ಜಿಲ್ಲೆಯಲ್ಲಿ ಯುವನಿಧಿ ಯೋಜನೆಗೆ ನೋಂದಣಿ ಆರಂಭ

KannadaprabhaNewsNetwork | Updated : Dec 27 2023, 01:33 AM IST

ಸಾರಾಂಶ

ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾ ಭವನದಲ್ಲಿ ಜಿಲ್ಲಾ ಮಟ್ಟದ ಯುವನಿಧಿ ಯೋಜನೆಯ ಬಿತ್ತಿಪತ್ರವನ್ನು ಅನಾವರಣಗೊಳಿಸಿ ಯುವನಿಧಿ ಯೋಜನೆಗೆ ನೋಂದಣಿ ಆರಂಭಿಸಲಾಯಿತು.

- ಡಿಸಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಯುವನಿಧಿ ಯೋಜನೆ ಬಿತ್ತಿಪತ್ರ ಅನಾವರಣ

ಕನ್ನಡಪ್ರಭ ವಾರ್ತೆ ಧಾರವಾಡ

ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಜಿಲ್ಲೆಯಲ್ಲಿ ಡಿ. 26ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರು ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಮಾಹಿತಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾ ಭವನದಲ್ಲಿ ಜಿಲ್ಲಾ ಮಟ್ಟದ ಯುವನಿಧಿ ಯೋಜನೆಯ ಬಿತ್ತಿಪತ್ರವನ್ನು ಅನಾವರಣಗೊಳಿಸಿದ ಅವರು, ಈ ಯೋಜನೆಯಡಿ ಪದವೀಧರರರು, ಡಿಪ್ಲೋಮಾ ತೇರ್ಗಡೆಯಾದವರು 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಾಂಗ ಮಾಡಿ, 2023ರಲ್ಲಿ ತೇರ್ಗಡೆಯಾದ ಮತ್ತು ಫಲಿತಾಂಶ ಪ್ರಕಟಗೊಂಡ 180 ದಿವಸದ ಒಳಗಡೆ ಕೆಲಸ ದೊರೆಯದ ನಿರುದ್ಯೋಗಿ ಅರ್ಹ ಅಭ್ಯರ್ಥಿಗಳಿಗೆ ಸೇವಾಸಿಂಧು ಪೋರ್ಟಲ್ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಎಂದರು.

ಯುವನಿಧಿ ಯೋಜನೆಗೆ ನೋಂದಣಿಯಾದ ಪದವೀಧರರಿಗೆ ₹3 ಸಾವಿರ ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ₹1500 ಮಾಸಿಕ ನಿರುದ್ಯೋಗ ಭತ್ಯೆಯನ್ನು ಆಧಾರ ಜೋಡಣೆಯ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಅಗತ್ಯವಾದ ಎಲ್ಲ ದಾಖಲೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮುಂಚಿತವಾಗಿ ತಾತ್ಕಾಲಿಕ ಪದವಿ ಹಾಗೂ ಡಿಪ್ಲೊಮಾ ಪ್ರಮಾಣ ಪತ್ರ ಪಡೆದು 180 ದಿನಗಳು ಪೂರ್ಣಗೊಳ್ಳುವ ಮುಂಚೆ ಅರ್ಜಿ ಸಲ್ಲಿಸತಕ್ಕದ್ದು, 180 ದಿನಗಳ ನಂತರ ಸೌಲಭ್ಯವನ್ನು ನೀಡಲಾಗುವುದು. ಅಭ್ಯರ್ಥಿಯು ನಿರುದ್ಯೋಗಿ ಎಂದು ದೃಢೀಕರಿಸಬೇಕು ಮತ್ತು ಘೋಷಣೆಯನ್ನು ಸಲ್ಲಿಸಬೇಕು. ಉದ್ಯೋಗ ದೊರಕಿದ ನಂತರ ಅಭ್ಯರ್ಥಿಯು ತಕ್ಷಣವೇ ಮುಚ್ಚಳಿಕೆ ಪತ್ರ ನೀಡತಕ್ಕದ್ದು ಎಂದು ತಿಳಿಸಿದರು.

ನೋಂದಾಯಿತ ಅಭ್ಯರ್ಥಿ ವಿವರಗಳನ್ನು ಎನ್.ಎ.ಡಿ, ಮೂಲಕ ಪರಿಶೀಲಿಸಲಾಗುವುದು. ಪದವಿ ಹಾಗೂ ಡಿಪ್ಲೊಮಾದ ಪ್ರಮಾಣ ಪತ್ರಗಳನ್ನು ಮ್ಯಾನುವೆಲ್ ಮೂಲಕ ಅಪ್ಲೋಡ್ ಮಾಡಿದರೆ, ಅಪ್ ಲೋಡ್ ಮಾಡಿದ ದಾಖಲೆಗಳ ವಿವರಗಳನ್ನು ಆಯಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಿಗೆ ರವಾನಿಸಲಾಗುವುದು, ತಪ್ಪು ಘೋಷಣೆ ಅಥವಾ ಉದ್ಯೋಗ ಪಡೆದಿರುವುದನ್ನು ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ. ಪಾವತಿಸಿದ ಮೊತ್ತವನ್ನು ಕಾನೂನಿನ ಪ್ರಕಾರ ವಸೂಲಿ ಮಾಡಲಾಗುವುದು. ಯುವನಿಧಿ ಯೋಜನೆಯಡಿ ನೋಂದಾಯಿತ ಅಭ್ಯರ್ಥಿಗಳ ದತ್ತಾಂಶವನ್ನು ಪರಿಶೀಲನೆಗಾಗಿ ಕೌಶಲ್ಯ ಸಂಪರ್ಕ ಪೋರ್ಟಲ್‌ಗೆ ಲಭ್ಯವಿರುವ ದತ್ತಾಂಶದೊಂದಿಗೆ ವರ್ಗಾಯಿಸಲಾಗುವುದು ಎಂದರು.

ಕೌಶಲ್ಯ ಅಭಿವೃದ್ಧಿ ಅಧಿಕಾರಿ ಡಾ. ಚಂದ್ರಪ್ಪ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಪ್ರಭಾರಿ ಸಹಾಯಕ ನಿರ್ದೇಶಕ ಮಹೇಶ ಇದ್ದರು.

Share this article