ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಾದುರಸ್ತಿಯಲ್ಲಿರುವ ಕೆರೆಗಳಿಗೆ ಕಾಯಕಲ್ಪ ಕೊಡುವ ಕಾರ್ಯ ನಡೆಸುತ್ತಿದ್ದು, ತೀವ್ರ ಬರಗಾಲ ಎದುರಿಸಿದ 2023-24 ನೇ ಸಾಲಿನಲ್ಲಿ ರಾಜ್ಯಾದ್ಯಂತ 193 ಕೆರೆಗಳ ಪುನಶ್ಚೇತನ ಕಾರ್ಯವು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್‍ಕುಮಾರ್ ಎಸ್.ಎಸ್. ಅವರು ತಿಳಿಸಿದರು.ರಾಜ್ಯದಲ್ಲಿ ಸುಮಾರು 36, 000 ಕೆರೆಗಳಿವೆಯೆಂಬ ಮಾಹಿತಿಯಿದೆ. ಈ ಕೆರೆಗಳು ಪುನಶ್ಚೇತನಗೊಂಡು ನೀರು ತುಂಬಿಕೊಂಡರೆ ರಾಜ್ಯದ ಸಹಸ್ರಾರು ಎಕರೆ ಪ್ರದೇಶಕ್ಕೆ ನೀರುಣಿಸಲು ಸಾಧ್ಯವಾಗಬಹುದು. ಆದರೆ ಇಂದು ಅದೆಷ್ಟೋ ಕೆರೆಗಳು ತಮ್ಮ ನೀರು ಸಂಗ್ರಹಣೆಯ ಸಾಮರ್ಥ್ಯವನ್ನು ಕಳೆದುಕೊಂಡಿವೆ, ನಿರ್ವಹಣೆಯಿಲ್ಲದೆ ಗಿಡಗಂಟಿಗಳು ಬೆಳೆದು ಹೂಳು ತುಂಬಿಕೊಂಡಿವೆ. ಮರುಳು, ಮಣ್ಣಿಗಾಗಿ ಕೆರೆಯ ಒಡಲನ್ನು ಅಗೆದು ವಿರೂಪಗೊಳಿಸಲಾಗಿದೆ. ಒತ್ತುವರಿಯಿಂದಾಗಿ ನೀರು ಹರಿದು ತರುತ್ತಿದ್ದ ಕಾಲುವೆಗಳು ಇಲ್ಲದಂತಾಗಿದೆ. ಈ ಎಲ್ಲ ಕಾರಣಗಳಿಂದ ಇಡೀ ಗ್ರಾಮಕ್ಕೆ ನೀರುಣಿಸುತ್ತಿದ್ದ ಕೆರೆಗಳಿದ್ದರೂ ಹನಿ ನೀರಿಗಾಗಿ ಪರದಾಡುತ್ತಿರುವ ರೈತರ ಹಾಗೂ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಅಲೆಯುತ್ತಿರುವ ಮಹಿಳೆಯರ ಸಂಕಷ್ಟ ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆಯವರು ಪಾರಂಪರಿಕ ಕೆರೆಗಳ ಪುನಶ್ಚೇತನಕ್ಕಾಗಿಯೇ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮವನ್ನು 2016ರಲ್ಲಿ ಪ್ರಾರಂಭಿಸಿದರು. ಇದುವರೆಗೆ ಇದರಂತೆ ರಾಜ್ಯಾದ್ಯಂತ 760 ಕೆರೆಗಳ ಪುನಶ್ಚೇತನಗೊಳಿಸಿದ್ದು, ಈ ಪೈಕಿ ಸುಮಾರು 351 ಕೆರೆಗಳಲ್ಲಿ ಬರಗಾಲದ ಸಂದರ್ಭದಲ್ಲೂ ನೀರಿರುವುದು ಈ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯೆಂಬಂತಿದೆ. ಬರಗಾಲದ ಸಂದರ್ಭ ನೀರಿನ ಬವಣೆ ನೀಗಿಸುವ ನಾಡಿನ ಜಲಪಾತ್ರೆಗಳಂತಿರುವ ಕೆರೆಗಳ ಪುನಶ್ಚೇತನಕ್ಕೆ ಈ ವರ್ಷ ವಿಶೇಷ ಆದ್ಯತೆ ನೀಡಲಾಗಿದೆ. ಪ್ರಸ್ತುತ ವರ್ಷವೂ ರಾಜ್ಯದ 