ಧಾರ್ಮಿಕ ಕಾರ್ಯಗಳಿಂದ ಸಮಾಜದಲ್ಲಿ ಐಕ್ಯತೆಗೆ ಬಲ

KannadaprabhaNewsNetwork |  
Published : Jul 08, 2026, 02:30 AM IST
ಫೊಟೊ 07 ಎಚ್,ಎನ್,ಎಮ್ 01: ಹನುಮಸಾಗರದ ಶ್ರೀ ಜಗದಂಬಾ ದೇವಿಯ 89ನೇ ವಾರ್ಷಿಕೋತ್ಸವ, ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ, ಸಾಮೂಹಿಕ ಉಪನಯನ, ಸಾಮೂಹಿಕ ವಿವಾಹ ಹಾಗೂ ಅಂಬಾಭವಾನಿ ಯಾತ್ರಿ ನಿವಾಸ ಉದ್ಘಾಟನೆಯನ್ನು ನೇರವೇರಿಸಲಾಯಿತು. ಫೊಟೊ 07 ಎಚ್,ಎನ್,ಎಮ್ 01ಬಿ: ಹನುಮಸಾಗರದ ಶ್ರೀ ಜಗದಂಬಾ ದೇವಿಯ 89ನೇ ವಾರ್ಷಿಕೋತ್ಸವ, ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ 120 ವಟುಗಳಿಗೆ ಸಾಮೂಹಿಕ ಉಪನಯನ ಮಾಡಲಾಯಿತು.  | Kannada Prabha

ಸಾರಾಂಶ

ಸಮಾಜದವರು ವಿವಿಧ ಭಾಗಗಳಲ್ಲಿ ನೆಲೆಸಿದ್ದರೂ ಎಲ್ಲರೂ ಒಂದೇ ಕುಟುಂಬ ಎಂಬ ಭಾವನೆಯಿಂದ ಒಗ್ಗಟ್ಟಾಗಿ ಬದುಕಬೇಕು

ಹನುಮಸಾಗರ: ಚಂದ್ರಸೂರ್ಯ ವಂಶದವರಾದ ಎಸ್‌ಎಸ್‌ಕೆ ಸಮಾಜದವರು ಚಂದ್ರನಂತೆ ಶಾಂತ ಸ್ವಭಾವದವರು, ಆದರೆ ಅಗತ್ಯ ಬಂದಾಗ ಸಹಸ್ರಾರ್ಜುನನಂತೆ ಮುನ್ನುಗ್ಗುವ ಧೈರ್ಯ ಮತ್ತು ಶೌರ್ಯ ಹೊಂದಿದ್ದಾರೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ಶ್ರೀಜಗದಂಬಾ ದೇವಿಯ 89ನೇ ವಾರ್ಷಿಕೋತ್ಸವ, ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ, ಸಾಮೂಹಿಕ ಉಪನಯನ, ಸಾಮೂಹಿಕ ವಿವಾಹ ಹಾಗೂ ಅಂಬಾಭವಾನಿ ಯಾತ್ರಿ ನಿವಾಸ ಉದ್ಘಾಟನೆ ನೇರವೇರಿಸಿ ಮಾತನಾಡಿದರು.

ಸಮಾಜದವರು ವಿವಿಧ ಭಾಗಗಳಲ್ಲಿ ನೆಲೆಸಿದ್ದರೂ ಎಲ್ಲರೂ ಒಂದೇ ಕುಟುಂಬ ಎಂಬ ಭಾವನೆಯಿಂದ ಒಗ್ಗಟ್ಟಾಗಿ ಬದುಕಬೇಕು. ಕ್ಷತ್ರೀಯರು ಗುರಿ ಇಟ್ಟರೆ ಅದನ್ನು ಸಾಧಿಸದೆ ಬಿಡುವುದಿಲ್ಲ, ಅಂಬಾಭವಾನಿ ದೇವಸ್ಥಾನ ದಿವ್ಯ ಶಕ್ತಿಯ ನೆಲೆಬೀಡಾಗಿದ್ದು, ಅತ್ಯಂತ ಪುರಾತನ ಇತಿಹಾಸ ಮತ್ತು ಮಹಿಮೆ ಹೊಂದಿದೆ. ಸಮಾಜದ ಹಿತದೃಷ್ಟಿಯಿಂದ ಟ್ರಸ್ಟ್ ಕೈಗೊಂಡಿರುವ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಶ್ಲಾಘನೀಯ.ಇಂತಹ ಕಾರ್ಯಗಳಿಂದ ಸಮಾಜದಲ್ಲಿ ಐಕ್ಯತೆ ಹಾಗೂ ಧಾರ್ಮಿಕ ಮೌಲ್ಯ ಇನ್ನಷ್ಟು ಬಲಗೊಳ್ಳುತ್ತವೆ ಎಂದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಸಾಮೂಹಿಕ ವಿವಾಹ ಮತ್ತು ಸಾಮೂಹಿಕ ಉಪನಯನದಂತಹ ಕಾರ್ಯಕ್ರಮಗಳಲ್ಲಿ ಗುರುಗಳು ಹಾಗೂ ಸಮಾಜದ ಹಿರಿಯರ ಆಶೀರ್ವಾದ ದೊರೆಯುವುದು ಜೀವನದ ಅಮೂಲ್ಯ ಸಂಪತ್ತು ಎಂದರು.

