ಬಿತ್ತನೆ ಬೀಜದ ದರ ಕಡಿಮೆ ಮಾಡಿ

KannadaprabhaNewsNetwork | Published : May 31, 2024 2:16 AM

ಸಾರಾಂಶ

ಭೀಕರ ಬರದ ನಡುವೆ ಜಿಲ್ಲೆಯ ರೈತರಿಗೆ ಅತೀ ಕಡಿಮೆ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡುವುದನ್ನು ಬಿಟ್ಟು ಕಳೆದ ವರ್ಷಕ್ಕಿಂತ ಹೆಚ್ಚು ದರ ನಿಗದಿ ಮಾಡಿ ಸರ್ಕಾರ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ವಿತರಣೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಕೂಡಲೆ ಸರ್ಕಾರ ಅತೀ ಕಡಿಮೆ ದರದಲ್ಲಿ ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ಜಿಲ್ಲಾಧ್ಯಕ್ಷ ಎಸ್.ಬಿ.ಕೆಂಬೋಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಇಂಡಿ

ಭೀಕರ ಬರದ ನಡುವೆ ಜಿಲ್ಲೆಯ ರೈತರಿಗೆ ಅತೀ ಕಡಿಮೆ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡುವುದನ್ನು ಬಿಟ್ಟು ಕಳೆದ ವರ್ಷಕ್ಕಿಂತ ಹೆಚ್ಚು ದರ ನಿಗದಿ ಮಾಡಿ ಸರ್ಕಾರ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ವಿತರಣೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಕೂಡಲೆ ಸರ್ಕಾರ ಅತೀ ಕಡಿಮೆ ದರದಲ್ಲಿ ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ಜಿಲ್ಲಾಧ್ಯಕ್ಷ ಎಸ್‌.ಬಿ.ಕೆಂಬೋಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭೀಕರ ಬರದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ, ಸದಾ ಬರಗಾಲಕ್ಕೆ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯ ರೈತರು ನೀರಿನ ಕೊರತೆಯಿಂದ ಬೆಳೆ ಬಾರದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜಮೀನಿನಲ್ಲಿ ಬೆಳೆದ ಬೆಳೆಗಳ ಮೇಲೆಯೇ ಕುಟುಂಬ ನಿರ್ವಹಣೆ ಮಾಡುವ ರೈತರು ಕಳೆದ ವರ್ಷ ಮುಂಗಾರು,ಹಿಂಗಾರು ಮಳೆ ಬಾರದೆ ಇರುವುದರಿಂದ ಎರಡು ಬೆಳೆಗಳನ್ನು ಕಳೆದುಕೊಂಡು ಕುಟುಂಬ ನಿರ್ವಹಣೆಗೂ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ಸಹಾಯಕ್ಕೆ ಬರಬೇಕು. ರೈತ ನಾಡಿನ ಬೆನ್ನೆಲುಬು ಎಂದು ಸಭೆ ಸಮಾರಂಭಗಳಿಗೆ ಹೇಳುವ ಸಂಪ್ರದಾಯವಾಗದೇ,ಅವರ ಕಷ್ಟಕಾಲದಲ್ಲಿ ಸರ್ಕಾರ ಬರಬೇಕು. ಪ್ರಸಕ್ತ ವರ್ಷದ ಕೃಷಿ ಚಟುವಟಿಕೆಗಳು ಆರಂಭಗೊಳ್ಳುವ ಮುಂಚೆ ಅತೀ ಕಡಿಮೆ ಬೆಲೆಗೆ ಬೀಜಗಳನ್ನು ವಿತರಣೆ ಮಾಡಬೇಕು. ಬೀಜಗಳ ದರ ಏರಿಕೆ ಮಾಡಿರುವುದನ್ನು ಹಿಂದೆ ಪಡೆಯಬೇಕು. ಒಂದು ವೇಳೆ ಬೀಜದ ದರಗಳನ್ನು ಕಡಿಮೆ ಮಾಡದಿದ್ದರೆ ಜಿಲ್ಲೆಯಲ್ಲಿ ರೈತರು ದೊಡ್ಡ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕೃಷಿ ಚಟುವಟಿಕೆಗಳು ಆರಂಭಗೊಳ್ಳುವಷ್ಟರಲ್ಲಿ ಜಿಲ್ಲೆಗೆ ಬೇಕಾಗುವಷ್ಟು ಗೊಬ್ಬರ ದಾಸ್ತಾನು ಆಗಬೇಕು. ಗೊಬ್ಬರ ಅಂಗಡಿಗಳ ಮುಂದೆ ಗೊಬ್ಬರ ದರ ಕಡ್ಡಾಯವಾಗಿ ನೇತು ಹಾಕುವಂತೆ ನೋಡಿಕೊಳ್ಳಬೇಕು. ಗೊಬ್ಬರ ದಾಸ್ತಾನು ಮಾಡಿಕೊಂಡು ಗೊಬ್ಬರದ ಅಭಾವ ಸೃಷ್ಠಿ ಮಾಡುವ ಉದ್ದೇಶವನ್ನು ಗೊಬ್ಬರ ಅಂಗಡಿಯ ಯಾರೂ ಮಾಡಬಾರದು ಎಂದು ಅವರು ಹೇಳಿದರು.

Share this article