193 ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗಿದ್ದು, ಕೆರೆಗಳು ಸುಂದರವಾಗಿ ಪುನಶ್ಚೇತನಗೊಂಡು ನೀರು ಸಂಗ್ರಹಣೆಗೆ ಅಣಿಯಾಗಿವೆ. ಇದಕ್ಕಾಗಿ 8 ಇಂಜಿನಿಯರ್ಸ್‍ಗಳು, 125 ನೋಡೆಲ್ ಅಧಿಕಾರಿಗಳು ಹಾಗೂ 193 ಕೆರೆ ಸಮಿತಿಯ ಸುಮಾರು 965 ಕ್ಕೂ ಹೆಚ್ಚು ಪದಾಧಿಕಾರಿಗಳ ತಂಡ ಜಲಯೋಧರಾಗಿ ದುಡಿದು ಈ ಬೃಹತ್ ಕಾರ್ಯದ ಯಶಸ್ಸಿಗೆ ಹಗಲಿರುಳು ಶ್ರಮಿಸಿ ಅಭಿನಂದನಾರ್ಹ ಕೆಲಸ ನಿರ್ವಹಿಸಿದೆ. ಗ್ರಾಮಸ್ಥರ ಸಹಭಾಗಿತ್ವದಲ್ಲಿ ಯೋಜನೆಯ ಕಾರ್ಯಕರ್ತರ, ಅಧಿಕಾರಿಗಳ ಸಕ್ರಿಯ ತೊಡಗಿಸಿಕೊಳ್ಳುವುದರೊಂದಿಗೆ ಅತೀ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕೆರೆ ಪುನಶ್ಚೇತನ ಕಾರ್ಯ ನಡೆಸಲು ಸಾಧ್ಯವಾಗಿದೆ.
ಕೆರೆಗಳ ದುರಸ್ತಿಗಾಗಿ 522 ಜೆ.ಸಿ.ಬಿ. ಹಾಗೂ ಹಿಟಾಚಿ ಯಂತ್ರಗಳು, 4212ಕ್ಕೂ ಅಧಿಕ ಟ್ರ್ಯಾಕ್ಟರ್ ಹಾಗೂ ಟಿಪ್ಪರ್‌ಗಳನ್ನು ಬಳಸಿಕೊಳ್ಳಲಾಯಿತು. ಹೂಳು ತೆಗೆಯುವುದು, ಏರಿ ಭದ್ರಪಡಿಸುವುದು, ಕಾಲುವೆ ಹಾಗೂ ಕೋಡಿಗಳ ರಿಪೇರಿ, ಕಲ್ಲು ಕಟ್ಟುವುದು ಮೊದಲಾದ ಕಾಮಗಾರಿಗಳ ಮೂಲಕ ಕೆರೆಗಳು ವೈಜ್ಞಾನಿಕ ಹಾಗೂ ಸುಂದರವಾಗಿ ಪುನರ್ ನಿರ್ಮಾಣಗೊಂಡಿವೆ. ಮಳೆ ಬಂದಾಗ ಮುಂದಿನ ಒಂದೆರಡು ವರ್ಷಕ್ಕೆ ಬೇಕಾದ ನೀರು ಸಂಗ್ರಹಿಸಿ ಸುತ್ತಲಿನ ಪ್ರದೇಶದ ಅಂತರ್ಜಲ ಮಟ್ಟ ಹೆಚ್ಚಿಸಿ, ಜನ-ಜಾನುವಾರುಗಳ ನೀರಿನ ಬವಣೆಯನ್ನು ಈ ಕೆರೆಗಳು ನೀಗಿಸಲಿವೆ.ದುರಸ್ತಿಗೊಳಿಸಿದ ಕೆರೆಗಳ ವೈಶಿಷ್ಟ್ಯತೆ: ಪುರಾಣ ಪ್ರಸಿದ್ಧ ಕ್ಷೇತ್ರವಾದ ಪೊಳಲಿ ರಾಜರಾಜೇಶ್ವರಿ ದೇವಾಲಯಕ್ಕೆ ಸಂಬಂಧಿಸಿದ ಕಾಳಿ ಸರೋವರ ಹೆಸರು ಹೊಂದಿರುವ ಬಂಟ್ವಾಳದ ಕಲ್ಕುಟ ಕೆರೆ. ರಾಮನಗರದ ಚಿಕ್ಕಲಾಚಮ್ಮರವರು ತಮ್ಮ ಸ್ವಂತ ಜಮೀನನ್ನು ದಾನಮಾಡಿ ನಿರ್ಮಿಸಿ ಕೊಟ್ಟ ಚಿಕ್ಕಲಾಚಮ್ಮನ ಕೆರೆ. ಔಷಧಿಯ ಗುಣಹೊಂದಿರುವ ಸಾಂಕ್ರಾಮಿಕ ರೋಗಗಳಿಗೆ ರಾಮಬಾಣವಾದ ಹನೂರು ಉಗೇನಿಯಾ ದೊಡ್ಡ ಕೆರೆ. ಕೃಷ್ಣರಾಜ ಒಡೆಯರ ಕಾಲದಲ್ಲಿ ನಿರ್ಮಾಣವಾದ ಬಿಲ್ಲು ಬಾಣಗಳು ಬಿದ್ದ ಜಾಗದಲ್ಲಿ ನಿರ್ಮಾಣವಾದ ಕೆ.ಆರ್.ಪೇಟೆಯ ಬಿಲ್ಲರಾಮನಹಳ್ಳಿ ಕೆರೆ.