ಹತ್ತು ವರ್ಷದೊಳಗೆ ಇರುವ ಪ್ರತಿಯೊಬ್ಬ ಮಗುವಿಗೂ ಉಪನಯನ ಸಂಸ್ಕಾರ ನೆರವೇರಿಸಿ ಜನಿವಾರ ಧರಿಸುವಂತೆ ಮಾಡಬೇಕು.ಹಿರಿಯರು ಉಪವೀತ ಧರಿಸಿ ನಿತ್ಯ ಪೂಜೆ ಹಾಗೂ ಧಾರ್ಮಿಕ ಆಚರಣೆ ಪಾಲಿಸಬೇಕು. ಸಮಾಜದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲು ಸದಾ ಸಿದ್ಧನಿದ್ದೇನೆ. ಎಲ್ಲರ ಸಹಕಾರದಿಂದ ಸಮಾಜ ಇನ್ನಷ್ಟು ಉನ್ನತ ಸ್ಥಾನಕ್ಕೆರಲಿ ಎಂದು ಆಶಿಸಿದರು.

ಮುಖಂಡ ದೊಡ್ಡಬಸನಗೌಡ ಬಯ್ಯಾಪೂರ ಪಾಟೀಲ ಮಾತನಾಡಿ, ಎಸ್‌ಎಸ್ಕೆ ಸಮಾಜವು ಶಿಕ್ಷಣ, ಸಂಸ್ಕಾರ ಹಾಗೂ ಸಾಮಾಜಿಕ ಮೌಲ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದೆ. ಈ ಸಮಾಜದಲ್ಲಿ ವರದಕ್ಷಿಣೆ ಪದ್ಧತಿ ಇಲ್ಲದಿರುವುದು ಹೆಮ್ಮೆಯ ಸಂಗತಿ. ಇಂದಿನ ದಿನಗಳಲ್ಲಿ ವರದಕ್ಷಿಣೆ ಕಿರುಕುಳ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಸಮಾಜ ಇತರರಿಗೆ ಮಾದರಿಯಾಗಿದೆ. ಇಂತಹ ಆದರ್ಶ ಪದ್ಧತಿ ಎಲ್ಲ ಸಮಾಜಗಳು ಅಳವಡಿಸಿಕೊಳ್ಳಬೇಕು ಎಂದರು.

ಸಮಾಜದ ಅಧ್ಯಕ್ಷ ಭಗೀರಥಸಾ ಪಾಟೀಲ ಪ್ರಾಸ್ತಾವಿಕ ಮಾತನಾಡಿ, 89 ವರ್ಷಗಳ ಹಿಂದೆ ಹಿರಿಯರು ಪ್ರತಿಷ್ಠಾಪಿಸಿದ ಜಗದಂಬಾ ದೇವಸ್ಥಾನ ಇಂದು ಲಕ್ಷಾಂತರ ಭಕ್ತರ ಆರಾಧನಾ ಕೇಂದ್ರವಾಗಿ ಬೆಳೆದಿದೆ. ದಸರಾ ಮಹೋತ್ಸವ, ಹನುಮ ಜಯಂತಿ, ಪ್ರತಿ ಅಮಾವಾಸ್ಯೆಯಂದು ಅನ್ನಪ್ರಸಾದ, ಧಾರ್ಮಿಕ ಪ್ರವಚನ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮ ಎಲ್ಲರ ಸಹಕಾರದಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಸಮಾಜದ ಸಹಕಾರವೇ ನಮ್ಮ ಶಕ್ತಿಯಾಗಿದೆ ಎಂದರು.

