ಕನ್ನಡಪ್ರಭ ವಾರ್ತೆ ಮೈಸೂರು
ನಮ್ಮ ಸಮಾಜಕ್ಕೆ ಉದುಗಿ ಹೋಗಿರುವ ಇತಿಹಾಸದ ತಿಳಿವಳಿಕೆಗೆ ಮೂಡಿಸುವುದು ಮುಖ್ಯ ಎಂದು ಸಂಸ್ಕೃತಿ ಚಿಂತಕ ಪ್ರೊ. ರಹಮತ್ ತರೀಕೆರೆ ತಿಳಿಸಿದರು.ನಗರದ ಮಾನಸ ಗಂಗೋತ್ರಿಯ ಇಎಂಆರ್ ಸಿ ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಡಿ. ರವಿಕುಮಾರ್ ಇಂದ್ವಾಡಿ ಅವರ ದೇವರಾಯ ಇಂಗಳೆ, ಸೋಸಲೆ ಸಿದ್ದಪ್ಪ, ಡಿ. ಗೋವಿಂದದಾಸ್: ಬದುಕು- ಬರಹ'' ಹಾಗೂ ಕಾರುಣ್ಯ ಬಿತ್ತನೆಕೃತಿಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಇತಿಹಾಸ ಎಂದರೆ ನಮ್ಮ ಸಮಾಜ ಯಾವೆಲ್ಲ ಬಿಕ್ಕಟ್ಟು ಕಂಡಕೊಂಡಿತು. ಅದನ್ನು ಬಗೆಹರಿಸಿತು, ಪರಿವರ್ತನೆಗೆ ಮಾಡಿದ ಹೋರಾಟವೇ ಇತಿಹಾಸ. ಈ ಇತಿಹಾಸ ನಮ್ಮನ್ನಾಳಿದ ದೊರೆಗಳಿಗಿಂತ ದೊಡ್ಡದು. ನಾವು ರಾಜರ ಯುದ್ದ ಕಥನವನ್ನು ಇತಿಹಾಸವೆಂದು ಬರೆದುಕೊಂಡಿದ್ದೇವೆ. ಹೀಗಾಗಿ, ಅದೊಂದು ರೀತಿ ಊಳಿಗಮಾನ್ಯ ಪ್ರವೃತ್ತಿ ನಮ್ಮಲ್ಲಿ ಬೆಳೆಸುತ್ತಿದೆ ಎಂದು ಅವರು ಹೇಳಿದರು.ಯಾರಾಳಿದರು, ಯುದ್ಧ ಮಾಡಿದರು, ಸೋತರು ಎಂಬ ಇತಿಹಾಸದ ಹುತ್ತಕ್ಕೆ ಕೈ ಹಾಕಿ ಭಾರತದ ಮೇಲೆ ವಿಷ ಚೆಲ್ಲಾಲಾಗುತ್ತಿದೆ. ಇದಕ್ಕೆ ಕಳೆದ 30- 35 ವರ್ಷ ಘಟನೆಗಳು ಸಾಕ್ಷಿಯಾಗಿವೆ. ಇತಿಹಾಸ ಓದಿ ಪಾಠ ಕೇಳಬೇಕು. ಆದರೆ, ಅದರ ವಿಷವನ್ನು ತೆಗೆದಕೊಂಡ ಸಮಾಜದ ಮೇಲೆ ಸುರಿಯಬಾರದು. ಇದಲ್ಲ ನಮ್ಮ ಇತಿಹಾಸವಲ್ಲ. ನಿಜವಾದ ಚರಿತ್ರೆ ಬೇರೆ ಎಂದು ಈ ಕೃತಿಯು ಒತ್ತಿ ಹೇಳಲಿದೆ ಎಂದರು.
ಒಂದು ಸಮುದಾಯ ಶೈಕ್ಷಣಿಕವಾಗಿ ಮುಂದೆ ತರಲು ಬಹಳಷ್ಟು ಶ್ರಮಿಸಿದ್ದಾರೆ. ಇಂತಹ ಸಾಮಾಜಿಕ ನಾಯಕರ ಕುರಿತ ಚರಿತ್ರೆ ಬರೆಯಬೇಕು. ಕರ್ನಾಟಕದ ಸಮುದಾಯಗಳು ವೈಚಾರಿಕತೆಯನ್ನು ಆಯುಧವನ್ನಾಗಿ ಮಾಡಿಕೊಂಡು, ಅದರ ಮೂಲಕ ಸಮಾಜ ವಿಮರ್ಶೆ ಮಾಡುವ ಹಾದಿ ತುಳಿಯಬೇಕಿತ್ತು. ಆದರೆ, ಧಾರ್ಮಿಕ ಪಥವನ್ನು ಯಾಕೆ ಹಿಡಿದರು ಎನ್ನುವುದು ಅರಿಯಬೇಕು ಎಂದು ಅವರು ಹೇಳಿದರು.ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಕೃತಿ ಕುರಿತು ಮಾತನಾಡಿ, ನವವೋದಯ ಸಾಹಿತ್ಯ ಚರಿತ್ರೆ ದೇವರಾಯ ಇಂಗಳೆ, ಸಿದ್ದಪ್ಪ, ಗೋವಿಂದದಾಸ್ ಅವರನ್ನು ಗೈರು ಹಾಜರು ಮಾಡಿದೆ. ಕುವೆಂಪು ಅವರಿಗೆ ಸಮಕಾಲೀನವಾಗಿ ದೇವರಾಯ ಇಂಗಳೇ ನಾಟಕ ಬರೆದಿದ್ದರು. ನಾವು ಕುವೆಂಪು ಓದಿದ್ದೇವು. ಆದರೆ, ದೇವರಾಯ ಅವರನ್ನು ಓದಿಲಿಲ್ಲ ಅಂದರೆ, ನಾವು ಇಲ್ಲಿಯವರೆಗೆ ಓದಿರುವುದು ಸುಳ್ಳು ಚರಿತ್ರೆ. ಅಲ್ಲದೆ, ಸುಳ್ಳ ಚರಿತ್ರೆಯನ್ನು ಬೋಧಿಸುತ್ತಿದ್ದೇವೆ. ಚರಿತ್ರೆಯನ್ನು ಮರಕಟ್ಟುವ ಚರಿತ್ರೆ ಓದುತ್ತಿದ್ದೇವೆ. ಇದು ಸಾಹಿತ್ಯದೊಳಗೆ ಇರುವ ಅಸ್ಪೃಶ್ಯತೆ ತೋರಿಸಲಿದೆ ಎಂದು ಹೇಳಿದರು.
