ಅಪಾಯದ ಸ್ಥಿತಿಯಲ್ಲಿದ್ದ ಸಂಪರ್ಕ ಸೇತುವೆಗೆ ಕಾಯಕಲ್ಪ

KannadaprabhaNewsNetwork |  
Published : May 21, 2026, 02:00 AM IST
ಶಿಥಿಲವಾಗಿ ಅಪಾಯದ ಸ್ಥಿತಿಯಲ್ಲಿದ್ದ ತರೀಕೆರೆ  ಪಟ್ಟಣದ ಪ್ರಮುಖ ಸಂಪರ್ಕ ಸೇತುವೆ | Kannada Prabha

ಸಾರಾಂಶ

ತರೀಕೆರೆಶತಮಾನದಷ್ಟು ಹಳೆಯದಾದ ಅಪಾಯದ ಅಂಚಿನಲ್ಲಿದ್ದ ಪ್ರಮುಖ ಸಂಪರ್ಕ ಸೇತುವೆ ಪುನರ್‌ ನಿರ್ಮಾಣ ಕಾಮಗಾರಿ ಕಡೆಗೂ ಆರಂಭವಾಗಿರುವುದರಿಂದ ಸ್ಥಳೀಯರ ಬಹುದಿನದ ಬೇಡಿಕೆಗೆ ಈಡೇರುವ ಕಾಲ ಸನ್ನಿಹಿತವಾಗಿದೆ.

ಶತಮಾನದ ಪ್ರಮುಖ ಸಂಪರ್ಕ ಸೇತುವೆ ಪುನರ್ ನಿರ್ಮಾಣದ ಕಾಮಗಾರಿ ಪ್ರಾರಂಭ

ಅನಂತ ನಾಡಿಗ್ ಕನ್ನಡಪ್ರಭ ವಾರ್ತೆ, ತರೀಕೆರೆ

ಶತಮಾನದಷ್ಟು ಹಳೆಯದಾದ ಅಪಾಯದ ಅಂಚಿನಲ್ಲಿದ್ದ ಪ್ರಮುಖ ಸಂಪರ್ಕ ಸೇತುವೆ ಪುನರ್‌ ನಿರ್ಮಾಣ ಕಾಮಗಾರಿ ಕಡೆಗೂ ಆರಂಭವಾಗಿರುವುದರಿಂದ ಸ್ಥಳೀಯರ ಬಹುದಿನದ ಬೇಡಿಕೆಗೆ ಈಡೇರುವ ಕಾಲ ಸನ್ನಿಹಿತವಾಗಿದೆ.

ಲಿಂಗದಹಳ್ಳಿ ಮೂಲಕ ಚಿಕ್ಕಮಗಳೂರು-ತರೀಕೆರೆ ಪಟ್ಟಣದ ನಡುವೆ ಸಂಪರ್ಕ ಕಲ್ಪಿಸುವ ಗಾಳಿಹಳ್ಳಿ ಕ್ರಾಸ್.ನ ಈ ಸೇತುವೆ ಜನ ಮತ್ತು ವಾಹನಗಳ ಸಂಚಾರಕ್ಕೆ ಯೋಗ್ಯವಾಗಿರದೆ ಎಲ್ಲಿ ಅನಾಹುತ ಸಂಭವಿಸುವುದೋ ಎಂಬ ಆತಂಕದಲ್ಲೆ ಅನ್ಯಮಾರ್ಗವಿಲ್ಲದೆ ಜನ ಓಡಾಡುತ್ತಿದ್ದರು. ಇದೀಗ ಕ್ಷೇತ್ರದ ಶಾಸಕ ಜಿ.ಎಚ್.ಶ್ರೀನಿವಾಸ್ ಶಿಥಿಲ ಸೇತುವೆ ಪುನರ್ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಸೇತುವೆ ನಿರ್ಮಾಣಕ್ಕೆ ಒತ್ತಾಸೆಯಾಗಿದ್ದಾರೆ. ರಾಮನಾಯಕ ಕೆರೆಯಿಂದ ಈ ಸೇತುವೆ ಪಟ್ಟಣದ ಮುಖ್ಯ ಕೆರೆಗಳಾದ ಚಿಕ್ಕೆರೆ, ದೊಡ್ಡಕೆರೆಗಳಿಗೆ ನೀರು ಹರಿಸಲು ಬಹಳ ಹೀಂದೆಯೇ ನಿರ್ಮಾಣವಾಗಿದ್ದ ಈ ಸೇತುವೆ ಮಳೆಗಾಲದಲ್ಲಿ ಕೆರೆ ಕೋಡಿ ಬಿದ್ದಾಗ ಸೇತುವೆ ಮೇಲೂ ನೀರು ಹರಿಯುತ್ತಿದ್ದರಿಂದ ಶಿಥಿಲವಾಗಿದ್ದ ಈ ಸೇತುವೆ ಮೇಲೆ ಜೀವ ಕೈಯಲ್ಲಿ ಹಿಡಿದುಸಂಚರಿಸುವಂತಾಗಿತ್ತು.

