ಕನ್ನಡಪ್ರಭ ವಾರ್ತೆ ಬೆಂಗಳೂರು
‘ವಿಶ್ವ ಸಂಸ್ಕೃತಿಯ ಪುಟದಲ್ಲಿ ಭಾರತ ಕಣ್ಮರೆಯಾಗುವ ಆತಂಕ ಕಾಣಿಸುತ್ತಿದ್ದು, ಇದನ್ನು ಪ್ರಜ್ಞಾವಂತರು ತಡೆಯಬೇಕು’ ಎಂದು ಮಾಜಿ ಮುಖ್ಯಮಂತ್ರಿ, ಸರಸ್ವತಿ ಸಮ್ಮಾನ್ ಪುರಸ್ಕೃತ ವೀರಪ್ಪ ಮೊಯಿಲಿ ಹೇಳಿದರು.ಗುರುವಾರ ಗಾಂಧೀ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ‘ಹುಡುಕಾಟ’ ಸಂಶೋಧನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯಾವ ದೇಶದಲ್ಲಿ ವೈವಿದ್ಯತೆ, ಅನೇಕತೆಗೆ ಅವಕಾಶ ಇರುವುದಿಲ್ಲವೋ ಅಲ್ಲಿ ಸಂಸ್ಕೃತಿ ಬೆಳೆಯುವುದಿಲ್ಲ. ಲೋಕ ದೃಷ್ಟಿಯಿಲ್ಲದ ಸಾಹಿತ್ಯ, ದೇಶ ಸಾಂಸ್ಕೃತಿಕವಾಗಿ ಮುಳುಗುತ್ತದೆ. ವಿಶ್ವ ಸಂಸ್ಕೃತಿಯ ಮಹಾಯಾನದ ಕುರಿತ ಕೃತಿ ರಚನೆಗಾಗಿ ಅಧ್ಯಯನ ಮಾಡುತ್ತಿರುವ ಈ ಸಂದರ್ಭದಲ್ಲಿ ನನಗೆ ಸಾಂಸ್ಕೃತಿಕ ಜಗತ್ತಿನಲ್ಲಿ ಭಾರತ ಕಣ್ಮರೆಯಾಗುವ ಅಪಾಯ ಕಾಣಿಸುತ್ತಿದೆ. ಇಂತಹ ಭಯಾನ ಪರಿಸ್ಥಿತಿ ಬಾರದಂತೆ ಸತ್ಯ ಪ್ರತಿಪಾದನೆ ಮಾಡುವ ಜನ ತಡೆಯಬೇಕು’ ಎಂದು ಕರೆಕೊಟ್ಟರು.‘ಜೀವನ ದಿನೇದಿನೆ ಹೊಸದಾಗಬೇಕು. ಇದೇ ಪ್ರಕೃತಿಯ ನಿಯಮ. ಇಲ್ಲದಿದ್ದರೆ ವಿನಾಶ ಖಚಿತ. ನಾವು ಹಿಂದಕ್ಕೆ ಹೋಗುತ್ತಿದ್ದೇವೆ. ಹಿಂದೆ ಎಂದೋ ಮಾಡಿಟ್ಟ ಸಿದ್ಧಾಂತವೇ ಎಲ್ಲ ಕಾಲಕ್ಕೂ ಪ್ರಸ್ತುತ ಆಗುವುದಿಲ್ಲ. ಹೊಸದನ್ನು ಸಂಶೋಧಿಸುವುದೇ ವಿಜ್ಞಾನದ ಕೆಲಸ’ ಎಂದು ಹೇಳಿದರು.
‘ಸತ್ಯ ಅರಿಯುವುದೇ ಸಂಶೋಧನೆಯ ಆಶಯ. ಸಂಶೋಧಕ ಹಲವರು ಬಾರಿ ಶಿಲುಬೆಗೆ ಏರಬೇಕಾಗುತ್ತದೆ ಎಂದು ಹೇಳಿದ್ದ ಎಂ.ಎಂ.ಕಲಬುರ್ಗಿ ಅವರೇ ತಮ್ಮ ಮಾತಿಗೆ ನಿದರ್ಶನವಾದುದು ದುರ್ದೇವ. ಜನಪದ, ಸಂಸ್ಕೃತಿಯ ಬಗ್ಗೆ ಹೆಚ್ಚು ಸಂಶೋಧನೆ ಆಗಬೇಕು. ಆದರೆ, ಸಂಶೋಧಕರು ಆತಂಕದಲ್ಲಿದ್ದಾರೆ’ ಎಂದು ಮೊಯಿಲಿ ಕಳವಳ ವ್ಯಕ್ತಪಡಿಸಿದರು.‘ವಿಶ್ವ ವಿದ್ಯಾಲಯಗಳ ಸಂಶೋಧನೆ, ಚರ್ಚೆಗೆ ಮುಕ್ತವಾದ ಅವಕಾಶ ಕಲ್ಪಿಸುವ ಆಶಯಕ್ಕೆ ಕೊಡಲಿಪೆಟ್ಟು ಬೀಳುತ್ತಿದೆ. ಸಂಶೋಧನೆಗೆ ಹಣಕಾಸು ನೆರವು ನೀಡುವ ಯುಜಿಸಿ ಇಂಥದ್ದೇ ವಿಷಯಕ್ಕೆ ಆದ್ಯತೆ ಕೊಡಬೇಕು ಎಂದು ನಿರ್ದೇಶಿಸುತ್ತಿದೆ. ವಿವಿಗಳು ಸರ್ಕಾರದ ಪ್ರಚಾರ ಮಾಧ್ಯಮ ಆಗಬಾರದು. ನಮ್ಮೆದುರೆ ಬೆಳೆದ ಜೆಎನ್‌ಯು ವಿಶ್ವವಿದ್ಯಾಲಯ ಯಾವ ಪರಿಸ್ಥಿತಿಗೆ ಸಿಲುಕಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾವೇ ಕಟ್ಟಿದ ಹಂಪಿ ವಿಶ್ವವಿದ್ಯಾಲಯದಿಂದಲೂ ನಮ್ಮ ಆಶಯ ಈಡೇರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ, ಕೃತಿಕಾರ ಪುರುಷೋತ್ತಮ ಬಿಳಿಮಲೆ, ದೆಹಲಿ ಮಿತ್ರ ಸಂಸ್ಥೆಯ ವಸಂತ ಶೆಟ್ಟಿ ಚಿರಂತ್ ಪ್ರಕಾಶನದ ಎಚ್.ಪರಮೇಶ್ವರ್ ಇದ್ದರು.