ಇ-ತಂತ್ರಾಂಶದಲ್ಲಿ ಜನನ-ಮರಣ ನೋಂದಾಯಿಸಿ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

KannadaprabhaNewsNetwork |  
Published : Nov 04, 2025, 01:15 AM IST
3ಕೆಡಿವಿಜಿ5, 6-ದಾವಣಗೆರೆಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಜನನ ಮತ್ತು ಮರಣ ಪತ್ರಗಳಲ್ಲಿ ಶೇ.100ರಷ್ಟು ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗಬೇಕಿದೆ. ಇದರಿಂದ ಮೃತಪಟ್ಟಿದ್ದರೂ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವ ಬಗ್ಗೆ ಮಾಹಿತಿ ಸಿಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ಜನನ ಮತ್ತು ಮರಣ ಪತ್ರಗಳಲ್ಲಿ ಶೇ.100ರಷ್ಟು ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗಬೇಕಿದೆ. ಇದರಿಂದ ಮೃತಪಟ್ಟಿದ್ದರೂ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವ ಬಗ್ಗೆ ಮಾಹಿತಿ ಸಿಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾ ಮಟ್ಟದ ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಮರಣ ಪ್ರಕರಣಗಳಲ್ಲಿ ಅನೇಕರಿಗೆ ಸರ್ಕಾರಿ ಸೌಲಭ್ಯ ಹೋಗುತ್ತಿದ್ದು, ಅದನ್ನೆಲ್ಲಾ ಪರಿಶೀಲಿಸಬೇಕು ಎಂದರು.

ಶೇ.100ರಷ್ಟು ಜನನ ಮತ್ತು ಮರಣ ನೋಂದಣಿಗೆ ಒತ್ತು ನೀಡಬೇಕು. ಆದರೆ, ಮರಣಧ ಬಗ್ಗೆ ಹೆಚ್ಚು ವರದಿಯಾಗುತ್ತಿಲ್ಲ. ಮರಣ ಪ್ರಮಾಣದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದು, ಪುರುಷರ ಸಂಖ್ಯೆ ಹೆಚ್ಚಾಗಿದೆ. ಜನನ-ಮರಣ ದಾಖಲೆಗಳು ಸಾರ್ವಜನಿಕರಿಗೆ ತಮ್ಮ ಶೈಕ್ಷಣಿಕ, ಆರ್ಥಿಕ ವ್ಯವಹಾರ, ಔದ್ಯೋಗಿಕ ಸೇರಿದಂತೆ ವಿವಿಧ ಕೆಲಸ, ಕಾರ್ಯಕ್ಕೆ ಅವಶ್ಯಕವಾಗಿದೆ. ಅವುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಸೂಚಿಸಿದರು.

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯವರು ತಮ್ಮ ಮೂಲಕವೂ ಜನನ-ಮರಣದ ಮಾಹಿತಿ ನೀಡಬೇಕು. ಗ್ರಾಮೀಣ ಮಟ್ಟದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ನೋಂದಣಿ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಮಾಹಿತಿಯನ್ನು ನೋಂದಣಿ ಮಾಡಬೇಕು. ಖಾಸಗಿ ಆಸ್ಪತ್ರೆಗಳ ಮಾಹಿತಿಯೂ ಪೋರ್ಟಲ್‍ನಲ್ಲಿ ಅಪ್‍ಲೋಡ್ ಆಗಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರಿಗೆ, ವೈದ್ಯಾಧಿಕಾರಿಗಳಿಗೆ, ಪಿ.ಎಚ್.ಸಿ.ಗಳಿಗೆ ಜನನ ಮತ್ತು ಮರಣ ನೋಂದಣಿ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶೇ.100 ಪ್ರತಿಶತ ಗುರಿ ಸಾಧಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ಎಲ್ಲಾ ಅಂಗನವಾಡಿ ಕಾರ್ಯಕರ್ತರು ಜನನ ಮರಣ ನೋಂದಣಿ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಶೇ.100 ಪ್ರತಿಶತ ಗುರಿ ಸಾಧಿಸುವಂತೆ ಡಿಎಚ್‌ಒ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕರು ಕ್ರಮ ಕೈಗೊಳ್ಳಬೇಕು ಎಂದು ಆದೇಶಿದರು.

ಡಿಎಸ್ಒ ನೀಲಾ ಮಾತನಾಡಿ, ಕಳೆದ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಜನನ ಗಂಡು-10462, ಹೆಣ್ಣು-9787 ಸೇರಿ 20249 ಹಾಗೂ ಮರಣ ಸಂಖ್ಯೆ ಗಂಡು ಮಕ್ಕಳು -7555, ಹೆಣ್ಣುಮಕ್ಕಳು-5724 ಸೇರಿ 13279 ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಗ್ರಾಮೀಣ 916, ನಗರ 20 ಸೇರಿ ಒಟ್ಟು 936 ನೊಂದಣಿ ಘಟಕಗಳಿವೆ ಎಂದು ಸಭೆಯ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಶಾಸಕರಿಗೆ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳುವ ಕುರಿತು ಮಾನದಂಡಗಳ ಬಗ್ಗೆ ಮಾಹಿತಿ ನೀಡಬೇಕು. ವಿಮಾ ಕಂಪನಿಯವರು ಬೆಳೆ ಕಟಾವು ಪ್ರಯೋಗಗಳಲ್ಲಿ ಸುಳ್ಳು ಮಾಹಿತಿ ಕಂಡು ಬಂದಲ್ಲಿ ಡಿಎಸ್‍ಒ ಎಫ್‍ಐಆರ್ ದಾಖಲಿಸಬೇಕು ಎಂದರು.

ಜಿಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಡಿಎಚ್‍ಓ ಡಾ.ಷಣ್ಮುಖಪ್ಪ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