ಸೌಲಭ್ಯ ಪಡೆಯಲು ಕಾರ್ಮಿಕರ ನೋಂದಣಿ ಕಡ್ಡಾಯ

KannadaprabhaNewsNetwork |  
Published : Jan 20, 2024, 02:05 AM IST
18ಜಿಯುಡಿ3 | Kannada Prabha

ಸಾರಾಂಶ

ಸರ್ಕಾರ ಕಾರ್ಮಿಕ ಇಲಾಖೆಯ ಮೂಲಕ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಸೌಲಭ್ಯಗಳನ್ನು ಪಡೆಯಲು ಪ್ರತಿಯೊಬ್ಬ ಅರ್ಹ ಕಾರ್ಮಿಕ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಕಾರ್ಮಿಕ ಇಲಾಖೆಯಡಿ ನೋಂದಣಿಯಾದ ಕಾರ್ಮಿಕರಿಗೆ ಅನೇಕ ಸೌಲಭ್ಯಗಳಿದ್ದು, ಅರ್ಹರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಲಹೆ ನೀಡಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಗುಡಿಬಂಡೆ ತಾಲೂಕು ಮರಗೆಲಸದ ಕಾರ್ಮಿಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಕಾರ್ಮಿಕ ಇಲಾಖೆಯ ಮೂಲಕ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಸೌಲಭ್ಯಗಳನ್ನು ಪಡೆಯಲು ಪ್ರತಿಯೊಬ್ಬ ಅರ್ಹ ಕಾರ್ಮಿಕ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.

ಮಕ್ಕಳಿಗೆ ಶಿಕ್ಷಣ ಕೊಡಿಸಿ

ವಿದ್ಯಾರ್ಥಿ ವೇತನ, ಪಿಂಚಣಿ, ಕಾರ್ಮಿಕರಿಗೆ ವಿಮಾ ಸೌಲಭ್ಯ, ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್ ಸೇರಿದಂತೆ ಹಲವು ಯೋಜನೆಗಳನ್ನು ನೀಡಲಾಗುತ್ತಿದೆ. ಶೀಘ್ರದಲ್ಲೇ ಪಟ್ಟಣದಲ್ಲಿ ನೊಂದಣಿಯಾಗದೇ ಇರುವಂತಹ ಕಾರ್ಮಿಕರನ್ನು ಒಂದು ಕಡೆ ಸೇರಿಸಿ ನೊಂದಣಿ ಅಭಿಯಾನ ಕೈಗೊಳ್ಳಲಾಗುತ್ತದೆ. ಕಾರ್ಮಿಕರಿಗೆ ಏನೇ ಸಮಸ್ಯೆಗಳಿದ್ದರೂ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಮಕ್ಕಳನ್ನು ಓದಿಸಿದರೇ ಬ್ಯಾಂಕ್ ನಲ್ಲಿ ಎಫ್.ಡಿ. ಇಟ್ಟಂತೆ. ಯಾವುದೇ ಕಾರಣಕ್ಕೂ ತಮ್ಮ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.

ಬಳಿಕ ಕಾರ್ಮಿಕ ಇಲಾಖೆಯ ಅಧಿಕಾರಿ ಸತೀಶ್ ಮಾತನಾಡಿ, ಅರ್ಹ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೊಂದಣಿ ಮಾಡಿಸಿ, ಆ ಮೂಲಕ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಾರ್ಮಿಕರು ಇಲಾಖೆಯಡಿ ನೋಂದಣಿಯಾಗಬೇಕು. ಅಗತ್ಯ ದಾಖಲೆಗಳನ್ನು ನೀಡಿ ನೊಂದಣಿಯಾಗಿ ಕಾರ್ಡ್ ಪಡೆದುಕೊಳ್ಳಬೇಕು. ಈಗಾಗಲೇ ಶಾಸಕರು ನೊಂದಣಿ ಅಭಿಯಾನ ಕೈಗೊಳ್ಳುವಂತೆ ಸೂಚನೆ ನೀಡಿದ್ದು ಅದರಂತೆ ಶೀಘ್ರ ಶಿಬಿರ ಆಯೋಜನೆ ಮಾಡಲಾಗುತ್ತದೆ ಎಂದರು.

ಪತ್ರಿಕಾ ವಿತರಕರಿಗೂ ಕಾರ್ಡ್‌

ಜೊತೆಗೆ ಈ ಶ್ರಮ್ ಯೋಜನೆಯಡಿ ಪತ್ರಿಕಾ ವಿತರಕರೂ ಸಹ ಈ ಶ್ರಮ್ ಕಾರ್ಡ್ ಪಡೆದುಕೊಳ್ಳಲು ಅರ್ಹರಾಗಿದ್ದು, ಅವರೂ ನೋಂದಣಿ ಮಾಡಿಸಿಕೊಂಡು ವಿಮೆ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಸಭೆಯಲ್ಲಿ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್, ಮರಗೆಲಸ ಕಾರ್ಮಿಕರ ಸಂಘದ ಸದಸ್ಯರಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಯಿತು. ಈ ವೇಳೆ ಪ.ಪಂ. ಅಧ್ಯಕ್ಷೆ ನಗೀನ್ ತಾಜ್, ಉಪಾಧ್ಯಕ್ಷ ವಿಕಾಸ್ ಸೇರಿದಂತೆ ಮರಗೆಲಸ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಪ.ಪಂ. ಸದಸ್ಯರು ಸೇರಿದಂತೆ ಹಲವರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