ಗುರುದೃಷ್ಟಿಯಿಂದ ಎಲ್ಲ ದೋಷ ಪರಿಹಾರ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Sep 02, 2024, 02:03 AM IST
ರಾಘವೇಶ್ವರ ಶ್ರೀಗಳು ಭಕ್ತರನ್ನು ಆಶೀರ್ವದಿಸಿದರು. | Kannada Prabha

ಸಾರಾಂಶ

ಗ್ರಹಗಳ ಬಲ ಹೆಚ್ಚಿದಂತೆ ಫಲ ಹೆಚ್ಚು. ಬಲ ಕಡಿಮೆಯಾದಾಗ ದುಷ್ಫಲಗಳನ್ನು ನೀಡುತ್ತವೆ. ದೋಷವನ್ನು ಪರಿಹರಿಸುವ ವಿಚಾರದಲ್ಲಿ ಗುರುವಿಗೆ ಇರುವ ಬಲ ಇತರ ಯಾವ ಗ್ರಹಗಳಿಗೂ ಇಲ್ಲ.

ಗೋಕರ್ಣ: ಎಲ್ಲ ಗ್ರಹಗಳಿಂದ ಬರುವ ಎಲ್ಲ ದೋಷಗಳನ್ನು ಒಬ್ಬ ಗುರು ಪರಿಹಾರ ಮಾಡಬಲ್ಲ. ಗುರುವಿನ ದೃಷ್ಟಿಮಾತ್ರದಿಂದಲೇ ಎಲ್ಲ ದೋಷಗಳು ಪರಿಹಾರವಾಗಬಲ್ಲವು. ಗುರುವಿನ ಯೋಗ್ಯತೆಯನ್ನು ಜ್ಯೋತಿಷ ಉತ್ತಮವಾಗಿ ನಿರೂಪಿಸಿದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು 43ನೇ ದಿನವಾದ ಭಾನುವಾರ ಕಾಲ ಪ್ರವಚನ ಸರಣಿಯಲ್ಲಿ ಆಶೀರ್ವಚನ ಅನುಗ್ರಹಿಸಿದರು.

ಗ್ರಹಗಳ ಬಲ ಹೆಚ್ಚಿದಂತೆ ಫಲ ಹೆಚ್ಚು. ಬಲ ಕಡಿಮೆಯಾದಾಗ ದುಷ್ಫಲಗಳನ್ನು ನೀಡುತ್ತವೆ. ದೋಷವನ್ನು ಪರಿಹರಿಸುವ ವಿಚಾರದಲ್ಲಿ ಗುರುವಿಗೆ ಇರುವ ಬಲ ಇತರ ಯಾವ ಗ್ರಹಗಳಿಗೂ ಇಲ್ಲ. ಬುಧನಿಗೆ ಆ ಶಕ್ತಿಯ ಕಾಲುಭಾಗ ಹಾಗೂ ಶುಕ್ರನಿಗೆ ಅರ್ಧಭಾಗದಷ್ಟಿದೆ ಎಂದರು.

ಎಷ್ಟೇ ದುರ್ಬಲನಾದರೂ ಗುರು ತನ್ನ ಸ್ವಭಾವವನ್ನು ಬಿಡುವುದಿಲ್ಲ. ಮುಪ್ಪು, ಹಸಿವು, ಆಯಾಸದಿಂದ ಮುದಿ ಸಿಂಹವೊಂದು ಹೇಗೆ ಒಣ ಹುಲ್ಲನ್ನು ತಿನ್ನುವುದಿಲ್ಲ. ಮದ್ದಾನೆಯ ಕುಂಭಸ್ಥಳ ಸೀಳಿ ಆಹಾರ ಸಂಪಾದಿಸಬೇಕು ಎಂಬ ಯೋಚನೆ ಅದರದ್ದಾಗಿರುತ್ತದೆ. ಅಂತೆಯೇ ಸಂತ ಕೂಡಾ ಎಂಥದ್ದೇ ಕಷ್ಟಸ್ಥಿತಿಯಲ್ಲೂ ತನ್ನ ಸ್ವಭಾವ ಬದಲಾಯಿಸಿಕೊಳ್ಳುವುದಿಲ್ಲ ಎಂದು ಬಣ್ಣಿಸಿದರು.

ಹನ್ನೆರಡನೇ ಮನೆಯಲ್ಲಿ ಅಥವ ಎಂಟನೇ ಮನೆಯಲ್ಲಿ ಗುರು ಇದ್ದರೆ, ಭೌತಿಕ ಬದುಕು ಅಷ್ಟು ಒಳ್ಳೆಯದಲ್ಲದಿರಬಹುದು. ಆದರೆ ಹನ್ನೆರಡನೇ ಮನೆಯ ಗುರು ಮುಕ್ತಿಕಾರಕ. ಹನ್ನೊಂದನೇ ಮನೆಯಲ್ಲಿ ಗುರು ಅತ್ಯಂತ ಉತ್ತಮ ಫಲವನ್ನು ನೀಡುತ್ತಾನೆ. ಆಧ್ಯಾತ್ಮಿಕ, ಪಾರಮಾರ್ಥಿಕ ದೃಷ್ಟಿಯಿಂದ ಹನ್ನೆರಡನೇ ಮನೆಯ ಗುರು ಶ್ರೇಷ್ಠ ಎಂದರು.

ಅಖಿಲ ಹವ್ಯಕ ಮಹಾಸಭಾ ವತಿಯಿಂದ ನಿರ್ದೇಶಕ ಆರ್.ಜಿ. ಹೆಗಡೆ ಹೊಸಾಕುಳಿ ಭಾನುವಾರ ಸರ್ವಸೇವೆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು. ಭಾರತೀ ಪ್ರಕಾಶನ ಹೊರತಂದಿರುವ ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳು, ನಿತ್ಯಾರಾಧನೆ ಮತ್ತು ಶ್ರೀರಾಮ ಕರ್ಣಾಮೃತ ಕೃತಿಗಳನ್ನು ಎಂ.ಆರ್. ಹೆಗಡೆ ಮತ್ತು ಬಿ.ಕೆ. ಹೆಗಡೆಯವರು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಭಾರತೀ ಪ್ರಕಾಶನದ ಜಾಲತಾಣ ಅನಾವರಣವನ್ನು ಶ್ರೀಪರಿವಾರದ ಸದಸ್ಯರು ನೆರವೇರಿಸಿದರು. 25ರ ಸಂಭ್ರಮದಲ್ಲಿರುವ ಭಾರತೀ ಪ್ರಕಾಶನದ ನೂತನ ಲಾಂಛನದ ಅನಾವರಣವೂ ಈ ಸಂದರ್ಭದಲ್ಲಿ ನಡೆಯಿತು.

ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್., ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಶಾಸ್ತ್ರಿಗಳಾದ ಶ್ರೀಶ ಶಾಸ್ತ್ರಿ ಉಪಸ್ಥಿತರಿದ್ದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು