ಶಿವಮೊಗ್ಗ: ಸ್ಥಗಿತಗೊಳಿಸಿರುವ ಅಂತ್ಯಸಂಸ್ಕಾರ ಯೋಜನೆಯನ್ನು ಕೂಡಲೇ ಮರುಜಾರಿಗೊಳಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಡತನ ರೇಖೆಗಿಂತ ಕೆಳಗಿನ ಆದಾಯವಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಯಾವುದೇ ಸದಸ್ಯರು, ಯಾವುದೇ ಧರ್ಮ ಅಥವಾ ಜಾತಿಯವರಾಗಲೀ ಮೃತರಾದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಸುವ ವಾರಸುದಾರರಿಗೆ 2006ರಲ್ಲಿ ಅಂತ್ಯಸಂಸ್ಕಾರ ಯೋಜನೆ ಜಾರಿಗೊಳಿಸಲಾಗಿತ್ತು ಎಂದು ತಿಳಿಸಿದರು.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆರಂಭಿಸಲಾಗಿದ್ದ ಅಂತ್ಯಸಂಸ್ಕಾರ ಯೋಜನೆಗೆ ಮೃತಪಟ್ಟ ವಾರಸುದಾರರಿಗೆ 5000 ರು. ಧನಸಹಾಯವನ್ನು ರಾಜ್ಯ ಸರ್ಕಾರ ನೀಡುತ್ತಾ ಬಂದಿತ್ತು. ಈ ಧನಸಹಾಯ ಪಡೆಯಲು ಮೃತಪಟ್ಟವರ ವಾರಸುದಾರರು ಮೃತರ ಭಾವಚಿತ್ರ, ಮರಣಪ್ರಮಾಣಪತ್ರ, ಆಧಾರ್‌ಕಾರ್ಡ್, ರೇಷನ್‌ಕಾರ್ಡ್, ಮತದಾರ ಗುರುತಿನ ಚೀಟಿ, ವಾಸ ದೃಢೀಪತ್ರ, ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್ ಮೊದಲ ಪುಟದ ಜೆರಾಕ್ಸ್ ದಾಖಲೆಗಳನ್ನಷ್ಟೆ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿತ್ತು ಮತ್ತು ಧನಸಹಾಯ ಪಡೆಯಬಹುದಾಗಿತ್ತು ಎಂದರು.ತಹಸೀಲ್ದಾರರು ಈ ಯೋಜನೆಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಐದು ಸಾವಿರ ರು. ಧನಸಹಾಯ ಮಂಜೂರು ಮಾಡುತ್ತಿದ್ದರು. 2021ರ ಸೆಪ್ಟಂಬರ್ 1ರಿಂದ ಸರ್ಕಾರದ ಆರ್ಥಿಕ ಇಲಾಖೆಯ ಪ್ರಧಾನಕಾರ್ಯದರ್ಶಿಗಳ ಸುಳ್ಳು ಮಾಹಿತಿಯನ್ವಯ ಈ ಜನಪರ ಹಾಗೂ ಜೀವಪರ ಅಂತ್ಯಸಂಸ್ಕಾರ ಯೋಜನೆಯನ್ನು ಆವೈಜ್ಞಾನಿಕ ಮತ್ತು ಅವಮಾನವೀಯ ಸರ್ಕಾರ ರದ್ದುಗೊಳಿಸಿತ್ತು ಎಂದರು.ಈ ಯೋಜನೆಯಲ್ಲಿ ರಾಜ್ಯಸರ್ಕಾರ ನೀಡುವ ಐದು ಸಾವಿರ ರು. ಸಹಾಯಧನ ಅತ್ಯಂತ ಕೆಳಮಟ್ಟದ ಬಡಕುಟುಂಬದ ವ್ಯಕ್ತಿಯು ಮೃತರಾದ ಸಂದರ್ಭದಲ್ಲಿ ಅಂತ್ಯಸಂಸ್ಕಾರ, ಮೂರು ದಿನ ಮತ್ತು 9 ದಿನದ ಕಾರ್ಯ ನಡೆಸಲು ಸಹಾಯವಾಗುತ್ತಿತ್ತು. 2023ರಿಂದ ಈ ಹಿಂದೆ ರದ್ದಾಗಿದ್ದ ಈ ಯೋಜನೆಯನ್ನು ಕೂಡಲೇ ಮರುಜಾರಿಗೊಳಿಸಬೇಕು. ನೀಡಲಾಗುತ್ತಿದ್ದ ಐದು ಸಾವಿರ ರು. ಬದಲಾಗಿ ಹತ್ತು ಸಾವಿರ ರು. ನೀಡಲು ಹೆಚ್ಚಿಸಬೇಕೆಂದು ಒತ್ತಾಯಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಾಖಲೆ ಮಾಡಲಿದ್ದು, ಅವರಿಗೆ ನಮ್ಮ ಟ್ರಸ್ಟ್ ವತಿಯಿಂದ ಅಭಿನಂದನೆ ಮತ್ತು ಶುಭಾಶಯ ತಿಳಿಸಿದರು.