ಹಿಡಿದ ಹಠ ಸಾಧಿಸಿ ತೋರಿಸಿದ ಡಿಕೆಶಿ! - ಜಿಲ್ಲೆ ಹೆಸರು ಬದಲಾಯಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ - ಪ್ರಸ್ತಾವನೆ ಸಲ್ಲಿಸಿದ 18 ದಿನದೊಳಗೆ ಮರು ನಾಮಕರಣ
- ಜೆಡಿಎಸ್ , ಬಿಜೆಪಿ ಹಾಗೂ ಸಂಘಟನೆಗಳ ನಡೆ ಕುತೂಹಲ-ಎಂ.ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರ
"ಬ್ರ್ಯಾಂಡ್ ಬೆಂಗಳೂರು " ಹೆಸರಲ್ಲಿ ರಾಮನಗರ ಜಿಲ್ಲೆಯ ಹೆಸರನ್ನು ʼಬೆಂಗಳೂರು ದಕ್ಷಿಣ ಜಿಲ್ಲೆʼ ಎಂದು ಮರು ನಾಮಕರಣ ಮಾಡುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾವು ಹಿಡಿದ ಹಠವನ್ನು ಕೊನೆಗೂ ಸಾಧಿಸಿ ತೋರಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರು ನಾಮಕರಣ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ಈಗ ಜಿಲ್ಲೆ ಹೆಸರು ಮಾತ್ರ ಬದಲಾಗುತ್ತಿದ್ದು, ಆಡಳಿತಾತ್ಮಕವಾಗಿ ಯಾವುದೇ ಬದಲಾವಣೆ ಆಗುವುದಿಲ್ಲ.
ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ ತಾಲೂಕುಗಳ ಭವಿಷ್ಯ ಹಾಗೂ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಜುಲೈ 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಿತ್ತು.ಅದರಲ್ಲಿ ಬೆಂಗಳೂರು ನಗರದ ಅಂತಾರಾಷ್ಟ್ರೀಯ ಖ್ಯಾತಿ, ಸಾರ್ವಭೌಮತೆ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲೂಕುಗಳಿಗೆ ಲಭ್ಯ ಆಗಬೇಕೆಂಬುದು ಜನರ ಆಶಯ ಮತ್ತು ನಮ್ಮ ಚಿಂತನೆಯೂ ಕೂಡ. ಆದ್ದರಿಂದ, ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಇದರ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುವಂತೆ ಕೋರಿದ್ದರು.
ಇದಾದ 18 ದಿನದೊಳಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರು ನಾಮಕರಣ ಮಾಡುವ ದಿಟ್ಟ ನಿರ್ಧಾರ ಪ್ರಕಟಿಸಿದೆ. ಜನರ ಪ್ರತಿನಿಧಿಗಳೇ ಜಿಲ್ಲೆಯ ಮರು ನಾಮಕರಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅಲ್ಲದೆ, ಜಿಲ್ಲೆ ಮರು ನಾಮಕರಣ ವಿಚಾರ ತನ್ನ ಅಧೀನಕ್ಕೆ ಬರುವ ಕಾರಣ ರಾಜ್ಯ ಸರ್ಕಾರ ವಿವೇಚನಾ ಅಧಿಕಾರವನ್ನು ಬಳಸಿ ಹೆಸರು ಬದಲಾವಣೆ ನಿರ್ಧಾರ ಪ್ರಕಟಿಸಿದೆ.ಇನ್ನು ಕಂದಾಯ ಇಲಾಖೆಯಲ್ಲಿ ಮರು ನಾಮಕರಣದ ಪ್ರಕ್ರಿಯೆ ಪೂರ್ಣಗೊಂಡು ರಾಮನಗರ ಜಿಲ್ಲೆ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಅಧಿಕೃತವಾಗಿ ಅಧಿಸೂಚನೆ ಹೊರ ಬೀಳುವುದಷ್ಟೇ ಬಾಕಿ ಇದೆ. ರಾಮನಗರವೇ ಜಿಲ್ಲಾ ಕೇಂದ್ರವಾಗಿ ಇರಲಿದ್ದು, ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳನ್ನು ಒಳಗೊಂಡು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕಾರಣ ಮಾಡಲಾಗಿದೆ.