ತರೀಕೆರೆ ಪಟ್ಟಣದ ಕೇಂದ್ರ ಸ್ಥಳದಲ್ಲಿರುವ ಈ ಸಂಪರ್ಕ ಸೇತುವೆ ಬಹಳ ಹಳೆಯದು ಸೇತುವೆ ಒಳ ಮತ್ತು ಹೊರ ತಡೆ ಗೋಡೆಗಳೆಲ್ಲಾ ಬಿರುಕು ಬಿಟ್ಟು ಹಾಳಾಗಿತ್ತು. ಈ ಭಾಗದ ರೈತಾಪಿ ಜನರು ತಮ್ಮ ಹೊಲಗದ್ದೆ ತೋಟಗಳಿಗೆ ಎತ್ತಿನ ಗಾಡಿ, ಟ್ರ್ಯಾಕ್ಟರ್, ಸರಕುಗಳನ್ನು, ಪಟ್ಟಣದ ಅರ್ಧಭಾಗದ ಜನ ಶಾಲಾ ಕಾಲೇಜು, ಆಸ್ಪತ್ರೆ,ಅಂಗಡಿ, ವ್ಯಾಪಾರ ವಹಿವಾಟುಗಳಿಗೆಲೀ ಸೇತುವೆಯೇ ರಹದಾರಿ. ಎಂ.ಜಿ.ರಸ್ತೆಯ ಮೂಲಕ ಪಟ್ಟಣದ ಕೋಡಿಕ್ಯಾಂಪ್, ಬಸಶಂಕರಿ ದೇವಸ್ಥಾನ, ಆಶ್ರಯ ಬಡಾವಣೆ ಇತ್ಯಾದಿ ಪ್ರಮುಖ ಸ್ಥಳಗಳಿಗೂ ಇದೇ ಪ್ರಮುಖ ಸಂಪರ್ಕ ಸೇತುವೆ ಮೂಲಕವೇ ಸಂಚರಿಸ ಈ ಸೇತುವೆಯನ್ನೇ ಆಶ್ರಯಿಸಿದ್ದರಿಂದ ಬಹಳಷ್ಟು ಬಾರಿ ಇದರ ದುರಸ್ತಿಗೂ ಒತ್ತಾಯಿಸಲಾಗಿತ್ತು.

15 ವರ್ಷಗಳ ಹಿಂದೆಯೇ ಅತ್ಯಂತ ದುರ್ಬಲಗೊಂಡು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಯಾಗಿತ್ತು. ಈ ಹಿಂದೆಯೇ ಸೇತುವೆ ದುರಸ್ತಿಗಾಗಿ ಜಿಲ್ಲಾ ಪಂಚಾಯ್ತಿ ಅಂದಾಜು ವೆಚ್ಚ ಸಿದ್ಧಪಡಿಸಿದಾಗ ಸರ್ಕಾರದಿಂದ ಹಣದ ನೆರವಿನ ಭರವಸೆಯೂ ಸಿಕ್ಕಿತ್ತು ಆದರೆ ಸೇತುವೆಗೆ ದುರಸ್ತಿ ಭಾಗ್ಯ ಮಾತ್ರ ಸಿಗಲಿಲ್ಲ.

"ತರೀಕೆರೆ ಬಳಿ ಕುಸಿಯಲಿದೆ ಸೇತುವೆ " ಎಂಬ ಶೀರ್ಷಿಕೆಯಡಿ ಕನ್ನಡಪ್ರಭ ಪತ್ರಿಕೆ ಈ ಹಿಂದೆಯೂ ಶಿಥಿಲವಾದ ಸೇತುವೆ ಬಗ್ಗೆ ವರದಿ ಪ್ರಕಟಿಸಿದ್ದರೂ ಸಂಬಂದಪಟ್ಟವರು ಮಾತ್ರ ಗಮನ ಹರಿಸಿರಲಿಲ್ಲ.

