ಕನ್ನಡಪ್ರಭ ವಾರ್ತೆ ಉಡುಪಿ
ಕಳೆದ ಐದು ದಶಕಗಳಲ್ಲಿ ಉಡುಪಿ ಮಣಿಪಾಲದಲ್ಲಿ ಆದಷ್ಟು ಬದಲಾವಣೆ ಬೇರೆ ಯಾವ ಜಿಲ್ಲೆಯಲ್ಲೂ ಆಗಿಲ್ಲ. ಉಡುಪಿ ಮಣಿಪಾಲದ ನಡುವೆ ಈಗ ಅಂತರವೇ ಇಲ್ಲದಾಗಿದೆ. ಈ ಬದಲಾವಣೆಯಲ್ಲಿ ಡಾ. ಟಿ.ಎಂ.ಎ. ಪೈ ಅವರ ಕೊಡುಗೆಯೂ ಇದೆ ಎಂದು ಮಾಹೆ ವಿ.ವಿ. ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಸಹಕಾರದಲ್ಲಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದಯವಾಣಿಯ ಹಿರಿಯ ಛಾಯಚಿತ್ರಗಾಹಕ ಆಸ್ಟ್ರೋ ಮೋಹನ್ ಅವರ ‘ಉಡುಪಿ - ಮಣಿಪಾಲ ಅಂದು ಇಂದು’ ಮಿನಿ ಕಾಫಿಟೇಬಲ್ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಉಡುಪಿ ಮಣಿಪಾಲ ಸಾಕಷ್ಟು ಬದಲಾವಣೆ ಕಂಡಿದೆ. ಜಾಗತಿಕ ಮಟ್ಟದಲ್ಲೂ ಖ್ಯಾತಿ ಪಡೆದಿದೆ. ವನ್ಯಜೀವಗಳು ಸೇರಿದಂತೆ ಗುಡ್ಡ ಪ್ರದೇಶವಾಗಿದ್ದ ಮಣಿಪಾಲದಲ್ಲಿ 1953ರಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಮೂಲಕ ಡಾ ಟಿ.ಎಂ.ಎ. ಪೈ ಅವರು ಬೆಳವಣಿಗೆಯ ಬದಲಾವಣೆಗೆ ಚಾಲನೆ ನೀಡಿದ್ದರು. ಅನಂತರ ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಾ ಬಂದಿದೆ ಎಂದರು.
ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಮಣಿಪಾಲದ ಮಣ್ಣಪಳ್ಳದಲ್ಲಿ ಕಂಬಳ ಆಯೋಜಿಸಲು ಚಿಂತನೆ ನಡೆಸಿದ್ದೇವೆ. ಯುವ ಜನತೆ ಅಭಿವೃದ್ಧಿಗೆ ಕೊಡುಗೆ ನೀಡಲು ಈ ಪುಸ್ತಕ ಸಹಕಾರಿಯಾಗಲಿದೆ. ವಿಶ್ವದಲ್ಲೇ ವಿಶಿಷ್ಟ ಸ್ಥಾನ ಪಡೆದ ಉಡುಪಿ, ಮಣಿಪಾಲ ಮುಂದಿನ 20, 25 ವರ್ಷಗಳಲ್ಲಾಗುವ ಅಭಿವೃದ್ಧಿಯಲ್ಲಿ ಯುವಜನರು ಕೈ ಜೋಡಿಸಬೇಕು. ಕೃಷ್ಣ ಕಾರಿಡಾರ್ ಸಹಿತ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಇದಕ್ಕೆ ಮಣಿಪಾಲ ವಿವಿ ನೆರವು ಅಗತ್ಯವಾಗಿದೆ ಎಂದರು.ಅದಾನಿ ಸಮೂಹದ ಕಾರ್ಯನಿರ್ವಾಹಕ ಅಧ್ಯಕ್ಷ ಕಿಶೋರ್ ಆಳ್ವ, ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು, ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿದರು. ಪ್ರಾಧ್ಯಾಪಿಕೆ ಡಾ. ನಿಕೇತನಾ ಕೃತಿ ಪರಿಚಯ ಮಾಡಿದರು. ಭೂತರಾಜ ಪಬ್ಲಿಕೇಶನ್ ಸಂಸ್ಥೆಯ ಪ್ರವೀಣಾ ಮೋಹನ್ ಉಪಸ್ಥಿತರಿದ್ದರು. ಆಸ್ಟ್ರೋ ಮೋಹನ್ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು.