ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ಎಲ್ಎಲ್ ಮತ್ತು ಎಚ್ಎಲ್ ಕಾಲುವೆಗಳಿಗೆ ನ. 20ರ ತನಕ ಮಾತ್ರ ನೀರು ಹರಿಸಲು ನಿರ್ಧರಿಸಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ರೈತರು ಬೆಳೆದಿರುವ ಬೆಳೆಗಳಿಗೆ ಸಮರ್ಪಕ ನೀರು ದೊರೆಯದೆ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಆಕ್ಷೇಪ ವ್ಯಕ್ತಪಡಿಸಿದರು.
ತುಂಗಭದ್ರಾ ಜಲಾಶಯದಲ್ಲಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರವಾಗಿ ಸಮಾಲೋಚನೆ ನಡೆಸಬೇಕಿತ್ತು. ಆದರೆ ಜಲಾಶಯದ ನೀರಿನ ಲಭ್ಯತೆ, ಬೆಳೆಗಳ ಸ್ಥಿತಿಗತಿ ಹಾಗೂ ರೈತರ ಅಗತ್ಯ ಪರಿಗಣಿಸದೆ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಅದರಲ್ಲೂ ಎಲ್ಎಲ್ ಕಾಲುವೆಗೆ ಜಂಟಿಯಾಗಿ ನೀರು ಹರಿಸದ ಕಾರಣ ಕಾಲುವೆ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ನೀರು ತಲುಪುವುದು ಸುಮಾರು 13 ದಿನ ತಡವಾಗಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆ: ಎಲ್ಎಲ್ ಮತ್ತು ಎಚ್ಎಲ್ ಕಾಲುವೆ ವ್ಯಾಪ್ತಿಯ ರೈತರ ಸಮಸ್ಯೆ ಸಮಗ್ರವಾಗಿ ತಿಳಿದುಕೊಳ್ಳಲು ರೈತ ಸಂಘದಿಂದ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ನ. 1ರಿಂದ ನ.4ರವರೆಗೆ ತುಂಗಭದ್ರಾ ಬಲದಂಡೆ ಕಾಲುವೆ ವ್ಯಾಪ್ತಿಯ ಪ್ರಮುಖ ಗ್ರಾಮಗಳಿಗೆ ರೈತ ಮುಖಂಡರು ಭೇಟಿ ನೀಡಿ ರೈತರೊಂದಿಗೆ ಚರ್ಚಿಸಲಿದ್ದಾರೆ. ಬೆಳೆಗಳ ಪ್ರಸ್ತುತ ಸ್ಥಿತಿ, ನೀರಿನ ಅವಶ್ಯಕತೆ, ನೀರು ಪೂರೈಕೆಯಲ್ಲಿನ ವಿಳಂಬ ಹಾಗೂ ಮುಂದಿನ ದಿನಗಳಲ್ಲಿ ಬೆಳೆಗಳಿಗೆ ಅಗತ್ಯವಿರುವ ನೀರಿನ ಪ್ರಮಾಣದ ಕುರಿತು ಮಾಹಿತಿ ಸಂಗ್ರಹಿಸಲಾಗುವುದು ಎಂದರು.ಸಮೀಕ್ಷೆಯ ಸಂದರ್ಭದಲ್ಲಿ ರೈತರು ತಮ್ಮ ಸಮಸ್ಯೆ ಮುಕ್ತವಾಗಿ ಹಂಚಿಕೊಳ್ಳಬೇಕು. ಯಾವ ಬೆಳೆ ಬೆಳೆಯಲಾಗಿದೆ, ಅವುಗಳಿಗೆ ಇನ್ನೆಷ್ಟು ದಿನ ನೀರು ಬೇಕು, ನೀರು ಸ್ಥಗಿತಗೊಳಿಸಿದರೆ ಯಾವ ರೀತಿಯ ನಷ್ಟ ಉಂಟಾಗಲಿದೆ ಎಂಬುದರ ಕುರಿತು ವಾಸ್ತವಿಕ ಮಾಹಿತಿ ನೀಡಬೇಕು. ರೈತರ ಅಭಿಪ್ರಾಯ ಆಧರಿಸಿ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ರೈತರ ಸಲಹೆ, ಸೂಚನೆ ಅಗತ್ಯ: ರೈತ ಸಂಘದ ಪದಾಧಿಕಾರಿಗಳಾದ ವಿ.ವೀರೇಶ ಮತ್ತು ಕೊಟ್ಟೂರು ರಮೇಶ ಮಾತನಾಡಿ, ಕಾಲುವೆ ವ್ಯಾಪ್ತಿಯ ರೈತರು ಅಲ್ಪ ಪ್ರಮಾಣದ ನೀರು ಬಳಸಿ ಬೆಳೆಯಬಹುದಾದ ಬೆಳೆ ಬೆಳೆದಿದ್ದಾರೆ. ಆದರೂ ಬೆಳೆಗಳ ಸಂಪೂರ್ಣ ಬೆಳವಣಿಗೆಗೆ ಅಗತ್ಯವಿರುವಷ್ಟು ನೀರು ದೊರೆಯದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆಗಳ ಸ್ಥಿತಿಗತಿ ಹಾಗೂ ನೀರಿನ ಬೇಡಿಕೆಯ ಕುರಿತು ಮಾಹಿತಿ ಸಂಗ್ರಹಿಸಲಾಗುವುದು. ಈ ಮಾಹಿತಿಯನ್ನು ಕ್ರೋಡೀಕರಿಸಿ ಸರ್ಕಾರದ ಮುಂದೆ ಮಂಡಿಸಲಾಗುವುದು ಎಂದರು.
ಸಭೆಯಲ್ಲಿ ರೈತರಾದ ಟಿ.ಗಂಗಣ್ಣ, ಚೌಡ್ಕಿ ನಾಗರಾಜ, ಟಿ.ಯಲ್ಲಪ್ಪ, ಸೋಮಪ್ಪ ಸೇರಿದಂತೆ ರೈತ ಮುಖಂಡರು ಹಾಗೂ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.