ಕನ್ನಡಪ್ರಭ ವಾರ್ತೆ ಉಡುಪಿಶೈವ ಮತ್ತು ಮಾಧ್ವ ಸೈದ್ಧಾಂತಿಕ ಭಿನ್ನತೆಗಳನ್ನು ಮೀರಿ, ಸಮಾನ ಆಶಯಗಳನ್ನು ಕೊಂಡಿಯಾಗಿಟ್ಟುಕೊಂಡು ದೇಶದ ಎರಡು ಪ್ರಾಚೀನ ಸಂಸ್ಥಾನಗಳು ದಶಕಗಳಿಂದ ಬೆಳೆಸಿ ಉಳಿಸಿಕೊಂಡು ಬಂದಿರುವ ಸಂಬಂಧವನ್ನು ವಿವರಿಸುವ ಅಮೂಲ್ಯ ಕೃತಿ ‘ಶ್ರೀ ರಾಮ ಕಾರ್ಯಂ’ ಗುರುವಾರ ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಂಡಿತು.
ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಕಂಚಿ ಕಾಮಕೋಟಿ ಪೀಠ ಮತ್ತು ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನ ಶ್ರೀ ಪೇಜಾವರ ಮಠಗಳ ನಡುವೆ ದೃಢವಾಗಿರುವ ಆತ್ಮೀಯ ಬಾಂಧವ್ಯ ಮತ್ತು ಅಯೋಧ್ಯೆ ಶ್ರೀ ರಾಮಮಂದಿರ ಆಂದೋಲನದಲ್ಲಿ ಎರಡೂ ಸಂಸ್ಥಾನಗಳ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಜಯೇಂದ್ರ ಸರಸ್ವತೀ ಮಹಾಸ್ವಾಮೀಜಿ ಮತ್ತು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ವಹಿಸಿದ ನೇತೃತ್ವ ಮತ್ತು ಪಾತ್ರಗಳನ್ನು ವಿವರಿಸುವ ಆಂಗ್ಲಭಾಷೆಯಲ್ಲಿರುವ ಈ ಸಚಿತ್ರ ಕೃತಿಯನ್ನು ಗುರುವಾರ ಶ್ರೀ ಕಂಚಿ ಪೀಠದ ಈಗಿನ ಯತಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರ 58ನೇ ಜನ್ಮವರ್ಧಂತಿ ಮಹೋತ್ಸವದ ಸದವಸರದಲ್ಲಿ ಅಯೋಧ್ಯೆ ಕಂಚಿ ಮಠದ ಶಾಖೆಯಲ್ಲಿ ನಡೆದ ಸಮಾರಂಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥಶ್ರೀಪಾದರು ಬಿಡುಗಡೆಗೊಳಿಸಿದರು.ಅಯೋಧ್ಯೆ ಕಂಚಿ ಮಠದ ವ್ಯವಸ್ಥಾಪಕ ವಿದ್ವಾನ್ ರಾಮಚಂದ್ರ ಭಟ್ಟರು ಈ ಕೃತಿಯನ್ನು ರಚಿಸಿದ್ದಾರೆ.ಆನ್‌ಲೈನ್‌ನಲ್ಲಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರೂ ಭಾಗವಹಿಸಿ ಉಭಯ ಮಠಗಳ ಬಾಂಧವ್ಯವನ್ನು ಮತ್ತು ಪೇಜಾವರ ಶ್ರೀಗಳು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮತ್ತು 48 ದಿನಗಳ ಕಾಲ ಮಂಡಲೋತ್ಸವವನ್ನು ನಡೆಸುತ್ತಿರುವ ಬಗ್ಗೆ ಅತೀವ ಸಂತಸವನ್ನು ವ್ಯಕ್ತಪಡಿಸಿದರು.ಪೇಜಾವರ ಶ್ರೀಗಳೂ ತಮಿಳು ಭಾಷೆಯಲ್ಲಿ ಸಂದೇಶವನ್ನು ನೀಡಿ, ಕಂಚಿ ಶ್ರೀಗಳಿಗೆ ಜನ್ಮದಿನದ ಶುಭಾಶಯವನ್ನು ಕೋರಿದರು. ದಶಕಗಳಿಂದ ಬೆಳೆದಿರುವ ಉಭಯ ಮಠಗಳ ನಂಟು ಮುಂದೆಯೂ ದೃಢವಾಗಿರುವಂತೆ ಆಶಿಸಿ, ಕೃತಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು.ಮಠದ ಗುರುಕುಲದ ವಿದ್ಯಾರ್ಥಿಗಳು ಪೇಜಾವರ ಶ್ರೀಗಳಿಗೆ ಗೌರವ ಸೂಚಿಸಿ ಸಾಮೂಹಿಕ ವೇದಘೋಷಗೈದರು. ಉಭಯ ಮಠಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.