕ ಎಂಬಂತೆ ಜನಾರ್ದನ ರೆಡ್ಡಿ ಮಾತನಾಡಿದ್ದಾರೆ. ಕೊಲೆಗಡುಕನ ಜೊತೆ ಇಷ್ಟು ದಿನ ಏಕೆ ಸ್ನೇಹ ಮಾಡಿದಿರಿ? ನಿಮಗೆ ಆಗ ಈ ವಿಷಯ ಗೊತ್ತಿರಲಿಲ್ಲವೇ? ಜನಾರ್ದನ ರೆಡ್ಡಿ "ಎನ್ನೋಬಲ್ " ಎಂಬ ಸಂಸ್ಥೆ ನಡೆಸುತ್ತಿರುವಾಗಲೇ ಶ್ರೀರಾಮುಲು ರಾಜಕೀಯಕ್ಕೆ ಬಂದಿದ್ದರು. ಇದನ್ನು ರೆಡ್ಡಿ ಮರೆಯಬಾರದು. ತಾನೇ ಶ್ರೀರಾಮುಲು ಅವರನ್ನು ಉದ್ಧಾರ ಮಾಡಿದಂತೆ ಮಾತಾಡಬಾರದು ಎಂದರು.
ಕಳೆದ ಚುನಾವಣೆಯಲ್ಲಿ ಸ್ವಂತ ಅಣ್ಣ ಸೋಮಶೇಖರ ರೆಡ್ಡಿಯನ್ನೇ ಸೋಲಿಸಲು ಜನಾರ್ದನ ರೆಡ್ಡಿ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದರು. ಬಂಗಾರು ಹನುಮಂತು, ಕೆ.ಎಸ್. ದಿವಾಕರ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರ ರಾಜಕೀಯ ಭವಿಷ್ಯವನ್ನು ಅಂತ್ಯ ಮಾಡಲು ರೆಡ್ಡಿ ಹುನ್ನಾರ ನಡೆಸಿದ್ದಾರೆ. ವಾಲ್ಮೀಕಿ ಸಮಾಜದ ಮುಖಂಡ ಶಾಸಕ ಬಿ.ನಾಗೇಂದ್ರ ಬೆಳವಣಿಗೆಯನ್ನು ಸಹ ರೆಡ್ಡಿ ಸಹಿಸಲಿಲ್ಲ. ನಾಗೇಂದ್ರ ಅವರನ್ನು ಟಿಶ್ಯೂ ಪೇಪರ್ ಎಂದು ಅಪಮಾನ ಮಾಡಿದ್ದಾರೆ ಎಂದು ವಾಲ್ಮೀಕಿ ಮುಖಂಡರು ಆರೋಪಿಸಿದರು.
ವಾಲ್ಮೀಕಿ ಸಮಾಜದ ಗಣ್ಯರಾದ ಎನ್.ಸತ್ಯನಾರಾಯಣ, ಜೋಳದರಾಶಿ ತಿಮ್ಮಪ್ಪ, ಶಿವಾನಂದ, ಗಡ್ಡ ತಿಮ್ಮಪ್ಪ, ಗವಿಸಿದ್ದಪ್ಪ, ಹನುಮಂತಪ್ಪ, ಜನಾರ್ದನ ನಾಯಕ, ಮೆಡಿಕಲ್ ಮಲ್ಲಿಕಾರ್ಜುನ, ಉಮೇಶ್, ರಾಮು ದಮ್ಮೂರು, ಬದಾಮಿ ಶಿವಲಿಂಗನಾಯಕ, ರೂಪನಗುಡಿ ಗೋವಿಂದಪ್ಪ ಉಪಸ್ಥಿತರಿದ್ದರು.
ಇನ್ನು ಜನಾರ್ದನ ರೆಡ್ಡಿ ಪರ ಸುದ್ದಿಗೋಷ್ಠಿ ನಡೆಸಿದ ವಾಲ್ಮೀಕಿ ಸಮಾಜದ ಮುಖಂಡ ದರಪ್ಪ ನಾಯಕ ಮತ್ತಿತರರು, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಂದ ವಾಲ್ಮೀಕಿ ಸಮುದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಶ್ರೀರಾಮುಲು, ಜನಾರ್ದನ ರೆಡ್ಡಿ ನಡುವೆ ಆಸ್ತಿ ವಿಚಾರದಲ್ಲಿ ಮನಸ್ತಾಪವಾಗಿದೆ. ರೆಡ್ಡಿ, ರಾಮುಲು, ಸುರೇಶ್ ಬಾಬು, ಅಣ್ಣ-ತಮ್ಮಂದಿರಂತೆ ಇದ್ದರು. 14 ವರ್ಷದ ನಂತರ ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದಿದ್ದಾರೆ. ಅಣ್ಣ ತಮ್ಮಂದಿರಂತೆ ಇದ್ದಾಗ ಮಾಡಿದ ಆಸ್ತಿಯನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಜನಾರ್ದನ ರೆಡ್ಡಿ ಅವರಿಗೆ ವಾಪಸ್ ಕೊಡಬೇಕು ಎಂದು ಆಗ್ರಹಿಸಿದರು.
ರಾಮುಲು - ರೆಡ್ಡಿ ನಡುವೆ ಉಂಟಾದ ಭಿನ್ನಾಭಿಪ್ರಾಯವನ್ನು ಪಕ್ಷದ ನಾಯಕರು ಸರಿ ಪಡಿಸುತ್ತಿದ್ದಾರೆ. ಈ ವಿಚಾರವನ್ನು ಜಾತಿ ಹೆಸರಲ್ಲಿ ಎತ್ತಿಕಟ್ಟುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.