ಹಿಂದೂ ಸಮ್ಮಿಲನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಭಾರತ ದೇಶದ ಹಿಂದೂಗಳ ಧಾರ್ಮಿಕ ಕ್ಷೇತ್ರಗಳು ಈಗ ಒಂದೊಂದಾಗಿ ಹಿಂದೂಗಳ ಕೈ ಸೇರುತ್ತಿದೆ. ದೇಶದಲ್ಲಿರುವ ಎಲ್ಲಾ ಹಿಂದೂಗಳು ಒಗ್ಗಟ್ಟಾದರೆ ಎಂತಹ ಬದಲಾವಣೆ ಬೇಕಾದರೂ ತರಬಲ್ಲೆವು ಎಂದು ಬೆಂಗಳೂರಿನ ಯುವ ವಾಗ್ಮಿ ಬೆಂಗಳೂರಿನ ಹಾರಿಕ ಮಂಜುನಾಥ್ ಹೇಳಿದರು.
ಕೊಟ್ಟೂರು ಬಸವೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಯೋಜಿಸಿದ್ದ ಹಿಂದೂ ಸಮ್ಮಿಲನ ಜಾಗೃತ ಶಕ್ತಿಯ ಸಂಕಲನ ಕಾರ್ಯಕ್ರಮದಲ್ಲಿ ಭಾಷಣ ಮಾಡಿ, ಹಿಂದೂಗಳು ಈಗ ಜಾಗೃತರಾಗಿದ್ದಾರೆ. ಒಗ್ಗಟ್ಟು, ಸಂಘಟನೆ ಇಲ್ಲದಿದ್ದರೆ ಏನನ್ನೂ ಸಾಧಿಸಲಾಗದು. ಹಿಂದೂಗಳ ಒಗ್ಗಟ್ಟಿನ ಹೋರಾಟ ಎಂತಹ ಪರಿಣಾಮ ಬೀರಿದೆ ಎಂದರೆ ಹಿಂದೂ ಧರ್ಮ ವಿರೋಧಿಸು ತ್ತಿದ್ದವರು, ರಾಮ ಕಾಲ್ಪನಿಕ ಎಂದವರು, ರಾಮ ಮಂದಿರ ನಿರ್ಮಾಣಕ್ಕೆ ತಡೆ ಯೊಡ್ಡುತ್ತಿದ್ದವರು ಇಂದು ಹೆಗಲ ಮೇಲೆ ಕೇಸರಿ ಶಲ್ಯ ಹಾಕಿ, ಹಣೆಗೆ ಭಸ್ಮ ಬಳಿದು ರಾಮನ ಜಪ ಮಾಡುತ್ತಿದ್ದಾರೆ. ರಾಮ ಕೇವಲ ವಿಹಿಂಪ, ಬಜರಂಗದಳಕ್ಕೆ ಮಾತ್ರವಲ್ಲ. ಇಂದು ಎಲ್ಲರಿಗೂ ರಾಮ ಎಂದು ಸಾರುವ ಸ್ಥಿತಿ ನಿರ್ಮಾಣ ವಾಗಿದೆ ಎಂದರು. ಮಥುರಾದ ಶ್ರೀ ಕೃಷ್ಣನ ಜನ್ಮ ಭೂಮಿ ಇನ್ನೇನು ಕೆಲವು ದಿನಗಳಲ್ಲಿ ನಮ್ಮದಾಗಲಿದೆ. ಅಮೇರಿಕಾದಲ್ಲಿ ಸೆ.3 ರಂದು ಸನಾತನ ಧರ್ಮ ಡೇ ಎಂದು ಆಚರಿಸಲಾಗುತ್ತದೆ ಎಂದು ಘೋಷಿಸಿದೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದ ದೊಡ್ಡ, ದೊಡ್ಡ ಸೆಲೆಬ್ರೆಟಿಗಳು ಇಂದು ತಮ್ಮ ಸಿನಿಮಾ ಬಿಡುಗಡೆಗಾಗಿ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆಯುವಂತಾಗಿದೆ. ಜಾತಿ, ಮತ, ಪಂಥ, ರಾಜಕೀಯ ಎಲ್ಲವನ್ನೂ ಮರೆತು ಎಲ್ಲಾ ಹಿಂದೂಗಳು ಒಗ್ಗಟ್ಟಾಗಬೇಕು. ಮನೆಗೆ ಬೆಂಕಿ ಬಿದ್ದ ನಂತರ ಬಾವಿ ತೋಡುವ ಬದಲು ಮುನ್ನೆಚ್ಚರಿಕೆ ವಹಿಸಿ ಒಗ್ಗೂಡೋಣ. ನಮಗೆ ಕ್ರಿಶ್ಚಿಯನ್, ಮುಸ್ಲೀಂ ಸಮುದಾಯದ ಭಯವಿಲ್ಲ. ಆದರೆ, ಹಿಂದೂ ಧರ್ಮದಲ್ಲಿ ಹುಟ್ಟಿ, ಅಲ್ಲೆ ಬೆಳೆದು, ಹಿಂದೂ ಧರ್ಮದ ವಿರುದ್ಧ ಮಾತನಾಡುವರ ಬಗ್ಗೆ ಭಯವಾಗಿದೆ. ಹಿಂದೂ ಮಲಗಿದ್ದರೆ ಮಾತ್ರ ಕುಂಭಕರ್ಣ, ಎದ್ದರೆ ವೀರರು ಎಂದರು.ವಿಹಿಂಪ ಶೃಂಗೇರಿ ಜಿಲ್ಲಾ ಅಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ಮಾತನಾಡಿ, 1964 ರಲ್ಲಿ ಸ್ಥಾಪಿತ ವಾಗಿರುವ ವಿಎಚ್‌ಪಿ ಸಂಘಟನೆ ಸುರಕ್ಷೆ, ಸೇವೆಯ ಧ್ಯೇಯದೊಂದಿಗೆ ಧರ್ಮ ರಕ್ಷಣೆಗೆ ದುಡಿಯುತ್ತಿದೆ. 5 ದಶಕಗಳ ಕಾಲ ಧಾರ್ಮಿಕ, ಸಾಮಾಜಿಕ, ಕಾನೂನಿನ ಹೋರಾಟಗಳು ನಡೆದಿವೆ. ಅಯೋಧ್ಯೆ ಶ್ರೀ ರಾಮನ ಮಂದಿರ ನಿರ್ಮಾಣ ಮಾಡಲು ನ್ಯಾಯಾಲಯವೇ ಅನುಮತಿಸಿದೆ. 2024 ರ ಆಗಸ್ಟ್ 22 ರಂದು ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ ಎಂದರು.
ತಾಲೂಕು ವಿಎಚ್ ಪಿ ಅಧ್ಯಕ್ಷ ಕೆ.ಎನ್.ಸತ್ಯನಾರಾಯಣ ಮಾತನಾಡಿ, ವಾಗ್ಮಿ ಹಾರಿಕ ಮಂಜುನಾಥ್ ನಮ್ಮ ಮುಂದಿನ ಪೀಳಿಗೆಯ ಆಶಾಕಿರಣ. ಅವರ ಧರ್ಮ ಜಾಗೃತಿ ಕಾರ್ಯ ಎಲ್ಲರಿಗೂ ಮಾದರಿ ಎಂದರು.ಸಭೆಯಲ್ಲಿ ವಿಎಚ್ ಪಿ ಜಿಲ್ಲಾ ಸಹ ಕಾರ್ಯದರ್ಶಿ ಮದನ್, ಬಜರಂಗದಳ ಸಹ ಸಂಯೋಜಕ ಅಭಿಷೇಕ್ ಗಡಿಗೇಶ್ವರ, ಬಜರಂಗದಳ ಸಂಚಾಲಕ ಅನೂಪ್ ಹಂಚಿನಮನೆ, ವಿಎಚ್‌ಪಿ ಕಾರ್ಯದರ್ಶಿ ಅರುಣ ಕುಮಾರ್ ಜೈನ್ ಇದ್ದರು.