ಕನ್ನಡಪ್ರಭ ವಾರ್ತೆ ಹಾಸನ
ಮಾಧ್ಯಮಗಳು ಪ್ರಗತಿಗೆ ಮುಖ್ಯ:
ಡಿಜಿಟಲ್ ಮಾಧ್ಯಮವು ಜನರನ್ನು ಖುಷಿಪಡಿಸುವ ಜೊತೆಗೆ ಸಮಸ್ಯೆಗಳನ್ನೂ ಸೃಷ್ಟಿಸುತ್ತಿದೆ. ಅತಿಯಾದ ಹೊಗಳಿಕೆ ಅಥವಾ ಟೀಕೆ ಸರಿಯಲ್ಲ, ಇದರಿಂದ ಸಮಸ್ಯೆಗಳೇ ಹೆಚ್ಚಾಗುತ್ತವೆ. ತಾವು ಈಗಲೂ ಸಂಪಾದಕೀಯವನ್ನು ಓದುತ್ತಿದ್ದು, ಮುದ್ರಣ ಮಾಧ್ಯಮವನ್ನು ಮಾತ್ರ ನಂಬುವುದಾಗಿ ಹೇಳಿದರು. "ನಕಲಿ ಸುದ್ದಿಗಳನ್ನು ನಿಲ್ಲಿಸದೇ ಇದ್ದರೆ ಅನೇಕ ಜನರಿಗೆ ಹಾರ್ಟ್ ಅಟ್ಯಾಕ್ " ಆಗಿ ಸಾಯುತ್ತಾರೆ. ಅದಕ್ಕೇ ನಾನು ಕೀಪ್ಯಾಡ್ ಮೊಬೈಲ್ ಇಟ್ಟುಕೊಂಡಿದ್ದೇನೆ ಎಂದು ತಮ್ಮ ಗ್ರಾಮೀಣ ಶೈಲಿಯಲ್ಲಿ ಹಾಸ್ಯಭರಿತವಾಗಿ ಹೇಳಿದಾಗ ಕಾರ್ಯಕ್ರಮದಲ್ಲಿ ನಗುವಿನ ಅಲೆ ಎದ್ದಿತು. ಮಾಧ್ಯಮವು ವ್ಯಾಪಾರೀಕರಣಗೊಳ್ಳಬಾರದು, ಸನಾತನ ಕಾಲದಿಂದ ಉಳಿದಿರುವ ಬದ್ಧತೆಯೇ ಮುಂದುವರಿಯಲಿ. ಮಾಧ್ಯಮಗಳು ಜಗತ್ತಿನ ಪ್ರಗತಿಗೆ ಮುಖ್ಯವಾಗಿದ್ದು, ಕೇಂದ್ರ ಸರ್ಕಾರವು ಜಿಎಸ್ಟಿ ಕುರಿತು ತೋರುತ್ತಿರುವ ಮಲತಾಯಿ ಧೋರಣೆಯ ಬಗ್ಗೆ ಬೆಳಕು ಚೆಲ್ಲುವಂತೆ ಅವರು ಮಾಧ್ಯಮಗಳಿಗೆ ಮನವಿ ಮಾಡಿದರು.ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸುದ್ದಿಗಳ ಬದಲಾಗಿ ಅಭಿಪ್ರಾಯಗಳನ್ನು ಹೇರುವ ಪ್ರವೃತ್ತಿ ಹೆಚ್ಚಾಗಿದೆ. ಮೊಬೈಲ್ ಹೊಂದಿರುವವರೆಲ್ಲರೂ ಪತ್ರಕರ್ತರಾಗಿದ್ದು, ಸುದ್ದಿ ನಿಜವೋ ಸುಳ್ಳೊ ಅಥವಾ ಅದರ ಹಿಂದಿನ ಉದ್ದೇಶ ಏನಿದೆ ಎಂಬುದನ್ನು ಪರಿಶೀಲಿಸುವ ಸಂಯಮ ತೋರುತ್ತಿಲ್ಲ. ಇದು ಉತ್ತಮ ಪತ್ರಿಕೋದ್ಯಮಕ್ಕೆ ದೊಡ್ಡ ಬೆದರಿಕೆಯಾಗಿದ್ದು, ಆತಂಕಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು. ಮಾಧ್ಯಮವು ಸಮಾಜವನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟವೇ ಇದಕ್ಕೆ ಉತ್ತಮ ಉದಾಹರಣೆ. ಸಮಾಜದಲ್ಲಿ ಪತ್ರಕರ್ತರ ಮೇಲೆ ಹೆಚ್ಚಿನ ನಂಬಿಕೆ ಇದೆ, ಆದರೆ ಅವರ ಸುರಕ್ಷತೆಯನ್ನು ಒದಗಿಸುವಲ್ಲಿ ಸಮಾಜ ವಿಫಲವಾಗಿದೆ. ಆದ್ದರಿಂದ, ಪತ್ರಕರ್ತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಅತ್ಯಂತ ಮುಖ್ಯ ಎಂದು ಪ್ರತಿಪಾದಿಸಿದರು. ನಿಖರವಾದ ಸುದ್ದಿಗೆ ಹೇಗೆ ಬೇಡಿಕೆಯಿದೆಯೋ, ಅದೇ ರೀತಿ ನಿಖರವಾದ ಪತ್ರಕರ್ತರ ಅವಶ್ಯಕತೆ ಜಗತ್ತಿಗಿದೆ, ಅದು ಯಾವುದೇ ಮಾಧ್ಯಮವಾಗಲಿ ಎಂದರು.
