ಕನ್ನಡಪ್ರಭ ವಾರ್ತೆ ಚಾಮರಾಜನಗರಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಬದುಕಿರುವವರೆಗೂ ಶೋಷಣೆ ಮಾಡುವ ಜೊತೆಗೆ ಅವರ ನಿಧನ ಬಳಿಕವು ಶವ ಸಂಸ್ಕಾರಕ್ಕೂ ಜಾಗ ನೀಡದೆ ಅಪಮಾನ ಮಾಡಿದ್ದು, ಇಂಥ ಪಕ್ಷವನ್ನು ತಿರಸ್ಕರಿಸುವ ಮೂಲಕ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು ತಿಳಿಸಿದರು.
ಅಂಬೇಡ್ಕರ್ ರವರು ಕಾಂಗ್ರೆಸ್ ಉರಿಯುವ ಮನೆ. ನನ್ನ ಜನ ಯಾರು ಅಲ್ಲಿಗೆ ಹೋಗಬೇಡಿ. ಸುಟ್ಟು ಹೋಗುತ್ತೀರಿ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸುವ ಮೂಲಕ ಅವರ ಅಶಯಗಳಿಗೆ ವಿರುದ್ದವಾಗಿ ನಡೆದುಕೊಂಡಿದ್ದೇವೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 136 ಸೀಟುಗಳ ಬರಲು ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಹೆಚ್ಚು ಮತ ಕಾರಣವಾಗಿದೆ. ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ದಲಿತರ ವಿರೋಧಿಯಾಗಿದೆ. ಗ್ಯಾರಂಟಿ ನೆಪದಲ್ಲಿ ದಲಿತರಿಗೆ ನೀಡಬೇಕಾದ 11 ಸಾವಿರ ಕೋಟಿ ರು.ಗಳನ್ನು ಇತರೇ ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡು ನಮ್ಮ ದಲಿತ ಮಕ್ಕಳಿಗೆ ಹಾಗೂ ನಿರುದ್ಯೋಗಿ ಯವಕರಿಗೆ ಅನ್ಯಾಯ ಮಾಡಿದೆ. ಅನ್ಯಾಯದ ಬಗ್ಗೆ ರಾಜ್ಯಾದ್ಯಂತ ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಭೀಮ ಸಮಾವೇಶದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಬಲಗೈ ಸಮುದಾಯ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ ಯಾವ ಯಾವ ಸಂದರ್ಭಗಳಲ್ಲಿ ಮೋಸ ಮಾಡಿದೆ ಎಂಬುದನ್ನು ವಿಡಿಯೋ ಚಿತ್ರ ದಾಖಲೆಗಳ ಸಮೇತ ಪ್ರಚುರಪಡಿಸಿದರು. ಸಿಎಂ ಸಿದ್ದರಾಮಯ್ಯ ದಲಿತ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ ಅವರನ್ನು ತುಳಿದು ಮುಖ್ಯಮಂತ್ರಿಯಾಗಿ ಈಗ ನಾನು ಸಹ ದಲಿತ ಎನ್ನುತ್ತಿದ್ದಾರೆ. ನಿನ್ನೆ ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಶದಲ್ಲಿ ಶೋಷಿತ ಮಹಿಳೆಯಾಗಿರುವ ದೇಶದ ಘನವೆತ್ತ ರಾಷ್ಟ್ರಪತಿಗಳಾದ ದ್ರೌಪತಿ ಮುರ್ಮ ಅವರನ್ನು ಏಕ ವಚನದಲ್ಲಿ ಸಂಭೋದಿಸುವ ಮೂಲಕ ತಮ್ಮ ಸಂಸ್ಕೃತಿಯನ್ನು ಬಿಂಬಿಸಿದ್ದಾರೆ ಎಂದರು. ದಲಿತರಿಂದ ಮತ ಪಡೆದು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಆ ವರ್ಗದ ನಾಯಕರನ್ನು ತುಳಿಯುವ ಜೊತೆಗೆ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ 11 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿಗೆ ಬಳಕೆ ಮಾಡಿದ್ದಾರೆ. ನಿಜವಾದ ದಲಿತರ ವಿರೋಧಿಗಳು ಕಾಂಗ್ರೆಸ್ ಪಕ್ಷದವರು, ಬಿಜೆಪಿ ಮೇಲೆ ಕೋಮುವಾದಿ ದಲಿತರ ವಿರೋಧಿ ಎಂದು ಬೊಗಳೆ ಬಿಡುವ ಕಾಂಗ್ರೆಸ್ ಪಕ್ಷದ ಮುಖಂಡರು ಇತಿಹಾಸವನ್ನು ತಿರುವಿ ನೋಡಬೇಕು ಎಂದರು.ನೆಹರು ಮನೆತನಕ್ಕೆ ಬದುಕಿರುವಾಗಲೇ ಭಾರತ ರತ್ನ ನೀಡಿ ಗೌರವಿಸಿದೆ. ಆದರೆ, ಅಂಬೇಡ್ಕರರಿಗೆ ಭಾರತ ರತ್ನ ನೀಡಿದ್ದು, ಕಾಂಗ್ರೆಸ್ಸೇತರ ಸರ್ಕಾರ. ಕಾಂಗ್ರೆಸ್ ಮೋಸದ ಬಗ್ಗೆ ಹೇಳುವ ಮೂಲಕ ಆ ಮುಖಂಡರನ್ನು ಪ್ರಶ್ನೆ ಮಾಡಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕೇವಲ 10 ವರ್ಷಗಳಲ್ಲಿ ದೇಶದ ಅಭಿವೃದ್ದಿ ಹಾಗೂ ದೀನ ದಲಿತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಮಾಡಿ, ಸಾವಿರಾರು ಕೋಟಿ ಅನುದಾವನ್ನು ನೀಡಿದೆ. 60 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿತ್ತು ಅದರ ಹತ್ತು ಪಟ್ಟು ಕೆಲಸವನ್ನು ಕೇವಲ 10 ವರ್ಷದಲ್ಲಿ ಮಾಡಿದ್ದಾರೆ. ಸಂವಿಧಾನ ರಕ್ಷಣೆ ಹಾಗೂ ಪ್ರತಿಯೊಬ್ಬ ಭಾರತೀಯನ ರಕ್ಷಣೆಯಲ್ಲಿ ಬಿಜೆಪಿ ಸರ್ಕಾರ ತೊಡಗಿದೆ. ಈ ಬಗ್ಗೆ ನಮ್ಮ ಸಮುದಾಯದ ಮುಖಂಡರು ಆತ್ಮವಲೋಕನ ಮಾಡಿಕೊಂಡು ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್‌ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಗ್ಯಾರಂಟಿಯನ್ನು ನೀಡಿ, ಜನರನ್ನು ಮರುಳು ಮಾಡಿ, ಮತ ಪಡೆಯಲು ಮುಂದಾಗಿದ್ದು ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರವಾಗಿದ್ದು, ಈ ಸರ್ಕಾರದ ದೌರ್ಜನ್ಯ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಪರಿಶಿಷ್ಟ ಜಾತಿ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ರಾಜಯ ಕಾರ್ಯದರ್ಶಿ ಪರಮಾನಂದ, ಮುಖಂಡರಾದ ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಡಾ.ರಾಜು, ವಂಕಟರಾಮಣಸ್ವಾಮಿ, ಹನೂರು ವೆಂಕಟೇಶ್, ಶಿವರಾಮು, ಎ.ಆರ್.ಬಾಲರಾಜು, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆರೆಹಳ್ಳಿ ಮಹದೇವಸ್ವಾಮಿ, ಅಯ್ಯನಪುರ ಶಿವಕುಮಾರ್, ನಲ್ಲೂರು ಪರಮೇಶ, ಬಂಗಾರು, ಶುಭೋದಯ ಸಿದ್ದರಾಜು, ಕಾಳಿ ಚರಣ್, ಛಲವಾದಿ ಮಹಾಸಭಾದ ಹಂಸರಾಜು ಸೇರಿದಂತೆ ಅನೇಕರು ಭಾಗವಹಿಸಿದ್ದರು.