ದಳ - ಕಮಲದ ನಡೆ ಕುತೂಹಲ:ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿಗಳಿಗೆ ರಾಮನಗರ ಜಿಲ್ಲೆ ಮರು ನಾಮಕರಣಕ್ಕೆ ಪ್ರಸ್ತಾವನೆ ಸಲ್ಲಿಸಿದಾಗಲೇ ಜೆಡಿಎಸ್, ಬಿಜೆಪಿ ಪಕ್ಷಗಳ ನಾಯಕರು ಹಾಗೂ ಕೆಲ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಇದ್ಯಾವುದನ್ನು ಲೆಕ್ಕಿಸದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾವು ಹಿಡಿದ ಪಟ್ಟನ್ನು ಈಡೇರಿಸಿ ತೋರಿಸಿದ್ದಾರೆ. ಈಗ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಡೆ ಏನಾಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡುವುದರಿಂದ ಮುಂದೆ ರಾಮನಗರ, ಚನ್ನಪಟ್ಟಣ, ಮಾಗಡಿ ಸೇರಿದಂತೆ ಮೈಸೂರುವರೆಗೂ ಅಭಿವೃದ್ಧಿ ಸಾಧಿಸಲು, ಕೈಗಾರಿಕೆಗಳ ಸ್ಥಾಪನೆಗೆ ಆಹ್ವಾನಿಸಲು, ಜತೆಗೆ ಆಸ್ತಿ ಮೌಲ್ಯ ಹೆಚ್ಚಳಕ್ಕೂ ನೆರವಾಗುತ್ತದೆ. ಬೆಂಗಳೂರಿನ ಒಂದು ದಿಕ್ಕಿನಲ್ಲಿ ಆಂಧ್ರ ಪ್ರದೇಶ, ಮತ್ತೊಂದು ದಿಕ್ಕಿನಲ್ಲಿ ತಮಿಳುನಾಡು ರಾಜ್ಯದ ಗಡಿ ಬರುತ್ತದೆ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿ ವಿಸ್ತರಣೆಗೆ ನಮಗೆ ಉಳಿದಿರುವುದು ತುಮಕೂರು ಹಾಗೂ ಈ ಭಾಗ ಮಾತ್ರ. ನಮ್ಮ ಹೆಸರನ್ನು ನಾವು ಉಳಿಸಿಕೊಳ್ಳುತ್ತಿದ್ದೇವೆ ಎಂಬುದು ಕಾಂಗ್ರೆಸ್ ನಾಯಕರ ವಾದವಾಗಿದೆ.ನುಡಿದಂತೆ ನಡೆದ ಡಿಕೆಶಿ !
ಮುಂದೊಂದು ದಿನ ಕನಕಪುರ ಬೆಂಗಳೂರು ವ್ಯಾಪ್ತಿಗೆ ಬರುತ್ತದೆ. ʻನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ, ನಿಮ್ಮ ಆಸ್ತಿ ಮೌಲ್ಯಗಳನ್ನು ಹತ್ತು ಪಟ್ಟು ಹೆಚ್ಚು ಮಾಡುವ ಶಕ್ತಿ ದೇವರು ನೀಡಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ವಿದ್ಯೆ ನೀಡಬಹುದು ಅಷ್ಟೇ. ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿʼ ಎಂದು ಡಿಕೆ ಶಿವಕುಮಾರ್ ಈ ಹಿಂದೆಯೇ ಕನಕಪುರದ ಜನತೆಗೆ ಕಿವಿಮಾತು ಹೇಳಿದ್ದರು. ಇದೀಗ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ಆ ಮಾತನ್ನು ಉಳಿಸಿಕೊಂಡಿದ್ದಾರೆ.
ವಿಶ್ವವೇ ಬೆಂಗಳೂರನ್ನು ನೋಡುತ್ತಿದೆ. ಹೀಗಾಗಿ ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದರೆ ಈ ಭಾಗದಲ್ಲಿ ಅಭಿವೃದ್ಧಿಯಾಗುತ್ತದೆ. ಹೆಚ್ಚೆಚ್ಚು ಕೈಗಾರಿಕೆಗಳು, ಕಂಪನಿಗಳು ಇಲ್ಲಿಗೆ ಬರುತ್ತವೆ. ಇದರಿಂದ ಇಲ್ಲಿನ ಜನರು ಆರ್ಥಿಕವಾಗಿ ಬಲಗೊಳ್ಳುತ್ತಾರೆ. ಅಲ್ಲದೇ ಈ ಭಾಗದ ರೈತರ ಜಮೀನಿಗೆ ಭಾರೀ ಬೇಡಿಕೆ ಬರಲಿದೆ. ಅಲ್ಲದೇ ಈ ಭಾಗದಲ್ಲಿ ಇನ್ನೊಂದು ವಿಮಾನ ನಿಲ್ದಾಣ ಮಾಡಬೇಕೆಂಬ ಪ್ಲ್ಯಾನ್ ಇದೆ. ಈ ಎಲ್ಲಾ ಕಾರಣಗಳಿಗಾಗಿ ಡಿ.ಕೆ.ಶಿವಕುಮಾರ್ ಅವರು ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿಸಿದ್ದಾರೆ.ಟ್ರಬಲ್ ಶೂಟರ್ ಡಿಕೆಶಿ ರಾಜಕೀಯ ತಂತ್ರವೇನು?
ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿರುವುದರ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ತಂತ್ರವೂ ಅಡಗಿದೆ.
ಹೆಸರು ಬದಲಾವಣೆಯ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಅದರಲ್ಲೂ ಒಕ್ಕಲಿಗರ ನಾಯಕ ಎನಿಸಿಕೊಂಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರಿಗೆ ಟಾಂಗ್ ನೀಡಿದ್ದಾರೆ.ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ, ರಾಮನಗರ ಜಿಲ್ಲೆಯ ಜಮೀನು ಬೆಲೆಯಲ್ಲಿ ಒಂದಕ್ಕೆರಡು ಏರಿಸುವುದರ ಮೂಲಕ ಸ್ಥಳೀಯರನ್ನು ಆರ್ಥಿಕವಾಗಿ ಬಲಗೊಳಿಸಿದ ಕ್ರೆಡಿಟ್ ಪಡೆಯಲು ಮುಂದಾಗಿರುವ ಡಿ.ಕೆ.ಶಿವಕುಮಾರ್ ಹತ್ತು ಹಲವು ಯೋಜನೆಗಳೊಂದಿಗೆ 2007ರಲ್ಲಿ ರಾಮನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ್ದ ಕುಮಾರಸ್ವಾಮಿ ಹಿಡಿತ, ಹವಾ ಕುಗ್ಗಿಸಲು ತಂತ್ರ ರೂಪಿಸಿದಂತಿದೆ.
ಜಿಲ್ಲೆಯ ಅಭಿವೃದ್ಧಿಗೆ ಬೆಂಗಳೂರು ಹೆಸರು ಪೂರಕವಾಗಿರಲಿದೆ. ಆ ಮೂಲಕ ರಾಮನಗರಕ್ಕೆ ಬೆಂಗಳೂರು ಮಾನ್ಯತೆ ನೀಡಿ ಕ್ರೆಡಿಟ್ ಪಡೆಯುವ ಆಲೋಚನೆಯಲ್ಲಿರುವ ಡಿ.ಕೆ.ಶಿವಕುಮಾರ್, ಈ ಪ್ರದೇಶದಲ್ಲಿ ಕುಮಾರಸ್ವಾಮಿಯವರ ಪ್ರಾಬಲ್ಯ ಕಡಿಮೆ ಮಾಡಿ ಒಕ್ಕಲಿಗ ಮತ ಬ್ಯಾಂಕ್ ಅನ್ನು ಕೈವಶ ಮಾಡಿಕೊಳ್ಳುವ ಚಿಂತನೆ ಎನ್ನಲಾಗಿದೆ. ಆದರೆ, ಡಿ.ಕೆ.ಶಿವಕುಮಾರ್ ಪ್ಲಾನ್‌ಗೆ ಕುಮಾರಸ್ವಾಮಿ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಗ್ರೇಟರ್ ಬೆಂಗಳೂರು ಮಾಡುತ್ತೇವೆ ಎಂದಿದ್ದಾಗ ವಾಗ್ದಾಳಿ ನಡೆಸಿದ್ದರು. ಇದು ತಮ್ಮ ಬೇನಾಮಿ ಆಸ್ತಿ ಸಕ್ರಮ ಮಾಡಿಕೊಳ್ಳುವ ಪ್ಲಾನ್ ಎಂದು ಆರೋಪಿಸಿದ್ದರು.ಇದೀಗ ಅಧಿಕೃತವಾಗಿ ರಾಮನಗರ ಹೆಸರು ಬದಲಾವಣೆಯಾಗಿದೆ. ಚನ್ನಪಟ್ಟಣ ಉಪ ಚುನಾವಣೆ ಸಂದರ್ಭದಲ್ಲಿ ಹೆಸರು ಬದಲಾವಣೆಯ ಕಿಡಿ ಹೊತ್ತಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ವೇದಿಕೆಯಾಗುವುದಂತೂ ಸತ್ಯ. ಆದರೆ, ಇದು ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎನ್ನುವುದನ್ನು ಕಾದುನೋಡಬೇಕು.