ಶಾಸಕ ಶಿವಲಿಂಗೇಗೌಡರ ಕಾರ್ಯವೈಖರಿಯನ್ನು ಶ್ಲಾಘಿಸಿದ ಲತಾಕುಮಾರಿ ಅವರು, ನಗರೀಕರಣದ ಮಿಶ್ರಣವಿಲ್ಲದೆ ಗ್ರಾಮೀಣ ಸೊಗಡಿನಲ್ಲಿ ಮಾತು ಮತ್ತು ವಿಶ್ಲೇಷಣೆ ಮಾಡುವ ಅವರ ಕಾರ್ಯ ನಿಜಕ್ಕೂ ವಿಶೇಷ ಎಂದರು. ನೋಡಿದ್ದನ್ನು ಪ್ರಮಾಣೀಕರಿಸುವ ಸಂಪ್ರದಾಯವನ್ನು ಪತ್ರಕರ್ತರು ಹೆಚ್ಚು ಅಳವಡಿಸಿಕೊಳ್ಳಬೇಕು ಮತ್ತು ಪ್ರಜ್ಞಾವಂತರಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ, ಪತ್ರಕರ್ತರಿಗಾಗಿ ನಿವೇಶನ ಒದಗಿಸಲು ಸಹಕರಿಸುವುದಾಗಿ ಭರವಸೆ ನೀಡಿದ ಅವರು, ಕಾರ್ಯಕ್ರಮಕ್ಕಾಗಿ ತಮ್ಮ ಸಮಯವನ್ನು ಮೀಸಲಿಟ್ಟಿರುವುದಾಗಿ ತಿಳಿಸಿ, ಪತ್ರಕರ್ತರಿಗೆ ತಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು. ಕನ್ನಡಪ್ರಭ ಮತ್ತು ಸುವರ್ಣ ಟಿವಿ ವಾಹಿನಿಯ ಮುಖ್ಯಸ್ಥ ರವಿ ಹೆಗಡೆ ಡಿಜಿಟಲ್ ಮಾಧ್ಯಮದ ಬೆಳವಣಿಗೆಯ ಬಗ್ಗೆ ಮಾತನಾಡಿ, ಇಂದಿನ ಡಿಜಿಟಲ್ ಕ್ರಾಂತಿ ಪತ್ರಿಕೋದ್ಯಮಕ್ಕೆ ಸವಾಲೊಡ್ಡಿದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವವರು ಮಾತ್ರ ಬದುಕುಳಿಯುತ್ತಾರೆ. ಕಲ್ಲಚ್ಚಿನಿಂದ ಫ್ಲಾಷ್‌ನ್ಯೂಷ್ ನ್ಯೂಸ್‌ವರೆಗೆ ಮಾಧ್ಯಮ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದು, ಇದೀಗ ಒಂದು ರೀತಿಯ ಡಿಜಿಟಲ್ ಸುನಾಮಿ ಉಂಟಾಗಿದೆ. ಮುದ್ರಣ ಮಾಧ್ಯಮವು ಹೆಚ್ಚು ಕಾಲ ಉಳಿಯುವುದು ಕಷ್ಟ, 2043ರ ವೇಳೆಗೆ ಅದು ಸಂಪೂರ್ಣ ನಿಂತುಹೋಗಬಹುದು ಎಂಬ ಆತಂಕ ವ್ಯಕ್ತಪಡಿಸಿದ ಅವರು, ದೃಶ್ಯ ಮಾಧ್ಯಮವೂ ಕೂಡ ದೀರ್ಘಕಾಲ ಮುಂದುವರಿಯುವುದಿಲ್ಲ ಎಂದು ಭವಿಷ್ಯ ನುಡಿದರು. ಕೋವಿಡ್ ನಂತರ,24/7 ಸುದ್ದಿ ವಾಹಿನಿಗಳ ಟಿಆರ್‌ಪಿ ಕಡಿಮೆಯಾಗುತ್ತಿದೆ. ಆದರೆ, ಸುದ್ದಿಗಳನ್ನು ಓದುವವರು ಮತ್ತು ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮುದ್ರಣ ಮಾಧ್ಯಮ ಓದುಗರು ಡಿಜಿಟಲ್ ವೇದಿಕೆಗಳತ್ತ, ಟಿವಿ ವೀಕ್ಷಕರು ಯೂಟ್ಯೂಬ್ ಕಡೆಗೆ ಬದಲಾಗುತ್ತಿದ್ದಾರೆ ಎಂಬ ಗಂಭೀರ ವಿಷಯವನ್ನು ಅವರು ತಿಳಿಸಿದರು. ಇದೇ ರೀತಿಯ ಬದಲಾವಣೆ ಸಿನಿಮಾ ಕ್ಷೇತ್ರದಲ್ಲೂ ಆಗಿದ್ದು, ಪತ್ರಿಕೋದ್ಯಮ ಇನ್ನು ಪತ್ರಿಕೋದ್ಯಮವಲ್ಲ, ಅದು ಮೀಡಿಯಾ ಟೆಕ್ ಉದ್ಯಮವಾಗಿದೆ ಎಂದು ರವಿ ಹೆಗಡೆ ಹೇಳಿದರು.