ಗುಡ್ಡದ ಮೇಲಿರುವ ಶ್ರೀ ರಂಗನಾಥಸ್ವಾಮಿಗೆ ಅಭಿಷೇಕಕ್ಕಾಗಿ ಬಳಸುತ್ತಿದ್ದ ಬಾವಿ ಕೆರೆಯಾಗಿ ಪರಿವರ್ತನೆಗೊಂಡ ಭದ್ರಾವತಿಯ ರಂಗನಾಥಪುರ ಕೆರೆ.ಪುನಶ್ಚೇತನಗೊಂಡ ಕೆರೆಗಳ ಮುಂದಿನ ನಿರ್ವಹಣೆಗಾಗಿ ಕೆರೆ ಸಮಿತಿ ಹಾಗೂ ಗ್ರಾಮಪಂಚಾಯಿತಿಗಳಿಗೆ ಜವಾಬ್ದಾರಿ ವಹಿಸಿಕೊಡಲಾಗುತ್ತಿದೆ. ಮುಖ್ಯವಾಗಿ ಕೆರೆಗಳ ಅತಿಕ್ರಮಣ ತಡೆಗಟ್ಟುವುದು, ಸ್ವಚ್ಛತೆಯನ್ನು ಕಾಪಾಡುವ ಕುರಿತಂತೆ ಮುಂದೆ ಇವರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.ಕೆರೆಗಳ ಸುತ್ತ ಅರಣ್ಯೀಕರಣಕ್ಕಾಗಿ ಮುಂದಿನ ಮಳೆಗಾಲದಲ್ಲಿ ಕೆರೆಯಂಗಳದಲ್ಲಿ ಗಿಡನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೆರೆ ಸಮಿತಿ, ಅರಣ್ಯ ಇಲಾಖೆ, ಗ್ರಾ.ಪಂ. ಸಹಭಾಗಿತ್ವದಲ್ಲಿ ಪ್ರಾದೇಶಿಕವಾರು ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಕೆರೆಯ ಸುತ್ತ ನೆಡಲಾಗುವುದು.ಹೆಸರೇ ಸೂಚಿಸುವಂತೆ ನಮ್ಮೂರು-ನಮ್ಮಕೆರೆ ಜನಸಹಭಾಗಿತ್ವದ ಕಾರ್ಯಕ್ರಮವಾಗಿದೆ. ಪ್ರಸ್ತುತ ವರ್ಷ ಯೋಜನೆಯ 13.44 ಕೋಟಿ ರು. ಅನುದಾನದಲ್ಲಿ ರಾಜ್ಯಾದ್ಯಂತ ಒಟ್ಟು 193 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಈ ಭಾರಿ ನಡೆದ ಕೆರೆಗಳ ಪುನಶ್ಚೇತನ ಕಾರ್ಯದಲ್ಲಿ ರೈತರು ಉತ್ಸಾಹದಿಂದ ಹೂಳು ಸಾಗಾಟದಲ್ಲಿ ಭಾಗವಹಿಸಿದರು. ಫಲವತ್ತಾದ ಹೂಳನ್ನು ತಮ್ಮ ಹೊಲಗದ್ದೆಗಳಿಗೆ ಸಾಗಿಸಿ, ಕೆರೆ ಅಭಿವೃದ್ಧಿ ಕೆಲಸದಲ್ಲಿ ಕೈ ಜೋಡಿಸಿ ಊರ ಕೆರೆಯ ಪುನರ್ ನಿರ್ಮಾಣ ಕಂಡು ಸಂಭ್ರಮಿಸಿದರು. ಕಾಮಗಾರಿ ಸಂದರ್ಭ ಸ್ವಾಮೀಜಿಗಳು, ಸಚಿವರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿ ಮೆಚ್ಚಿ ಪ್ರೋತ್ಸಾಹಿಸಿರುವುದು ವಿಶೇಷವಾಗಿತ್ತು ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್‍ಕುಮಾರ್ ಎಸ್.ಎಸ್.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.