2023-24ನೇ ಸಾಲಿನ ಬೆಳೆವಿಮೆ ಬಿಡುಗಡೆ ಮಾಡಿ-ರೈತರ ಮನವಿ

KannadaprabhaNewsNetwork | Published : Oct 25, 2024 1:46 AM

ಸಾರಾಂಶ

ರಾಣಿಬೆನ್ನೂರು ತಾಲೂಕಿನಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಯನ್ನು ಪಿಎಂಎಫ್‌ಬಿವೈ ಅಡಿಯಲ್ಲಿ ನೋಂದಾವಣಿಯಾದ ರೈತರಿಗೆ ಶೀಘ್ರ ಇತ್ಯರ್ಥಪಡಿಸಿ ಬಿಡುಗಡೆ ಮಾಡುವಂತೆ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ತಾಲೂಕಿನಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಯನ್ನು ಪಿಎಂಎಫ್‌ಬಿವೈ ಅಡಿಯಲ್ಲಿ ನೋಂದಾವಣಿಯಾದ ರೈತರಿಗೆ ಶೀಘ್ರ ಇತ್ಯರ್ಥಪಡಿಸಿ ಬಿಡುಗಡೆ ಮಾಡುವಂತೆ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ ಜಿಲ್ಲೆಯನ್ನು ಬರಗಾಲಪೀಡಿತ ಪಟ್ಟಿಗೆ ಸೇರಿಸಿತ್ತು. ಮೇಲಾಗಿ ಬರದ ಛಾಯೆಯಿಂದ ಹಲಗೇರಿ, ಬೆನಕನಕೊಂಡ, ಕಮದೋಡ, ಹೆಡಿಯಾಲ, ಸುಣಕಲ್ಲಬಿದರಿ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಗೋವಿನಜೋಳ, ಈರುಳ್ಳಿ ಮತ್ತಿತರ ಬೆಳೆಗಳು ಭೀಕರ ಬರಗಾಲದಿಂದಾಗಿ ಸಂಪೂರ್ಣ ಹಾಳಾಗಿವೆ. ಇದರಿಂದ ಈ ಭಾಗಗಳ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯಡಿ ನೋಂದಾಯಿಸಿಕೊಂಡ ರೈತರಿಗೆ ಇದುವರೆಗೂ ಬೆಳೆ ವಿಮೆ ಬಿಡುಗಡೆ ಮಾಡಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಬೆಳೆ ವಿಮೆ ಬಿಡುಗಡೆಗೆ ಕ್ರಮ ಜರುಗಿಸಬೇಕು. ರಾಜ್ಯ ಸರ್ಕಾರವೇ ಈ ಪ್ರದೇಶವನ್ನು ಬರಗಾಲ ಪೀಡಿತವೆಂದು ಘೋಷಣೆ ಮಾಡಿದ್ದರೂ ವಿಮಾ ಕಂಪನಿಯವರು ಆಣೆವಾರ ಮಾಡಿದ ಆಧಾರದ ಮೇಲೆ ಬೆಳೆ ವಿಮೆ ಬಿಡುಗಡೆ ಮಾಡುವುದಾಗಿ ಹೇಳುತ್ತಿರುವುದು ಸಮಂಜಸವಲ್ಲ. ಆದ್ದರಿಂದ ಸರ್ಕಾರ ಕೂಡಲೇ ಈ ಅಂಶವನ್ನು ಹಿಂದಕ್ಕೆ ಪಡೆಯಬೇಕು. ಇನ್ನೂ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಹಾನಿಯಾಗಿರುವ ಬೆಳೆಗಳಿಗೆ ಅತಿವೃಷ್ಟಿ ಪರಿಹಾರ ಬಿಡುಗಡೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ಕಡೂರ, ಕಾರ್ಯದರ್ಶಿ ರಮೇಶ ಮೂಲಿಮನಿ, ಸುರೇಶ ಧುಳೇಹೊಳಿ, ಕರೇಗೌಡ ಕರೇಗೌಡ್ರ, ಪರಮೇಶಪ್ಪ ಕನ್ನಪ್ಪಳವರ, ಯು.ಸಂತೋಷ, ಜಟ್ಟೆಪ್ಪ ಕನ್ನಪ್ಪಳವರ, ಚನ್ನವೀರಯ್ಯ ಹಿರೇಮಠ, ಉಮೇಶ ಮುದ್ದಪ್ಪಳವರ, ದರ್ಶನ ಕನ್ನಪ್ಪಳವರ, ರುದ್ರಪ್ಪ ಕೋಡಿಹಳ್ಳಿ ಮತ್ತಿತರರಿದ್ದರು.

Share this article