ಸಾಂಪ್ರದಾಯಿಕ ಮಾಧ್ಯಮವನ್ನು ಈ ಡಿಜಿಟಲ್ ಯುಗದಲ್ಲಿ ಹೇಗೆ ಉಳಿಸಿಕೊಳ್ಳುವುದು ಎಂಬುದೇ ಪ್ರಸ್ತುತದ ಮುಖ್ಯ ಪ್ರಶ್ನೆ. ಯಾರು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೋ ಅವರು ಮಾತ್ರ ಬದುಕುಳಿಯುತ್ತಾರೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದರು. ಡಿಜಿಟಲ್ ಕ್ರಾಂತಿಯನ್ನು ಎರಡು ಅಲುಗಿನ ಕತ್ತಿಯ ಪರಿಸ್ಥಿತಿ ಎಂದು ಬಣ್ಣಿಸಿದ ಅವರು, ಡಿಜಿಟಲ್ ಮಾಧ್ಯಮದಲ್ಲಿ ಎಲ್ಲರಿಗೂ ಅವಕಾಶವಿದೆ, ಆದರೆ ಇಲ್ಲಿ ಸಂಯಮದ ಕೊರತೆ ಇದೆ ಎಂದು ಎಚ್ಚರಿಸಿದರು. ಸೌಜನ್ಯ ಪ್ರಕರಣವು ಪದೇ ಪದೇ ಮುನ್ನೆಲೆಗೆ ಬರುತ್ತಿರುವುದು ಡಿಜಿಟಲ್ ಮಾಧ್ಯಮಗಳಿಂದಲೇ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸಂಯಮ, ವಿವೇಚನೆ ಇದೆ ಆದರೆ ಡಿಜಿಟಲ್ ವೇದಿಕೆಗಳಲ್ಲಿ ಬಟನ್‌ಗಳು ಮಾತ್ರ ಇರುತ್ತದೆ ಎಂದು ತಿಳಿಸಿದರು. ಇಂದಿನ ದಿನಗಳಲ್ಲಿ ಡಿಜಿಟಲ್ ಮತ್ತು ಮುಖ್ಯವಾಹಿನಿ ಮಾಧ್ಯಮಗಳ ನಡುವೆ ಒಂದು ರೀತಿಯ ಯುದ್ಧವೇ ನಡೆಯುತ್ತಿದೆ. ಆದರೆ ಇದು ಅನಗತ್ಯ, ಎಲ್ಲರೂ ಸಮಾಜದ ಒಳಿತಿಗಾಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಆಶಿಸಿದರು. ಕೃತಕ ಬುದ್ಧಿಮತ್ತೆ ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಅಪಾಯವನ್ನು ಹೆಚ್ಚಿಸುತ್ತಿರುವುದು ಸತ್ಯ. ಮಾಧ್ಯಮಕ್ಕೆ ವಿಶ್ವಾಸಾರ್ಹತೆ ಮುಖ್ಯವಾಗಿದ್ದು, ಎಲ್ಲಾ ಮಾಧ್ಯಮಗಳು ಇದನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