ಸಮಾಜದ ಧರ್ಮದರ್ಶಿ ಸತೀಶ ಮೇಹರವಾಡೆ ಮಾತನಾಡಿ, ಸಮಾಜದ ಜನರು ಶಾಂತಿಪ್ರಿಯರು ಹಾಗೂ ಪರೋಪಕಾರಿ ಮನೋಭಾವದವರು. ನಮ್ಮ ಸಮಾಜದವರು ಪರಸ್ಪರ ಒಬ್ಬರನ್ನೊಬ್ಬರು ಬೆಳೆಸುವ, ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಮಾಜದ ಚಿಂತನ-ಮಂಥನ ಸಮಿತಿ ಸದಸ್ಯ ಹನುಂತಸಾ ನಿರಂಜನ್ ಮಾತನಾಡಿ, ಸಾಮೂಹಿಕ ವಿವಾಹ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮ ಸಮಾಜದಲ್ಲಿ ಇನ್ನಷ್ಟು ಹೆಚ್ಚಾಗಬೇಕು. ಇದರಿಂದ ದುಂದು ವೆಚ್ಚ ಕಡಿಮೆಯಾಗುವುದರ ಜತೆಗೆ ಭಾರತೀಯ ಸಂಸ್ಕೃತಿಯೂ ಉಳಿಯುತ್ತದೆ. ಹಿಂದೆ ಉಪನಯನದ ನಂತರ ಮಕ್ಕಳಿಗೆ ಗುರುಕುಲದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ನೀಡಲಾಗುತ್ತಿತ್ತು. ಈಗ ಗುರುಕುಲ ಪದ್ಧತಿ ಇಲ್ಲದಿದ್ದರೂ ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಧಾರ್ಮಿಕ ಮೌಲ್ಯಗಳು ಹಾಗೂ ನೈತಿಕ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ಸಮಾಜದ ರಾಜ್ಯಾಧ್ಯಕ್ಷ ಶಶಿಕುಮಾರ ಮೇಹವಾಡೆ ಮಾತನಾಡಿ, ಇಂತಹ ಬೃಹತ್ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿರುವುದು ಸಮಾಜದ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ. ಸಮಾಜದ ಒಗ್ಗಟ್ಟು ಮತ್ತು ಸೇವಾ ಮನೋಭಾವದಿಂದಲೇ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು.

ಉಡುಪಿಯ ಪುತ್ತಿಗೆ ಮಠದ ಪಂಡಿತ ಡಾ.ಬಿ. ಗೋಪಾಲಾಚಾರ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನದಲ್ಲಿ ಮಾತನಾಡಿ. ಭಾರತೀಯ ಪರಂಪರೆ ಹಾಗೂ ಸಂಸ್ಕೃತಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬ ಸಮಾಜದ ಪ್ರಮುಖ ಕರ್ತವ್ಯವಾಗಿದೆ. ಕ್ಷತ್ರೀಯ ಸಮಾಜವು ಸೂರ್ಯವಂಶ ಹಾಗೂ ಚಂದ್ರವಂಶದ ಶ್ರೇಷ್ಠ ಪರಂಪರೆ ಹೊಂದಿದ್ದು, ಪ್ರತಿನಿತ್ಯ ಹಿರಿಯರಿಗೆ ನಮಸ್ಕಾರ ಮಾಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ದೂರವಾಣಿ ಕರೆ ಸ್ವೀಕರಿಸಿದಾಗ ರಾಮ್ ರಾಮ್ ಎಂಬ ಶುಭಾಶಯ ಬಳಸುವ ಸಂಸ್ಕೃತಿ ಬೆಳೆಸಬೇಕು. ಪ್ರತಿಯೊಬ್ಬ ಮಗುವಿಗೂ ತಪ್ಪದೇ ಉಪನಯನ ಸಂಸ್ಕಾರ ನೆರವೇರಿಸಿ ಭಾರತೀಯ ಸಂಸ್ಕಾರ ಕಲಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ 120 ವಟುಗಳಿಗೆ ಸಾಮೂಹಿಕ ಉಪನಯನ ಸಂಸ್ಕಾರ ಹಾಗೂ 6 ಜೋಡಿಗಳಿಗೆ ಸಾಮೂಹಿಕ ವಿವಾಹ ನೆರವೇರಿಸಲಾಯಿತು.

ಯುವ ಘಟಕದ ರಾಜ್ಯಾಧ್ಯಕ್ಷ ವೆಂಕಟೇಶ ಕಾಟವೆ, ಉಪಾಧ್ಯಕ್ಷ ಸುರೇಂದ್ರ ರಾಯಬಾಗಿ, ಕಾರ್ಯದರ್ಶಿ ವಿಠಲಸಾ ಶಿಂಗ್ರಿ, ವಿಠಲಸಾ ನಗರಿ, ಗೋಪಿನಾಥಸಾ ಮಲಜಿ, ಮೋಹನ್ ಮಂತ್ರಿ, ಕವಿತಾಬಾಯಿ ದಾನಿ, ನಿವೃತ್ತ ಪ್ರಾಶುಪಾಲ ರಾಜೇಂದ್ರ ಪಂಥ, ಮೋಹನಸಾ ಬಸ್ವಾ, ವಿಠಲಸಾ ಪವಾರ, ಶಂಕರಸಾ ಬದಿ, ಹನುಂತಸಾ ರಾಯಬಾಗಿ, ಅಂಬಾಸಾ ರಂಗ್ರೇಜ, ಪದಾಧಿಕಾರಿ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮುಖಂಡರು, ಗಣ್ಯರು, ಭಕ್ತರು ಹಾಗೂ ಸಾವಿರಾರು ಸಮಾಜ ಬಾಂಧವರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಕೋರ್ಟಿಗೀಗ ಹೆಚ್ಚುವರಿ ಭದ್ರತೆ
ಉಡುಪಿ ಜಿಲ್ಲೆ ‘ಸಾಸ್‌ನ ಪ್ರಭಾವಿ ಜಿಲ್ಲೆ’