ಕಾರುಣ್ಯ ಬಿತ್ತನೆ ಕೃತಿ ಕುರಿತು ಸಿದ್ಧಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ತ್ರಿವೇಣಿ ಮಾತನಾಡಿದರು. ಮೈಸೂರು ವಿವಿ ಕಲಾ ನಿಕಾಯ ಡೀನ್ ಪ್ರೊ.ಎಂ.ಎಸ್. ಶೇಖರ್, ಕವಿ ಪ್ರೊ. ಮಹದೇವ ಶಂಕನಪುರ, ದಲಿತ ಸಾಹಿತ್ಯ ಪರಿಷತ್ ವಿಭಾಗೀಯ ಸಂಯೋಜಕ ಡಾ. ಚಂದ್ರಗುಪ್ತ, ಲೇಖಕ ಡಾ.ಡಿ. ರವಿಕುಮಾರ್ ಇಂದ್ವಾಡಿ, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ಸಹಾಯಕ ಡಾ.ಬಿ. ಮೂರ್ತಿ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್ ಇದ್ದರು.-----
ಕೋಟ್...ಜನಪದರು ಮತ್ತು ದ್ರಾವಿಡರಿಂದ ನಮ್ಮ ಚರಿತ್ರೆ ಆರಂಭವಾಗಲಿದೆ. ಆದರೆ, ಕೇವಲ ಶಾಸನಗಳಿಂದ ಚರಿತ್ರೆಯನ್ನು ಕಟ್ಟಲಾಗಿದೆ. ಕನ್ನಡ ಸಾಹಿತ್ಯ ಕಟ್ಟಿದ ಯಾರು ಕೂಡ ಜನಪದರಿಂದ ಚರಿತ್ರೆ ಕಟ್ಟಿಲ್ಲ. ಹೀಗಾಗಿ, ನಮ್ಮದ್ದಲ್ಲ ಸಾಹಿತ್ಯ ಚರಿತ್ರೆಯ ಬಗ್ಗೆ ಮಾತನಾಡುತ್ತಿದ್ದೇವೆ. ಆರ್ಯ ಚರಿತ್ರೆಯನ್ನು ಓದಿಕೊಂಡು, ಮೆರೆಸಿಕೊಂಡು ಮಾತನಾಡುತ್ತಿದ್ದೇವೆ.
- ಪ್ರೊ.ಎನ್.ಕೆ. ಲೋಲಾಕ್ಷಿ, ನಿರ್ದೇಶಕಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿವಿ----
ಸಂಶೋಧನೆ ತುಂಬಾ ಗಟಾರಕ್ಕೆಳಿದಿದೆ. ಇದನ್ನು ಕಾಣದ ಕೈ ಏನು ಮಾಡುತ್ತಿಲ್ಲ. ವಿಷಯ ಆಯ್ಕೆ, ಮಾರ್ಗದರ್ಶಕರು ಬಹುಪಾಲು ಕಾರಣರಾಗಿದ್ದಾರೆ. ಅದಕ್ಕೆ ನಾನು ವಿಷಾದಿಸುತ್ತೇನೆ. ಯಾವುದೇ ಸಂಶೋಧನೆ ಕೃತಿಯನ್ನು ತಿರಸ್ಕರಿಸಿದ ದಾಖಲೆಗಳಿಲ್ಲ. ತಿದ್ದುಪಡಿ ಮಾಡುವಂತೆ ಹೇಳದಿರುವಷ್ಟೂ ಪ್ರಾಧ್ಯಾಪಕರು ಒಳ್ಳೆಯವರಾಗಿದ್ದೇವೆ. ಜಾತಿ ಪ್ರೇಮ, ಪ್ರಾದೇಶಿಕ ಪ್ರೇಮ ಅಧಿಕವಾಗಿ ಅಪಾಯಕಾರಿಯಾಗಿದೆ. ಸೋಸಲೆ ಸಿದ್ದಪ್ಪ ಅವರ ಇಂಗ್ಲೆಂಡ್ ಚರಿತೆ, ದೇವರಾಯ ಇಂಗಳೆ ಅವರ ಕೈ ಬರಹ ಕಳೆದುಹೋದದ್ದು ಬಹಳ ನಷ್ಟ.- ಪ್ರೊ.ಎಂ.ಎಸ್. ಶೇಖರ್, ಡೀನ್, ಕಲಾ ನಿಕಾಯ, ಮೈಸೂರು ವಿವಿ