ಮಹಮ್ಮದ್ ರಫೀಕ್ ಬೀಳಗಿ ಕನ್ನಡಪ್ರಭ ವಾರ್ತೆ ಚೆನ್ನೈಮಧ್ಯಮ ಗಾತ್ರದ ಎಸ್‌ಯುವಿ ವರ್ಗದ ವಾಹನಗಳಿಗೆ ನೆಲೆ ಕಲ್ಪಿಸಿದ ‘ರೆನೊ ಇಂಡಿಯಾ ಕಂಪನಿ’ಯು ತನ್ನ ಬ್ರ್ಯಾಂಡ್‌ನಡಿ ಬಹಳಷ್ಟು ಖ್ಯಾತಿ ಪಡೆದ ಡಸ್ಟರ್ ಕಾರನ್ನು ಆಧುನಿಕ, ವಿಶಿಷ್ಟವಾದ ಹೊಸ ಅವತಾರದಲ್ಲಿ ಮತ್ತೆ ಬಿಡುಗಡೆ ಮಾಡಿದೆ.
ಶಕ್ತಿಶಾಲಿ ಹೈಬ್ರಿಡ್ ಕಾರು:ಹೈಬ್ರಿಡ್ ಇ- ಟೆಕ್ 160 ಎಂಜಿನ್ ಆಯ್ಕೆಯನ್ನು ಕೂಡ ಗ್ರಾಹಕರಿಗೆ ನೀಡಲಾಗಿದೆ. ಇದರಲ್ಲಿ 1.8 ಲೀಟರ್ ಸಾಮರ್ಥ್ಯದ ಎಂಜಿನ್ ಹಾಗೂ 1.4 ಕಿಲೊವ್ಯಾಟ್ ಸಾಮರ್ಥ್ಯದ ಬ್ಯಾಟರಿ ಇದೆ. ಇದರಿಂದಾಗಿ ಇದು ಹೆಚ್ಚು ದಕ್ಷವಾದ ಮತ್ತು ಶಕ್ತಿಶಾಲಿಯಾದ ಹೈಬ್ರಿಡ್ ವಾಹನ ಎಂದು ಕರೆಸಿಕೊಂಡಿದೆ. ಟರ್ಬೊ ಟಿಸಿಇ 160 ಮತ್ತು ಟರ್ಬೊ ಟಿಸಿಇ 100 ಪೆಟ್ರೋಲ್ ಎಂಜಿನ್‌ಗಳ ಜತೆ ಅತ್ಯಾಧುನಿಕವಾದ ಟ್ರಾನ್ಸ್‌ಮಿಷನ್ ಆಯ್ಕೆಗಳು ಸಿಗುತ್ತವೆ.
ವಿಶೇಷವಾಗಿ ಭಾರತದ ಎಲ್ಲ ರೀತಿಯ ರಸ್ತೆಗಳಿಗೆ ಹೊಂದುವಂತೆ ಹೊಸ ಡಸ್ಟರ್ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಚೆನ್ನೈನಲ್ಲೇ ಉತ್ಪಾದನಾ ಘಟಕ ಹೊಂದಿರುವ ರೆನೊ ಶೇ.90ರಷ್ಟು ಬಿಡಿ ಭಾಗಗಳನ್ನು ಭಾರತದ ರಸ್ತೆಗಳ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ತಯಾರಿಸಿದೆ. 5 ಸ್ಟಾರ್ ಸುರಕ್ಷತಾ ಮಾನದಂಡಕ್ಕೆ ಸರಿಹೊಂದುವಂತೆ ಈ ಕಾರನ್ನು ರೂಪಿಸಲಾಗಿದೆ.ಗ್ರೌಂಡ್ ಕ್ಲಿಯರೆನ್ಸ್:ಕಾರ್‌ನ ಗ್ರೌಂಡ್ ಕ್ಲಿಯರೆನ್ಸ್ 212 ಮಿ.ಮೀ. ಇದ್ದು, ಇದರಿಂದಾಗಿ ದುರ್ಗಮ ಹಾದಿಗಳನ್ನು ಕೂಡ ಬಹಳ ವಿಶ್ವಾಸದಿಂದ ಕ್ರಮಿಸಲು ಸಾಧ್ಯವಾಗುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. 18 ಇಂಚುಗಳ ಡೈಮಂಡ್ ಕಟ್ ಮಿಶ್ರಲೋಹದ ಚಕ್ರ (ಅಲಾಯ್ ವೀಲ್) ಇದೆ. ಹೊಸ ಡಸ್ಟರ್ 4,346 ಮಿಮೀ ಉದ್ದ, 1,815 ಮಿಮೀ ಅಗಲ, 1,703 ಮಿಮೀ ಎತ್ತರ ಇದೆ. ಕಾರಿನ ವೀಲ್‌ಬೇಸ್ 2,657 ಮಿಮೀ ಆಗಿದೆ.ಪ್ರೀ ಬುಕ್:ಗ್ರಾಹಕರು ಹೊಸ ರೆನೊ ಡಸ್ಟರ್ ವಾಹನವನ್ನು ₹21000 ಪಾವತಿಸಿ ಆರ್ ಪಾಸ್ ಖರೀದಿಸುವ ಮೂಲಕ ಪ್ರಿ-ಬುಕ್ ಮಾಡಿಕೊಳ್ಳಬಹುದು. ವಾಹನದ ಬೆಲೆಯನ್ನು ಮಾರ್ಚ್ ಮಧ್ಯಭಾಗದಲ್ಲಿ ಪ್ರಕಟಿಸಲಾಗುತ್ತದೆ. ಏಪ್ರಿಲ್‌ನಿಂದ ಗ್ರಾಹಕರಿಗೆ ವಾಹನದ ವಿತರಣೆ ಆರಂಭವಾಗಲಿದೆ. ಸ್ಟ್ರಾಂಗ್ ಹೈಬ್ರಿಡ್ ಇ-ಟೆಕ್ 160 ಮಾದರಿಯನ್ನು ದೀಪಾವಳಿ ಸಂದರ್ಭದಲ್ಲಿ ಗ್ರಾಹಕರಿಗೆ ವಿತರಣೆ ಮಾಡಲಾಗುತ್ತದೆ.
ಕೋಟ್ :ಹೊಸ ರೆನೊ ಡಸ್ಟರ್ ಒಂದು ಐಕಾನ್‌ನಂತೆ ಇದ್ದ ವಾಹನದ ಪುನರ್ಜನ್ಮದಂತೆ ಇದೆ. ಫ್ರಾನ್ಸ್ ಮತ್ತು ಭಾರತದಲ್ಲಿನ ನಮ್ಮ ವಿನ್ಯಾಸ ತಂಡಗಳ ನಡುವಿನ ಸಮನ್ವಯದ ಮೂಲಕ ಈ ವಿನ್ಯಾಸವನ್ನು ಬಹಳ ಸೂಕ್ಷ್ಮವಾಗಿ ರೂಪಿಸಲಾಗಿದೆ.
- ಲಾರೆನ್ಸ್ ವ್ಯಾನ್ ಡೆನ್ ಆಕ್ಕರ್, ರೆನೊ ಸಮೂಹದ ಮುಖ್ಯ ವಿನ್ಯಾಸ ಅಧಿಕಾರಿ.