ಐದು ವರ್ಷ ಅತಿಥಿ ಶಿಕ್ಷಕರಾಗಿರುವವರನ್ನು ಕಾಯಂ ಮಾಡಿ: ಎಂ.ಟಿ.ಕೃಷ್ಣಪ್ಪ

KannadaprabhaNewsNetwork |  
Published : Sep 10, 2026, 01:45 AM IST
8 ಟಿವಿಕೆ 1 - ತುರುವೇಕೆರೆ ಪಟ್ಟಣದ ಜಿ.ಜೆ.ಸಿ ಆವರಣದಲ್ಲಿ ನಡೆದ  ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

ಶಿಕ್ಷಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಗುರು ಹಿರಿಯರನ್ನು ಗೌರವಿಸುವ, ತಂದೆ-ತಾಯಿ ಸಲಹುವ ಸಂಸ್ಕಾರಯುತ ಶಿಕ್ಷಣ ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಕನಿಷ್ಠ ಐದು ವರ್ಷ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವವರನ್ನು ಸರ್ಕಾರ ಕೂಡಲೇ ಕಾಯಂ ಮಾಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಸರ್ವಪಲ್ಲಿ ರಾಧಾಕೃಷ್ಣನ್ 139ನೇ ಜನ್ಮದಿನೋತ್ಸವ ಮತ್ತು ಶಿಕ್ಷಕರ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರ ಕಡೆಗಣಿಸಿದೆ. ಸುಮಾರು 57 ಸಾವಿರ ಶಿಕ್ಷಕರ ಕೊರತೆ ಇದೆ. ಆದರೆ ಸರ್ಕಾರ ಕೇವಲ ೧೫ ಸಾವಿರ ಶಿಕ್ಷಕರ ಭರ್ತಿ ಮಾಡುವ ಭರವಸೆ ನೀಡಿದೆ. ಈ ಪ್ರಸಕ್ತ ವರ್ಷವೇ ಸುಮಾರು 8 ಸಾವಿರ ಶಿಕ್ಷಕರು ನಿವೃತ್ತಿ ಹೊಂದಲಿದ್ದಾರೆ. ಅಂದರೆ ಶೇ.20ರಷ್ಟೂ ಸಹ ಶಿಕ್ಷಕರ ತುಂಬಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಾರೆಂದು ಹೇಳಿದರು.

ತಾಲೂಕಿನ ಶಿಕ್ಷಕರೋರ್ವರು ರಾಜ್ಯ ಪ್ರಶಸ್ತಿಗೆ ಅರ್ಹರಾಗಿರುವುದು ಮತ್ತು ಮೂವರು ಜಿಲ್ಲಾ ಉತ್ತಮ ಶಿಕ್ಷಕರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.

ಪ್ರಾಧ್ಯಾಪಕ ಡಾ. ಎಂ.ಗೋವಿಂದರಾಯ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಗುರು ಹಿರಿಯರನ್ನು ಗೌರವಿಸುವ, ತಂದೆ-ತಾಯಿ ಸಲಹುವ ಸಂಸ್ಕಾರಯುತ ಶಿಕ್ಷಣ ಅಗತ್ಯವಾಗಿದೆ ಎಂದು ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಹಿಂದಿನ ಮತ್ತು ಇಂದಿನ ಶಿಕ್ಷಣಕ್ಕೂ ಬಹಳ ವ್ಯತ್ಯಾಸವಿದ್ದರೂ, ಈಗಿನ ಉಚಿತ ಶಿಕ್ಷಣ ಪ್ರಾಧಾನ್ಯತೆ ಪಡೆದಿದೆ. ಶಿಕ್ಷಣ ಸಮಾಜದ ಉನ್ನತಿಗೆ-ಏಳಿಗೆಗೆ ಕೈಜೋಡಿಸುವಂತಾಗಬೇಕು ಎಂದು ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಯ ನಿವೃತ್ತರಾದ 45 ಶಿಕ್ಷಕರಿಗೆ ಹಾಗೂ ತಾಲೂಕಿನ 45 ಉತ್ತಮ ಶಿಕ್ಷಕರನ್ನು ಗುರ್ತಿಸಿ ಗೌರವಿಸಿ ಪುರಸ್ಕರಿಸಲಾಯಿತು.

ಸಮಾರಂಭದಲ್ಲಿ ಇ.ಒ ಅನಂತರಾಜು, ಬಿ.ಇ.ಒ ಎನ್. ಸೋಮಶೇಖರ್. ತಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಪಣ್ಣ, ಗಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಲಕ್ಷ್ಮಿಕಾಂತ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುನಿಲ್‌ಬಾಬು, ರೋಟರಿ ಅಧ್ಯಕ್ಷ ಸಂತೋಷ್ ಅವರನ್ನು ಗೌರವಿಸಲಾಯಿತು. ಶಿಕ್ಷಕರ ಸಂಘದ ಎಂ.ಟಿ. ಭವ್ಯ, ಷಣ್ಮುಖಪ್ಪ, ಸಿ.ಎಸ್. ರಾಜಪ್ಪ, ಶ್ರೀಧರ್, ಮನು, ಮಂಜುನಾಥ, ಮಹೇಶ್.ಡಿ.ಜೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಮತಿ ಇಲ್ಲದೆ ನಡೆಸಿದ್ದ ಜಾನಪದ ವಿವಿ 8 ಪಿಜಿ ಕೋರ್ಸ್ ರದ್ದು!
ಕಬ್ಬಿಗೆ ಲಾಭದಾಯಕ ದರ ನಿಗದಿಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ: ರುದ್ರಪ್ಪ ಲಮಾಣಿ