93 ವರ್ಷಗಳ ಇತಿಹಾಸವಿರುವ ಸಂಘದಲ್ಲಿ 10 ಸಾವಿರ ಸದಸ್ಯರಿದ್ದು, ಅದರ ಬೆಳವಣಿಗೆಯಲ್ಲಿ ಹಾಸನ ಜಿಲ್ಲೆಯ ಪಾತ್ರ ದೊಡ್ಡದಿದೆ ಎಂದರು. ಬಾಳು ಗೋಪಾಲ್ ಸಾತ್ವಿಕ ಮನಸ್ಸಿನ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿರುವರು ಎಂದರು. ಮುಖ್ಯಮಂತ್ರಿಗಳ ಆರೋಗ್ಯ ಸಂಜೀವಿನಿ ಹಾಗೂ ಗ್ರಾಮೀಣ ಪತ್ರಕರ್ತರ ಯೋಜನೆಗಳನ್ನು ಜಾರಿಗೆ ತಂದ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಘವು ಕೃತಜ್ಞತೆ ಸಲ್ಲಿಸಿತು. ಅಲ್ಲದೆ, ಈ ಯೋಜನೆಗಳನ್ನು ಮಾನ್ಯತೆ ಇಲ್ಲದ ಸದಸ್ಯರಿಗೂ ವಿಸ್ತರಿಸುವಂತೆ ಶಾಸಕ ಶಿವಲಿಂಗೇಗೌಡರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ, ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಿದರು. ಜೊತೆಗೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇಂದಿನ ಡಿಜಿಟಲ್ ಕ್ರಾಂತಿ ಪತ್ರಿಕೋದ್ಯಮಕ್ಕೆ ಸವಾಲೊಡ್ಡಿದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವವರು ಮಾತ್ರ ಬದುಕುಳಿಯುತ್ತಾರೆ. ಕಲ್ಲಚ್ಚಿನಿಂದ ಫ್ಲಾಷ್‌ನ್ಯೂಷ್ ನ್ಯೂಸ್‌ವರೆಗೆ ಮಾಧ್ಯಮ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದು, ಇದೀಗ ಒಂದು ರೀತಿಯ ಡಿಜಿಟಲ್ ಸುನಾಮಿ ಉಂಟಾಗಿದೆ. ಬದಲಾದ ತಂತ್ರಜ್ಞಾನದಲ್ಲಿ ಕಾಗದದ ಪತ್ರಿಕೆ ಓದುಗರಿಗಿಂತ ಡಿಜಿಟಲ್ ಸುದ್ದಿ ಓದುವವರ ಸಂಖ್ಯೆ ಹೆಚ್ಚಾಗಿದೆ ಎಂದು ಏಷ್ಯಾನೆಟ್ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ ತಿಳಿಸಿದರು. ಬರೀ ಮೀಡಿಯಾ ಆಗಿರಲು ಸಾಧ್ಯವಿಲ್ಲ. ಹಾಗಿದ್ದರೆ ಆ ಸಂಸ್ಥೆ ಹೆಚ್ಚುಕಾಲ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಅದು ಮೀಡಿಯಾ ಟೆಕ್ ಆಗಬೇಕು. ಆಗ ಮಾತ್ರ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಹಾಗಾಗಿ ಮಾಧ್ಯಮ ಡಿಜಿಟಲೀಕರಣ ಆದ ನಂತರದಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಮೊಬೈಲ್ ಕೈಗೆ ಬಂದ ನಂತರದಲ್ಲಿ ಮಾಧ್ಯಮವೂ ಬದಲಾಗಿದೆ. ವೇಗ ಹೆಚ್ಚಾಗಿದೆ ಎಂದು ಹೇಳಿದರು.