ಜಿಲ್ಲೆಗಳ ಹೆಸರನ್ನು ಬದಲಾಯಿಸುವ ಅಧಿಕಾರ ಆಯಾಯ ರಾಜ್ಯ ಸರ್ಕಾರಗಳ ಅಧೀನದಲ್ಲಿ ಇರುತ್ತವೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕೆಂಬ ಕಾನೂನು ಇಲ್ಲ. ಉತ್ತರ ಪ್ರದೇಶದ ರಾಜ್ಯ ಸರ್ಕಾರ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಮತ್ತು ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯಾ ಜಿಲ್ಲೆ ಎಂದು ಮರು ನಾಮಕರಣ ಮಾಡಿದೆ. ಈಗ ಕರ್ನಾಟಕ ಸರ್ಕಾರ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದೆ. ಮುಂದೆ ಬರುವ ಸರ್ಕಾರಕ್ಕೂ ಈಗಿರುವ ಹೆಸರು ಬದಲಾವಣೆ ಮಾಡುವ ಅವಕಾಶ ಇರಲಿದೆ.
- ಕೆ.ಅಮರ ನಾರಾಯಣ, ನಿವೃತ್ತ ಐಎಎಸ್ ಅಧಿಕಾರಿಸಚಿವ ಸಂಪುಟ ಸಹೊದ್ಯೋಗಿಗಳಿಗೆ ಅಭಿನಂದನೆ: ಇಕ್ಬಾಲ್
ರಾಮನಗರ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ತೀರ್ಮಾನ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟದ ಎಲ್ಲ ಸಚಿವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ರಾಮನಗರ ಕ್ಷೇತ್ರದ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.
ನಾವೆಲ್ಲರೂ ಸಹ ಈ ಹಿಂದೆ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯವ ರಾಗಿದ್ದೆವು, ಕೆಲವರು ರಾಜಕೀಯ ಹಿತಾಶಕ್ತಿಗಾಗಿ ರಾಮನಗರ ಜಿಲ್ಲೆ ಮಾಡಿದ್ದರಷ್ಟೆ, ಆದರೆ ಆಸಕ್ತಿ ವಹಿಸಿ ಜಿಲ್ಲೆಯ ಅಭಿವೃದ್ಧಿಯನ್ನು ಮಾಡುವ ಇಚ್ಚಾಶಕ್ತಿ ತೋರದ ಪರಿಣಾಮ ಅಭಿವೃದ್ದಿ ಕುಂಠಿತವಾಗಿತ್ತು. ಇದನ್ನು ಮನಗಂಡು ಜಿಲ್ಲೆಯ ಜನಪ್ರತಿನಿಧಿಗಳು, ಕಾಂಗ್ರೆಸ್‌ನ ಪ್ರಮುಖರ ನಿಯೋಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಪ್ರಸ್ತಾವನೆ ಇಟ್ಟಿದ್ದೆವು. ಅವರು ಅಂದು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವ ಬಗ್ಗೆ ತಿಳಿಸಿದ್ದರು. ಅದರಂತೆ ಶುಕ್ರವಾರದ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.ಬೆಂಗಳೂರು ನಗರ ಸುತ್ತಲೂ ವೇಗವಾಗಿ ಬೆಳೆಯುತ್ತಾ ಅಭಿವೃದ್ದಿ ಕಾಣುತ್ತಿದೆ. ಇದನ್ನು ಮನಗಂಡಿರುವ ನಾವು ಸಹ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಸಿ ಅಭಿವೃದ್ದಿಗೆ ವೇಗ ಕೊಡಬೇಕೆಂಬುದು ನಮ್ಮೆಲ್ಲರ ಅಭಿಲಾಷೆಯಾಗಿದೆ. ಅದಕ್ಕೆ ಸ್ಪಂದಿಸಿ ಮುಖ್ಯಮಂತ್ರಿಗಳು ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿ ಸಂಪುಟ ಸಭೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ತೀರ್ಮಾನ ತೆಗೆದುಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.