ಷರತ್ತು ಸಡಿಲಿಸಿ ಖಾಲಿ ಹುದ್ದೆ ಭರ್ತಿಗೆ ಅವಕಾಶ ನೀಡಿ

KannadaprabhaNewsNetwork | Published : Aug 5, 2024 12:35 AM

ಸಾರಾಂಶ

ಸದನದ ಹೊರಗಡೆ ಎಲ್ಲ ಶಿಕ್ಷಣ ಸಂಸ್ಥೆಗಳು ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆದಿದ್ದವು. ಸದನದ ಒಳಗೆ ನಾನು ಸರ್ಕಾರದ ಗಮನಕ್ಕೆ ತಂದಿದ್ದೇನೆ

ಗದಗ: 1986-95 ರಿಂದ ಪ್ರಾರಂಭವಾಗಿ ಅನುದಾನಕ್ಕೆ ಒಳಪಟ್ಟ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. 1986ರ ಪೂರ್ವದಲ್ಲಿ ಸಾಕಷ್ಟು ಸಂಸ್ಥೆಗಳು ಪ್ರಾರಂಭವಾಗಿವೆ. ಕೂಡಲೇ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹುದ್ದೆ ತುಂಬಲು ಅನುಮತಿ ನೀಡಬೇಕು ಎಂದು ವಿಪ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆದೇಶದಿಂದ ಸರ್ಕಾರ ದೊಡ್ಡ ತಪ್ಪು ಮಾಡಿದೆ. ರಾಜ್ಯ ಸರ್ಕಾರದ ಶಿಕ್ಷಣ ಸಚಿವರು ಇದನ್ನು ಗಮನಿಸಬೇಕು.ಕೂಡಲೇ ಈ ಸುತ್ತೊಲೆ ತಿದ್ದುಪಡಿ ಮಾಡಬೇಕು. 7 ಷರತ್ತು ನೀಡಿ ಹುದ್ದೆ ತುಂಬಲು ಸರ್ಕಾರ ಆದೇಶ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2016 ರಿಂದ ಇಲ್ಲಿಯವರೆಗೆ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ, ಶಾಲಾ-ಕಾಲೇಜುಗಳ ಫಲಿತಾಂಶದ ಆಧಾರದ ಮೇಲೆ ಹುದ್ದೆ ಭರ್ತಿ ಮಾಡಲು ಅವಕಾಶ ನೀಡಿದ್ದಾರೆ. ಆದರೆ, ಶಿಕ್ಷಕರ ಕೊರತೆಯಿಂದ ಫಲಿತಾಂಶದಲ್ಲಿ ಏರು-ಪೇರಾಗುವುದು ಸಹಜ. ಕೂಡಲೇ ಈ ಷರತ್ತನ್ನು ಸರ್ಕಾರ ಸಡಿಲಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ, ನಿಧನದಿಂದ ತೆರುವಾದ ಹುದ್ದೆ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿರಲಿಲ್ಲ. ಸದನದ ಹೊರಗಡೆ ಎಲ್ಲ ಶಿಕ್ಷಣ ಸಂಸ್ಥೆಗಳು ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆದಿದ್ದವು. ಸದನದ ಒಳಗೆ ನಾನು ಸರ್ಕಾರದ ಗಮನಕ್ಕೆ ತಂದಿದ್ದೇನೆ. 9 ವರ್ಷಗಳ ಹೋರಾಟದ ಫಲವಾಗಿ 2016 ರಿಂದ 2020ರ ಅವಧಿಯ ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ಕಾಲೇಜು ಹುದ್ದೆಗಳನ್ನು ತುಂಬಲು ಸರ್ಕಾರದ ಆರ್ಥಿಕ ಇಲಾಖೆ ಆದೇಶ ನೀಡಿದೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪುನರ್ಜಿವನ ನೀಡಿದಂತಾಗಿದೆ. ಸರ್ಕಾರಕ್ಕೆ ಹಾಗೂ ಸಚಿವ ಮಧು ಬಂಗಾರಪ್ಪ, ಸುಧಾಕರ್ ಅವರಿಗೆ ಅಭಿನಂದನೆ ಎಂದು ತಿಳಿಸಿದರು.

ನಿವೃತ್ತಿಯಿಂದ ಖಾಲಿಯಾದ ಹುದ್ದೆಗಳನ್ನು ತುಂಬಲು ಶಾಲಾ-ಕಾಲೇಜುಗಳಿಗೆ ದಾಖಲೆ ನೀಡಲು ಆನ್ ಲೈಲ್ ಮೂಲಕ ಸ್ಪೆಷಲ್ ಪೊರ್ಟಲ್ ನಲ್ಲಿ ಅವಕಾಶ ಮಾಡಿಕೊಟ್ಟಿದ್ದು ಸ್ವಾಗತಾರ್ಹವಾಗಿದೆ. ಹೈಸ್ಕೂಲ್, ಪಿಯುಸಿ, ಪದವಿ ಕಾಲೇಜುಗಳಿಗೆ ಹುದ್ದೆ ಭರ್ತಿ ಮಾಡಲು ಅವಕಾಶ ಕೊಟ್ಟಿದ್ದಾರೆ. ಆದರೆ, ಪ್ರಾಥಮಿಕ ಶಾಲೆಗೆ ಅವಕಾಶ ನೀಡಿಲ್ಲ. ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ 20 ವರ್ಷದಿಂದ ಶಿಕ್ಷಕರ ಹುದ್ದೆ ಖಾಲಿಯಾಗಿವೆ. ಕೂಡಲೇ ಆರ್ಥಿಕ ಇಲಾಖೆಗೆ ಪ್ರಾಥಮಿಕ ಶಾಲೆಯ ಹುದ್ದೆ ತುಂಬಲು ಅವಕಾಶ ಮಾಡಿಕೊಡಬೇಕು. ಪದವಿ ಕಾಲೇಜಿನಿಂದ ಪದವಿ ಪೂರ್ವ ಕಾಲೇಜುಗಳು ಬೇರ್ಪಟ್ಟಿವೆ. ಬೇರ್ಪಟ್ಟ ಕಾಲೇಜುಗಳ ಹುದ್ದೆ ತುಂಬಲು ಅನುಮತಿ ಕೊಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯದಲ್ಲಿನ ಖಾಸಗಿ ಹೈಸ್ಕೂಲ್ ನಲ್ಲಿ 8084, ಪಿಯುಸಿಯಲ್ಲಿ 2671, ಪದವಿಯಲ್ಲಿ 4200 ಹುದ್ದೆಗಳು ಖಾಲಿಯಾಗಿದ್ದು, ಒಟ್ಟು 14761ಹುದ್ದೆಗಳು ಖಾಲಿಯಾಗಿವೆ. ರಾಜ್ಯದಲ್ಲಿ ಸುಮಾರು 2.50 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ. ಕೂಡಲೇ ಎಲ್ಲ ಹುದ್ದೆ ಭರ್ತಿ ಮಾಡಬೇಕು ಎಂದರು.

Share this article