ಇದೀಗ ಲೋಕೋಪಯೋಗಿ ಇಲಾಖೆ ಅಂದಾಜು ₹30 ಲಕ್ಷದಲ್ಲಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿಯನ್ನು ಮೇ 11ರಿಂದ ಪ್ರಾರಂಭಿಸಿದೆ. ಸುಮಾರು 9 ಮೀ. ಉದ್ದ ಮತ್ತು 3 ಮೀಟರ್ ಅಗಲದ ಈ ಸೇತುವೆ ನಿರ್ಮಾಣ ಕಾಮಗಾರಿಯಡಿ ರಾಮ ನಾಯಕ ಕೆರೆಯಿಂದ ಸೇತುವೆ ತನಕ ಕಾಂಕ್ರಿಟ್ ಕಾಲುವೆ ನಿರ್ಮಾಣದ ನಂತರ ಈ ಸೇತುವೆಯಿಂದ ಚಿಕ್ಕೆರೆ ತನಕ ಕಾಲುವೆಗೆ ತಡೆಗೋಡೆ ನಿರ್ಮಿಸಬೇಕಾಗಿದೆ. ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿರುವ ಪಿಡಬ್ಲೂ.ಡಿ ಇಲಾಖೆ ನಿತ್ಯ ಸಾರ್ವಜನಿಕರು ಸಂಚರಿಸಲು ಅನುವಾಗುವಂತೆ ಸೇತುವೆ ಸನಿಹದಲ್ಲೇ ತಾತ್ಕಾಲಿಕ ಕಾಲು ದಾರಿ ಕಲ್ಪಿಸಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಶೀಘ್ರ ಕಾಮಗಾರಿ ಮುಗಿಸಿ ಜನ ಮತ್ತು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿ ಎಂದು ಮನವಿ ಮಾಡಿದ್ದಾರೆ.-- ಕೋಟ್ಃ --

ತರೀಕೆರೆ ಪಟ್ಟಣದಲ್ಲಿ ನೂರಾರು ಕೋಟಿ ರುಗಳ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಪಟ್ಟಣದ ಗಾಳಿಹಳ್ಳಿ ಕ್ರಾಸ್.ನಲ್ಲಿರುವ ಚಿಕ್ಕಮಗಳೂರು-ತರೀಕೆರೆ ಪ್ರಮುಖ ಸಂಪರ್ಕ ಸೇತುವೆ ಬಹಳ ದಿನಗಳಿಂದ ಶಿಥಿಲವಾಗಿತ್ತು. ಈ ಸೇತುವೆ ಪುನರ್ ನಿರ್ಮಾಣಕ್ಕೆ ಸರ್ಕಾರದಿಂದ ₹30 ಲಕ್ಷ ಅನುದಾನ ಮಂಜೂರು ಮಾಡಿಸಿ, ಕಾಮಗಾರಿ ಪ್ರಾರಂಬಿಸಲಾಗಿದೆ. ಗುಣಮಟ್ಟದ ಕಾಮಗಾರಿ ಆಗಬೇಕು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಬೇಕು.

- ಜಿ.ಎಚ್.ಶ್ರೀನಿವಾಸ್ ಶಾಸಕಕೋಟ್ಃ

ನಗರದ ಪ್ರಮುಖ ಸಂಪರ್ಕ ಕೊಂಡಿಯಾದ ಈ ಸೇತುವೆ ಕಳೆದ 15 ವರ್ಷಗಳಿಂದ ಅತ್ಯಂತ ದುರ್ಬಲಗೊಂಡು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಕ್ಷೇತ್ರ ಶಾಸಕ ಜಿ.ಎಚ್. ಶ್ರೀನಿವಾಸ್ ಪುನರ್ ನಿರ್ಮಾಣ ಕಾರ್ಯ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ. ಅವರಿಗೆ ಧನ್ಯವಾದ.

- ಟಿ.ಆರ್.ಶ್ರೀಧರ್‌ ಅಧ್ಯಕ್ಷ, ಕಾರ್ಮಿಕ ವಿಭಾಗ, ಜಿಲ್ಲಾ ಕಾಂಗ್ರೆಸ್, ಚಿಕ್ಕಮಗಳೂರು-16ಕೆಟಿಆರ್.ಕೆ.1ಃ ತರೀಕೆರೆ ಗಾಳಿಹಳ್ಳಿ ಕ್ರಾಸ್.ನಲ್ಲಿರುವ ಪ್ರಮುಖ ಸಂಪರ್ಕ ಸೇತುವೆ ಪುನರ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ.16ಕೆಟಿಆರ್.ಕೆ.2ಃ ಶಾಸಕ ಜಿ.ಹೆಚ್.ಶ್ರೀನಿವಾಸ್,16ಕೆಟಿಆರ್.ಕೆ.3ಃ ಟಿ.ಆರ್.ಶ್ರೀಧರ್, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಅಧ್ಯಕ್ಷರು16ಕೆಟಿಆರ್.ಕೆ.4ಃ ಕನ್ನಡಪ್ರಭ ಪತ್ರಿಕೆ ಸೇತುವೆ ಪುನರ್ ನಿರ್ಮಾಣ ಬಗ್ಗೆ ವರದಿ ಪ್ರಕಟಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಲೇಬೆನ್ನೂರು ಆರೋಗ್ಯ ಕೇಂದ್ರದಲ್ಲಿ ಸಮಸ್ಯೆಗಳ ಪರಿಹರಿಸಿ
ಕಸ ಸಂಗ್ರಹ ಗಾಡಿಗಳು ನಾಪತ್ತೆ: ಕೆಎಚ್‌ಬಿ ಕಾಲೋನಿಯಲ್ಲಿ ದುರ್ನಾತ!