ಕೊಪ್ಪಳ: ಜಮೀನು ಹಕ್ಕಿಗಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು ಎನ್ನುವ ಕಾರಣಕ್ಕಾಗಿ ಬಹಿಷ್ಕಾರಕ್ಕೆ ತುತ್ತಾಗಿದ್ದ ಡೊಕ್ಕಣ್ಣವರ ಎನ್ನುವ 45 ಕುಟುಂಬಗಳಿಗೆ ಬಹಿಷ್ಕಾರದಿಂದ ಮುಕ್ತಿ ನೀಡಲಾಗಿದೆ.
ಕುಲಪಂಚಾಯಿತಿಯಲ್ಲಿ ನಡೆದ ರಾಜಿ ಪಂಚಾಯಿತಿಯಲ್ಲಿ ಈ ಕುರಿತು ತೀರ್ಮಾನ ಮಾಡಿ, ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಹಾಗೂ ಮುಚ್ಚಳಿಕೆ ಪತ್ರ ಬರೆಯುವ ಮೂಲಕ ಒಂದೂವರೆ ವರ್ಷಗಳಿಂದ ಇದ್ದ ವಿವಾದ ಇತ್ಯರ್ಥ ಮಾಡಲಾಗಿದೆ ಮತ್ತು ಬಹಿಷ್ಕಾರಕ್ಕೆ ಇತಿಶ್ರೀ ಹಾಡಲಾಗಿದೆ.ಕುಷ್ಟಗಿ ತಾಲೂಕಿನ ತಾವರಗೇರಾ ಹೊರವಲಯದಲ್ಲಿ ನಡೆದ ರಾಜೀ ಪಂಚಾಯಿತಿಯಲ್ಲಿ ರಾಜಶೇಖರ ಡೊಕ್ಕಣ್ಣವರ, ಗೋಪಾಲಪ್ಪ ಒಂಟೆತ್ತಿನವರ, ಹುಸೇನಪ್ಪ ಗದ್ದಿ, ಈರಪ್ಪ ಕೋಮಾರಿ ಹಾಗೂ ಸಣ್ಣ ಶಿವಪ್ಪ ಸೇರಿದಂತೆ ಸಮಾಜದ ನೂರಾರು ಕಾಡಸಿದ್ಧರ ಸಮ್ಮುಖದಲ್ಲಿಯೇ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
45 ಡೊಕ್ಕಣ್ಣವರ ಕುಟುಂಬಕ್ಕೆ ಸೇರಿದ್ದ ಭೂಮಿಯಲ್ಲಿ ನಮ್ಮದು ಪಾಲು ಇದೆ ಎಂದು ಇತರ ಕುಟುಂಬದವರು ಜಗಳ ಮಾಡಿದ್ದರು. ಈ ಕುರಿತು ಡೊಕ್ಕಣ್ಣವರ ಕುಟುಂಬ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಇದನ್ನು ವಿರೋಧಿಸಿ, ಕುಲಪಂಚಾಯಿತಿಯಲ್ಲಿಯೇ ಈ 45 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿತ್ತು. ಈ ವಿವಾದ ಭಾನುವಾರ ನಡೆದ ಕುಲಪಂಚಾಯಿತಿಯಲ್ಲಿ ಇತ್ಯರ್ಥವಾಗಿದ್ದು, ಬಹಿಷ್ಕಾರಕ್ಕೆ ತುತ್ತಾದ ಕುಟುಂಬಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿವೆ.ಪರಸ್ಪರ ಜಗಳವಾಡುವಂತಿಲ್ಲ ಮತ್ತು ಡೊಕ್ಕಣ್ಣವರ ಕುಟುಂಬಕ್ಕೆ ಸೇರಿದ್ದ ಭೂಮಿ ಅವರಿಗೆ ಇರಲಿ ಎಂದು ತೀರ್ಮಾನಿಸಲಾಯಿತು. ನ್ಯಾಯಾಲಯದಲ್ಲಿ ಹೂಡಿರುವ ದಾವೆ ವಾಪಸ್ ಪಡೆಯಲು ಡೊಕ್ಕಣ್ಣವರ ಕುಟುಂಬವು ಸಮ್ಮತಿ ನೀಡಿತು. ಇನ್ಮುಂದೆ ಎಲ್ಲರೂ ಅನ್ಯೋನ್ಯವಾಗಿ ಇರಲು ತೀರ್ಮಾನಿಸಲಾಯಿತು.
