ಧರ್ಮಗಳು ಮನುಷ್ಯರಲ್ಲಿ ಮಾನವೀಯತೆ ಬೆಳೆಸುತ್ತವೆ

KannadaprabhaNewsNetwork | Published : Dec 26, 2023 1:30 AM

ಸಾರಾಂಶ

ಕ್ರಿಸ್ಮಸ್ ಅಂಗವಾಗಿ ಕೊಪ್ಪಳದಲ್ಲಿ ಇರುವಾತನು ಚರ್ಚ್ ಹಾಗೂ ಗಂಗಾವತಿಯ ಮಸ್ ದರ್ ಎಜ್ಯು ಆ್ಯಂಡ್ ಚಾರಿಟಿ ಸಂಸ್ಥೆ ವತಿಯಿಂದ ಸೌಹಾರ್ದತಾ ಕಾರ್ಯಕ್ರಮ ನಡೆಯಿತು.

ಕೊಪ್ಪಳ: ಧರ್ಮಗಳು ಮನುಷ್ಯರಲ್ಲಿ ಮಾನವೀಯತೆ ಬೆಳೆಸುತ್ತದೆ ಎಂದು ಗಂಗಾವತಿಯ ಮಸ್ ದರ್ ಎಜು ಆ್ಯಂಡ್ ಚಾರಿಟಿ ಸಂಸ್ಥೆಯ ಉಪನ್ಯಾಸಕ ಝೈನ್ ಮುಈನಿ ಸಖಾಫಿ ಮಂಗಳೂರು ಹೇಳಿದರು.

ಭಾಗ್ಯನಗರ ಬಳಿಯ ನವ ನಗರದಲ್ಲಿ ಸೋಮವಾರ ಇರುವಾತನು ಚರ್ಚ್ ಹಾಗೂ ಜಿಲ್ಲಾ ಭ್ರಾತೃತ್ವ ಸಮಿತಿ ಜಂಟಿಯಾಗಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸರ್ವ ಧರ್ಮಗಳ ಸೌಹಾರ್ದತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಯೆ ಧರ್ಮದ ಮೂಲ ತತ್ವ. ಮುಹಮ್ಮದ್ ಪೈಗಂಬರ್, ಜೀಸಸ್, ಬುದ್ಧ, ಬಸವ, ರಾಮಕೃಷ್ಣ ಪರಮಹಂಸ ಅವರಂಥ ದಾರ್ಶನಿಕರು ಮನುಷ್ಯರನ್ನು ಪ್ರೀತಿಸಲು ಕಲಿಸಿಕೊಟ್ಟರು‌. ಇಂತಹ ಮಹಾನುಭಾವರ ಚಿಂತನೆಯ ಬೆಳಕಿನಲ್ಲಿ ನಾವಿಂದು ಸಾಗಬೇಕಿದೆ‌ ಎಂದರು. ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರೂ ಪರಸ್ಪರ ಹೊಂದಿಕೊಂಡು ಧರ್ಮಗಳ ಮಧ್ಯ ಸಂಯೋಜನೆಗೊಂಡು ಕೂಡಿ ಬಾಳುವಂತಾಗಲಿ. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಬೇರೆ ಅಲ್ಲ. ಎಲ್ಲರೂ ಒಟ್ಟುಗೂಡಿ ಪ್ರತಿಯೊಂದು ಹಂತಗಳಲ್ಲಿ ಪರಸ್ಪರ ಸಹಕಾರ ಮನೋಭಾವನೆ ಬೆಳೆಸಿಕೊಳ್ಳುವಂತೆ ಕ್ರಿಸ್‌ಮಸ್ ಹಬ್ಬ ಆಚರಿಸಲಾಗುತ್ತಿದೆ. ಸೌಹಾರ್ದತೆ ಅಂದರೆ ಕೆಲವರಲ್ಲಿ ಸಂಶಯ ಮೂಡುತ್ತದೆ. ಒಂದು ಧರ್ಮದವರು ಇನ್ನೊಂದು ಧರ್ಮ ಪಾಲನೆ ಮಾಡುವುದಲ್ಲ. ತಮ್ಮ ಧರ್ಮಗಳನ್ನು ಪರಿಪೂರ್ಣವಾಗಿ ಪಾಲನೆ ಮಾಡುವ ಜತೆಗೆ ಇನ್ನೊಂದು ಧರ್ಮ. ಹಬ್ಬಗಳನ್ನು ಗೌರವಿಸುತ್ತಾ ಎಲ್ಲ ಧರ್ಮದವರೂ ಒಳಗೊಳ್ಳುವಂತೆ ಭ್ರಾತೃತ್ವ ಸಮಿತಿಯಿಂದ ಹಬ್ಬವನ್ನು ಆಚರಿಸುವ ಮೂಲಕ ಜನರಿಗೆ ಸೌಹಾರ್ದತೆಯ ಸಂದೇಶ ಸಾರುತಿದೆ ಎಂದು ಹೇಳಿದರು.ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ್ ಶೀಲವಂತರ್ ಮಾತನಾಡಿ, ಯಾವುದೊಂದೆ ಧರ್ಮ ಶ್ರೇಷ್ಠವಲ್ಲ. ಎಲ್ಲ ಧರ್ಮಗಳೂ ಶ್ರೇಷ್ಠವಾಗಿವೆ. ಶಾಂತಿ, ನೆಮ್ಮದಿಯಿಂದ ಬದುಕುವುದು ಎಲ್ಲ ಧರ್ಮಗಳ ಸಾರವಾಗಿದೆ. ಸಮಾಜದಲ್ಲಿ ಸಮಾನತೆಯನ್ನು ಸಾರಿದ ಯೇಸು ಕ್ರಿಸ್ತ, ಬಸವಣ್ಣ, ಅಂಬೇಡ್ಕರ್ ಅವರನ್ನು ಅರಿಯದ ಅವಿವೇಕಿಗಳಿಂದ ಇವತ್ತು ದೇಶ, ಪ್ರಪಂಚದಾದ್ಯಂತ ಯುದ್ಧಗಳು ನಡೆಯುತ್ತಿರುವುದು ವಿಷಾದನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನವ ನಗರದ ಇರುವಾತನು ಚರ್ಚಿನ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿದರು.

