ಕನ್ನಡಪ್ರಭ ವಾರ್ತೆ ಮಂಗಳೂರು
ಪಶ್ಚಿಮಘಟ್ಟ ಪ್ರದೇಶದಲ್ಲಿ ತೀವ್ರ ಮಳೆಯಾಗಿದ್ದರಿಂದ ಮಂಗಳವಾರ ಬೆಳಗ್ಗಿನಿಂದಲೇ ನದಿಗಳೆಲ್ಲವೂ ಪ್ರವಾಹರೂಪಿಯಾಗಿ ಜಿಲ್ಲಾದ್ಯಂತ ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದವು. ಬಂಟ್ವಾಳ ತಾಲೂಕಿನಲ್ಲಂತೂ ಹಲವು ಮನೆಗಳು, ಅಂಗಡಿ ಮುಂಗಟ್ಟುಗಳು ಪ್ರವಾಹದಿಂದ ಜಲಾವೃತಗೊಂಡಿದ್ದವು. ಜಿಲ್ಲಾದ್ಯಂತ ಅಲ್ಲಲ್ಲಿ ರಸ್ತೆಗಳ ಮೇಲೆ ನೀರು ಹರಿದು ಸಂಚಾರ ಸ್ಥಗಿತಗೊಂಡಿತ್ತು. ವಿವಿಧೆಡೆ ಗುಡ್ಡ ಕುಸಿತ, ಉರುಳಿದ ಮರಗಳಿಂದ ಸಂಚಾರ ವ್ಯತ್ಯಯ, ಮನೆಗಳಿಗೆ ಹಾನಿ ಉಂಟಾಗಿ ಇಡೀ ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿತ್ತು. ಗ್ರಾಮಾಂತರದ ಎಕರೆಗಟ್ಟಲೆ ಕೃಷಿಭೂಮಿ, ತೋಟ ಜಲಾವೃತವಾಗಿ ಅಪಾರ ಹಾನಿ ಸಂಭವಿಸಿತ್ತು.
ಇಳಿದ ಪ್ರವಾಹ: ಬಂಟ್ವಾಳದಲ್ಲಿ 8.5 ಮೀ. ಅಪಾಯದ ಮಟ್ಟವನ್ನು ಮೀರಿ ನೇತ್ರಾವತಿ ನದಿ ಮಂಗಳವಾರ ರಾತ್ರಿ ವೇಳೆಗೆ ಅತ್ಯಂತ ಅಪಾಯದ ಮಟ್ಟವಾದ 10.5 ಮೀ. ತಲುಪಿತ್ತು. ಆದರೆ ಬುಧವಾರ ಬೆಳಗ್ಗಿನಿಂದ ಇಳಿಮುಖವಾಗತೊಡಗಿದ್ದ ನದಿ ನೀರಿನ ಮಟ್ಟ ಸಂಜೆ ವೇಳೆ 5.30 ಮೀ.ಗೆ ಇಳಿದಿದೆ.ಬುಧವಾರ ಜಿಲ್ಲೆಯಲ್ಲಿ ನಾಲ್ಕು ಮನೆಗಳು ಸಂಪೂರ್ಣ ಅಥವಾ ತೀವ್ರ ಹಾನಿಗೆ ಒಳಗಾಗಿದ್ದರೆ, 7 ಮನೆಗಳು ಭಾಗಶಃ ಹಾನಿಗೀಡಾಗಿವೆ. 161 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಕಡಬ ತಾಲೂಕಿನಲ್ಲಿ ಒಂದು ಕಾಳಜಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ 19 ಮಂದಿ ಆಶ್ರಯ ಪಡೆದಿದ್ದಾರೆ.
ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ
ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಸ್ಥಳೀಯ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಿದ ಜಿಲ್ಲಾಧಿಕಾರಿ, ಪ್ರವಾಹ ಪೀಡಿತ ಪ್ರದೇಶಗಳು ಹಾಗೂ ಸಂಭಾವ್ಯ ಪ್ರವಾಹ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹರೇಕಳ, ಬಂಟ್ವಾಳ, ಆಲಡ್ಕ, ಉಪ್ಪಿನಂಗಡಿ ಮತ್ತಿತರ ಕಡೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು.