ಬೆಂ-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ತಗ್ಗಿದ ಅಪಘಾತಗಳು

KannadaprabhaNewsNetwork |  
Published : Jun 17, 2024, 01:35 AM ISTUpdated : Jun 17, 2024, 05:43 AM IST
1,2.ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ | Kannada Prabha

ಸಾರಾಂಶ

ರಾಮನಗರ: ಪೊಲೀಸ್‌ ಇಲಾಖೆ ಕೈಗೊಂಡ ಸುರಕ್ಷತಾ ಕ್ರಮಗಳ ಪರಿಣಾಮ ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖಗೊಂಡಿದೆ.

ರಾಮನಗರ: ಪೊಲೀಸ್‌ ಇಲಾಖೆ ಕೈಗೊಂಡ ಸುರಕ್ಷತಾ ಕ್ರಮಗಳ ಪರಿಣಾಮ ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖಗೊಂಡಿದೆ.

ನಿರಂತರ ಅಪಘಾತಗಳಿಂದಾಗಿ ಡೆತ್‌ ವೇ ಎಂಬ ಕಳಂಕಕ್ಕೆ ಪಾತ್ರವಾಗಿದ್ದ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ 2023 ಹಾಗೂ 2024ನೇ ಸಾಲಿಗೆ ಹೋಲಿಕೆ ಮಾಡಿದರೆ ಅಪಘಾತಗಳ ಪ್ರಮಾಣ ತಗ್ಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಸಾಲು ಸಾಲು ಅಪಘಾತಗಳಿಂದಾಗಿ ಎನ್ ಎಚ್ 275 ಎಕ್ಸ್ ಪ್ರೆಸ್ ವೇ ಸಾವಿನ ಹೆದ್ದಾರಿ ಎಂದೇ ಕುಖ್ಯಾತಿ ಪಡೆದಿತ್ತು. ಹೆದ್ದಾರಿಯಲ್ಲಿ ಸಂಭವಿಸುತ್ತಿದ್ದ ಅಪಘಾತಗಳು ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳು ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು.

ಆನಂತರ ಸಂಚಾರ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್‌, ಪೊಲೀಸ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಹೆದ್ದಾರಿಗಿಳಿದು ಅಪಘಾತ ಸಂಭವಿಸಲು ಕಾರಣವಾಗಿರುವ ಅಂಶಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಂಡರು. ಇದರ ಪರಿಣಾಮ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಅಪಘಾತದ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ತಗ್ಗಿದ ಅಪಘಾತಗಳ ಸಂಖ್ಯೆ:

ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 2023ನೇ ಸಾಲಿನಲ್ಲಿ ಜನವರಿಯಿಂದ ಮೇ ತಿಂಗಳವರೆಗೆ 288 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 100 ಮಂದಿ ಸಾವನ್ನಪ್ಪಿದ್ದರೆ, 301 ಮಂದಿ ಗಾಯಗೊಂಡಿದ್ದರು. 2024ರ ಜನವರಿಯಿಂದ ಮೇ ತಿಂಗಳವರೆಗೆ ಒಟ್ಟು 125 ಅಪಘಾತಗಳು ನಡೆದಿದ್ದು, 31 ಮಂದಿ ಮೃತಪಟ್ಟರೆ, 167 ಮಂದಿ ಗಾಯಗೊಂಡಿದ್ದಾರೆ.

2023ರ ಜನವರಿಯಲ್ಲಿ 13 ಮಾರಣಾಂತಿಕ ಅಪಘಾತ ಸೇರಿ 52 ಅಪಘಾತಗಳು ಸಂಭವಿಸಿ 14 ಮಂದಿ ಸಾವನ್ನಪ್ಪಿದರೆ, 53 ಮಂದಿ ಗಾಯಗೊಂಡಿದ್ದರು. ಫೆಬ್ರವರಿಯಲ್ಲಿ ಸಂಭವಿಸಿದ 55 ಅಪಘಾತಗಳಲ್ಲಿ 17 ಸಾವು, 56 ಗಾಯ, ಮಾರ್ಚ್ ನಲ್ಲಿ 49 ಅಪಘಾತಗಳಲ್ಲಿ 20 ಸಾವು, 58 ಗಾಯ, ಏಪ್ರಿಲ್ ನಲ್ಲಿ 61 ಅಪಘಾತದಲ್ಲಿ 20 ಸಾವು, 76 ಗಾಯ ಹಾಗೂ ಮೇ ತಿಂಗಳಲ್ಲಿ ಸಂಭವಿಸಿದ 71 ಅಪಘಾತ ಪ್ರಕರಣಗಳಲ್ಲಿ 29 ಮಂದಿ ಮೃತಪಟ್ಟರೆ, 58 ಮಂದಿ ಗಾಯಗೊಂಡಿದ್ದರು.

