ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯ ನಿವೃತ್ತ ಉಪಕುಲಾಧಿಪತಿ ಪ್ರೊ.ಮಾರ್ತಾಂಡ ವರ್ಮ ಶಂಕರನ್ ವಲಿಯಥಾನ್ (90) ಬುಧವಾರ ರಾತ್ರಿ ಮಣಿಪಾಲದಲ್ಲಿ ನಿಧನರಾದರು.ಡಾ. ಎಂ.ಎಸ್. ವಲಿಯಥಾನ್ ಅವರು ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಮತ್ತು ಶಿಕ್ಷಣ ತಜ್ಞರಾಗಿದ್ದರು. ಅವರು ತಿರುವನಂತಪುರದ ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದರು ಮತ್ತು ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರ್ಗ್, ಇಂಗ್ಲೆಂಡ್ ಮತ್ತು ಕೆನಡಾದಿಂದ ಫೆಲೋಶಿಪ್ ಪಡೆದಿದ್ದರು.
ಅವರು ತಿರುವನಂತಪುರದಲ್ಲಿ ಶ್ರೀ ಚಿತ್ರ ತಿರುನಾಳ್ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿ ಇಪ್ಪತ್ತು ವರ್ಷ ಹೃದಯ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರಾಗಿ ಮತ್ತು ನಿರ್ದೇಶಕರಾಗಿ ಕರ್ತವ್ಯ ಸಲ್ಲಿಸಿದ್ದರು. ಡಿಸ್ಪೋಸಬಲ್ ಬ್ಲಡ್ ಬ್ಯಾಗ್ ಮತ್ತು ಟಿಲ್ಟಿಂಗ್ ಡಿಸ್ಕ್ ಹೃದಯ ಕವಾಟದಂತಹ ವೈದ್ಯಕೀಯ ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಕೊಡುಗೆಯು ಭಾರತದ ವೈದ್ಯಕೀಯ ಸಾಧನಗಳ ಉದ್ಯಮಕ್ಕೆ ಅಡಿಪಾಯವನ್ನು ಹಾಕಿತ್ತು.ಪ್ರೊ. ವಲಿಯಾಥನ್, 1993ರಿಂದ ಮಾಹೆಯ ಮೊದಲ ಉಪಕುಲಪತಿಯಾಗಿ ಕಾರ್ಯನಿರ್ವಹಸಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಕ್ಕೆ ಭಾಜನರಾಗಿದ್ದರು. ಪದ್ಮವಿಭೂಷಣ (2005), ಪದ್ಮಶ್ರೀ (2002), ಡಾ. ಬಿ.ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಹಂಟೇರಿಯನ್ ಪ್ರೊಫೆಸರ್‌ಶಿಪ್, ಫ್ರೆಂಚ್ ಸರ್ಕಾರದಿಂದ ಚೆವಲಿಯರ್ ಆಫ್ ದಿ ಆರ್ಡರ್ ಆಫ್ ಪಾಮ್ಸ್ ಅಕಾಡೆಮಿಕ್ಸ್, ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ವೈದ್ಯಕೀಯ ಶಿಕ್ಷಣಕ್ಕಾಗಿ ಡಾ. ಸ್ಯಾಮ್ಯುಯೆಲ್ ಪಿ. ಆಸ್ಪರ್ ಪ್ರಶಸ್ತಿ ಮತ್ತು ಭಾರತೀಯ ವೈದ್ಯಕೀಯ ಸಂಘದಿಂದ ಜೀವಮಾನ ಸಾಧನೆ ಪ್ರಶಸ್ತಿಗಳು ಅವರಿಗೆ ಸಂದಿವೆ.
ಪ್ರೊ. ವಲಿಯಥಾನ್ ಅವರ ನಿಧನಕ್ಕೆ ಮಾಹೆ ಸಂತಾಪವನ್ನು ವ್ಯಕ್ತಪಡಿಸಿದೆ ಮತ್ತು ವೈದ್ಯಕೀಯ ವಿಜ್ಞಾನ ಮತ್ತು ಶಿಕ್ಷಣಕ್ಕಾಗಿ ಅವರ ಶ್ರೇಷ್ಠತೆ ಮತ್ತು ಸಮರ್ಪಣೆ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ಹೇಳಿದೆ.