ಕನ್ನಡಪ್ರಭ ವರದಿ ಪರಿಣಾಮ:ಈ ಕುರಿತು ಕನ್ನಡಪ್ರಭ ಮೊಟ್ಟಮೊದಲು ವಿಶೇಷ ವರದಿ ಪ್ರಕಟಿಸಿ, ಬಹಿಷ್ಕಾರಕ್ಕೆ ತುತ್ತಾದ ಕುರಿತು ಗಮನ ಸೆಳೆದಿತ್ತು. ಇದಾದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಕೂಡಲೇ ಸಮಸ್ಯೆ ಇತ್ಯರ್ಥ ಮಾಡಿ, ಬಹಿಷ್ಕಾರ ಹಾಕಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಿ ಎಂದು ಸೂಚಿಸಿದ್ದರು. ಇದಾದ ಮೇಲೆ ಕುಷ್ಟಗಿ ತಹಸೀಲ್ದಾರ್ ಹಾಗೂ ಪಿಐ ಕಾಡಸಿದ್ದರ ಸಮಾಜದವರನ್ನು ಕರೆಯಿಸಿ, ಕಟ್ಟುನಿಟ್ಟಾಗಿ ಸೂಚಿಸಿದ್ದರು. ಬಹಿಷ್ಕಾರ ಹಾಕಿರುವುದು ಅಕ್ಷಮ್ಯ ಅಪರಾಧ, ಕೂಡಲೇ ಸರಿಮಾಡಿಕೊಳ್ಳಿ ಎಂದು ತಾಕೀತು ಮಾಡಿದ್ದರು. ಪರಿಣಾಮ ಪುನಃ ಸಭೆ ಸೇರಿದ ಕಾಡಸಿದ್ದರ ರಾಜ್ಯ ಮುಖಂಡರು ಬಹಿಷ್ಕಾರ ಹಾಕಿರುವುದು ತಪ್ಪು ಎನ್ನುವ ಅರಿವಾಗಿದ್ದು, ಇದಕ್ಕೆ ಇನ್ಮುಂದೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಕುಲಪಂಚಾಯಿತಿಯನ್ನು ಮಾಡುವುದಿಲ್ಲ; ದಂಡವನ್ನೂ ವಿಧಿಸುವುದಿಲ್ಲ. ಇನ್ಮುಂದೆ ಏನಿದ್ದರೂ ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತೇವೆ ಎಂದು ನೆರೆದಿದ್ದ ಕಾಡಸಿದ್ದರ ಸಮ್ಮುಖದಲ್ಲಿಯೇ ತೀರ್ಮಾನಿಸಲಾಗಿದೆ.ರಾಜಶೇಖರ ಡೊಕ್ಕಣ್ಣವರ, ಗೋಪಾಲಪ್ಪ ಒಂಟೆತ್ತಿನವರ, ಹುಸೇನಪ್ಪ ಗದ್ದಿ, ಈರಪ್ಪ ಕೋಮಾರಿ, ಸಣ್ಣ ಶಿವಪ್ಪ ಸೇರಿದಂತೆ ಅನೇಕರು ಇದ್ದರು.ಕನ್ನಡಪ್ರಭಕ್ಕೆ ಚಿರಋಣಿ: ಕನ್ನಡಪ್ರಭ ನಮ್ಮ ಬಾಳಿನಲ್ಲಿ ಬಂದಿದ್ದ ಕತ್ತಲೆಯನ್ನು ದೂರ ಮಾಡಿದೆ. ನಾವು ಜೀವಂತ ಇರುವವರೆಗೂ ಕನ್ನಡಪ್ರಭಕ್ಕೆ ಚಿರಋಣಿಯಾಗಿರುತ್ತೇವೆ. ಬಹಿಷ್ಕಾರಕ್ಕೆ ತುತ್ತಾಗಿದ್ದ ನಮ್ಮ ಬಳಿಯೇ ಬಂದು, ತಮ್ಮ ನೋವನ್ನು ನಾಡಿಗೆ ತಿಳಿಸಿ, ನಂತರ ಅಧಿಕಾರಿಗಳು ಸಹ ಆಗಮಿಸಿ, ಸಮಸ್ಯೆಯನ್ನು ಇತ್ಯರ್ಥ ಮಾಡುವಂತೆ ಮಾಡಿದೆ. ನಮ್ಮ ಸಮಾಜದ ಹಿರಿಯರು ಹಗೆತನ ಬಿಟ್ಟಾಕಿ, ಒಗ್ಗಟ್ಟಾಗಿ ಇರಲು ತೀರ್ಮಾನ ಮಾಡುವಂತೆ ಮಾಡಿದೆ. ಕನ್ನಡಪ್ರಭಕ್ಕೆ ಮತ್ತೊಮ್ಮೆ ಧನ್ಯವಾದ ಹೇಳುತ್ತೇವೆ ಎನ್ನುತ್ತಾರೆ ಡೊಕ್ಕಣ್ಣವರ ಕುಟುಂಬದ ಮುಖಂಡ ರಾಜಶೇಖರ ಡೊಕ್ಕಣ್ಣವರ.