ಇನ್ನು ಈ ವರ್ಷ (2024)ದ ಜನವರಿ ತಿಂಗಳಲ್ಲಿ 27 ಅಪಘಾತಗಳು ಸಂಭವಿಸಿದ್ದು, 10 ಮಂದಿ ಸಾವನ್ನಪ್ಪಿದ್ದರೆ, 42 ಮಂದಿ ಗಾಯಾಳುಗಳಾಗಿದ್ದಾರೆ. ಫೆಬ್ರವರಿಯಲ್ಲಿ 14 ಅಪಘಾತಗಳಲ್ಲಿ 6 ಸಾವು, 18 ಗಾಯ, ಮಾರ್ಚ್ 28 ಪ್ರಕರಣಗಳಲ್ಲಿ 8 ಸಾವು, 33 ಗಾಯ, ಏಪ್ರಿಲ್ ನ 31 ಪ್ರಕರಣಗಳಲ್ಲಿ 4 ಸಾವು, 40 ಗಾಯ ಹಾಗೂ ಮೇ ತಿಂಗಳಲ್ಲಿ ಸಂಭವಿಸಿದ 25 ಅಪಘಾತಗಳಲ್ಲಿ 3 ಮಂದಿ ಸಾವನ್ನಪ್ಪಿದರೆ, 34 ಮಂದಿ ಗಾಯಗೊಂಡಿದ್ದಾರೆ.

ಸೀಟ್ ಬೆಲ್ಟ್ ಧರಿಸದೇ ಇರುವ ಪ್ರಕರಣಗಳೇ ಹೆಚ್ಚು:

ಈ ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತದಿಂದ ಉಂಟಾಗುವ ಸಾವು-ನೋವು ಕಡಿಮೆ ಮಾಡಲು ಹಾಗೂ ಮಿತಿ ಮೀರಿ ವೇಗವಾಗಿ ಚಲಿಸುವ ವಾಹನಗಳ ಮೇಲೆ ನಿಗಾ ಇಡಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾ ಅಳವಡಿಸಲಾಗಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬೆಂಗಳೂರಿನ ಕೆಂಗೇರಿ ಸಮೀಪದ ನೈಸ್‌ ರಸ್ತೆ ಜಂಕ್ಷನ್‌ ಬಳಿಯಿಂದ ನಿಡಘಟ್ಟದವರೆಗೆ 5 ಕಡೆ, ನಿಡಘಟ್ಟದಿಂದ ಮೈಸೂರು ವರೆಗೆ 5 ಕಡೆ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಬೆಂಗಳೂರು-ನಿಡಘಟ್ಟ ಮತ್ತು ನಿಡಘಟ್ಟ-ಮೈಸೂರು ಎರಡೂ ಮಾರ್ಗಗಳಲ್ಲಿ 5 ಆಯಕಟ್ಟಿನ ಸ್ಥಳಗಳಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಎರಡೂ ಕಡೆಯ ಕ್ಯಾಮೆರಾಗಳು ರಾಮನಗರ ಮತ್ತು ಮಂಡ್ಯ ಜಿಲ್ಲಾ ಪೊಲೀಸ್‌ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಎರಡೂ ಜಿಲ್ಲೆಯ ಜಿಲ್ಲಾ ಪೊಲೀಸ್‌ ಕಂಟ್ರೋಲ್‌ ರೂಂನಲ್ಲಿ ಆಯಾ ಜಿಲ್ಲೆಗೆ ಸೇರಿದ ಸರ್ವರ್‌ ಸ್ಥಾಪಿಸಿ ಆಯಾ ಜಿಲ್ಲಾ ವ್ಯಾಪ್ತಿಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

ಮೇ ತಿಂಗಳಲ್ಲಿ 74 ಸಾವಿರ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ಕ್ಯಾಮೆರಾಗಳು ಸೆರೆ ಹಿಡಿದಿದ್ದವು. ಇದರಲ್ಲಿ 56 ಸಾವಿರ ಪ್ರಕರಣಗಳು ಸೀಟ್ ಬೆಲ್ಟ್ ಧರಿಸದೇ ಇರುವುದೇ ಹೆಚ್ಚಾಗಿತ್ತು. ಜೂನ್ 1 ಮತ್ತು 2ರಂದು 8156 ಪ್ರಕರಣಗಳು ದಾಖಲಾಗಿ, 43.15 ಲಕ್ಷ ದಂಡ ವಿಧಿಸಲಾಗಿತ್ತು. ಈಗಲೂ ಸೀಟ್ ಬೆಲ್ಟ್ ಧರಿಸದೇ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ 2023ರ ಜನವರಿ - ಮೇವರೆಗೆ 100 ಸಾವುಗಳು, 2024ರ ಜನವರಿ - ಮೇವರೆಗೆ 31 ಸಾವುಗಳು. 2023ರ ಮೇನಲ್ಲಿ 29 ಸಾವು, 2024ರ ಮೇನಲ್ಲಿ 3 ಸಾವುಗಳು ಸಂಭವಿಸಿವೆ. ಪೊಲೀಸರ ನಿರಂತರ ಪ್ರಯತ್ನಗಳು ಫಲ ನೀಡುತ್ತಿವೆ. ಎಕ್ಸ್ ಪ್ರೆಸ್ ವೇ ಅನ್ನು ಡೆತ್ ಫ್ರೀ ಝೋನ್ ಮಾಡಲು ಒಟ್ಟಾಗಿ ಶ್ರಮಿಸೋಣ

-ಅಲೋಕ್ ಕುಮಾರ್, ಎಡಿಜಿಪಿ, ಸಂಚಾರ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ವಿಭಾಗ 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