ಏಸುಕ್ರಿಸ್ತನ ಅನುಯಾಯಿಗಳಾದ ರೇಷ್ಮಾ ಸಿ. ಅಪ್ಪಣ್ಣವರ್ ಮತ್ತು ಅನು ಕಿನ್ನಾಳ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಗಂಗಾವತಿಯ ಮಸ್ ದರ್ ಎಜು ಆ್ಯಂಡ್ ಚಾರಿಟಿ ಸಂಸ್ಥೆಯ ಅಧ್ಯಾಪಕ ಹಾಫಿಝ್ ಮುಹ್ಸಿನ್ ಹಾಶಿಮಿ, ಇರುವಾತನು ಚರ್ಚಿನ ಸದಸ್ಯ ಬೀರಪ್ಪ ಕಿನ್ನಾಳ, ಮಂಜುನಾಥ್ ಚಿತ್ರಗಾರ, ರೂಪಾ, ಮೇಘಾ. ಪ್ರವೀಣ್. ಪ್ರಕಾಶ್. ಕವಿತಾ, ವಿಜಯಲಕ್ಷ್ಮಿ, ಕವನಾ, ನಿರೀಕ್ಷಾ, ವಿಶ್ವಾಸ್ಮಿತ್ ಮುಂತಾದವರು ಭಾಗವಹಿಸಿದ್ದರು.

ಗೀತಾ ಆರ್. ಮದಕಟ್ಟಿ ಸ್ವಾಗತಿಸಿದರು. ರಾಘು ಮದಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ತುಕಾರಾಮ್ ಬಿ. ಪಾತ್ರೋಟಿ ವಂದಿಸಿದರು.

Share this article