ಕುಂದಾಪುರ: ಕೇಂದ್ರ ಸರ್ಕಾರ ದೇಶದ ಕ್ರೀಡಾ ಕ್ಷೇತ್ರವನ್ನು ಮತ್ತೊಂದು ಮಹತ್ವದ ಘಟ್ಟಕ್ಕೆ ಕೊಂಡೊಯ್ಯಲು ದೇಶದ ಇತಿಹಾಸದಲ್ಲಿ ಮೊದಲ ಪ್ರಯತ್ನವಾಗಿ ದೇಶದಾದ್ಯಂತ ಜಾರಿಗೆ ತಂದಿರುವ ‘ಸಂಸದ್ ಖೇಲ್ ಮಹೋತ್ಸವ್-2025’ ನೋಂದಣಿ ಪ್ರಕ್ರಿಯೆಗೆ ಮಂಗಳವಾರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಬಿವೈ ರಾಘವೇಂದ್ರ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2030 ರಲ್ಲಿ ಕಾಮನ್ ವೆಲ್ತ್ ಗೇಮ್ಸ್ ಹಾಗೂ 2036 ರಲ್ಲಿ ಒಲಿಂಪಿಕ್ ಗೇಮ್ಸ್ ಭಾರತದಲ್ಲಿ ಆಯೋಜನೆ ಮಾಡಲು ಈಗಾಗಲೇ ಮನವಿ ಮಾಡಿಕೊಂಡಿದೆ. ಖೇಲೋ ಇಂಡಿಯಾ ಹಾಗೂ ಫಿಟ್ ಇಂಡಿಯಾ ಯೋಜನೆ ಜಾರಿಯ ಮೂಲಕ ದೇಶದಲ್ಲಿರುವ ಲಕ್ಷಾಂತರ ಕ್ರೀಡಾ ಪ್ರತಿಭೆಗಳನ್ನು ಮುನ್ನೆಲೆಗೆ ತಂದು ವಿಶ್ವದ ಬಲಿಷ್ಠ ರಾಷ್ಟ್ರಗಳ ಕ್ರೀಡಾ ಪಟುಗಳೊಂದಿಗೆ ಪೈಪೋಟಿ ನಡೆಸಿ ವಿಶ್ವ ಮಟ್ಟದಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿಕೊಂಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿರುವ ಇನ್ನೂ ಅನೇಕ ಕ್ರೀಡಾ ಪಟುಗಳನ್ನು ಮತ್ತು ಕ್ರೀಡಾ ಆಸಕ್ತರನ್ನು ಮುನ್ನೆಲೆಗೆ ತರಲು ಈ ಯೋಜನೆ ಮಹತ್ವದ ಮೈಲಿಗಲ್ಲಾಗುವ ಉದ್ದೇಶದಿಂದ ಜಾರಿಗೆ ತರಲಾಗಿದೆ ಎಂದರು.ಇದು ಕೇವಲ ದೇಶದ ಕ್ರೀಡಾ ಹಬ್ಬವಾಗದೆ ದೇಶದ ಹಿರಿಮೆ, ಗರಿಮೆ ವಿಶ್ವ ಭೂಪಟದಲ್ಲಿ ರಾರಾಜಿಸಲು ವೇದಿಕೆಯಾಗಿದೆ. ಈ ಮೂಲಕ ದೇಶದ ಕ್ರೀಡಾ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಲು ಮುನ್ನುಡಿ ಬರೆಯಲು ವಿಶೇಷ ವೇದಿಕೆಯಾಗಿದೆ ಎಂದರು.
ಶಾಸಕ ಗುರುರಾಜ್ ಗಂಟಿಹೊಳೆ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಮರವಂತೆ, ದಿಶಾ ಸಮಿತಿ ಸದಸ್ಯೆ ಪ್ರಿಯದರ್ಶಿನಿ ಬೆಸ್ಕೂರು, ಕಾರ್ಯದರ್ಶಿಗಳಾದ ಕರಣ್ ಪೂಜಾರಿ, ಗೋಪಾಲ ಪೂಜಾರಿ ವಸ್ರೆ, ಮುಖಂಡರಾದ ದೀಪಕ್ ಕುಮಾರ್ ಶೆಟ್ಟಿ, ಸುರೇಶ್ ಬಟವಾಡಿ ಇದ್ದರು.